ವೋಟ್ ಕೊಡಿ ಅಂತಾ ಸುಮಲತಾ ಕೇಳಿದ್ರೆ, ಮುಖಕ್ಕೆ ಮಂಗಳಾರತಿ ಮಾಡಿ ಕಳ್ಸಿ: ಸಿದ್ದರಾಮಯ್ಯ

ಮಂಡ್ಯ: ದೇವೇಗೌಡ್ರು, ನಾನೂ ಕಾವೇರಿಗಾಗಿ ಹೋರಾಡಿದ್ದೇವೆ. ಅವಾಗ ಈಯಮ್ಮ ಬಂದಿದ್ದಳಾ, ಹೋರಾಟ ಮಾಡಿದಳಾ. ನಾನು ಹೇಳ್ತಿದ್ದೇನೆ ವೋಟ್ ಕೊಡಿ ಅಂತಾ ಕೇಳಿದ್ರೆ ಮುಖಕ್ಕೆ ಮಂಗಳಾರತಿ ಮಾಡಿ ಕಳಿಸಿ. ನನ್ನ ಹೋರಾಟ ಕೋಮುವಾದಿಗಳ ವಿರುದ್ಧ. ನಾನು ಕೋಮುವಾದಿ ಬಿಜೆಪಿ ಬೆಂಬಲಿತ ಅಭ್ಯರ್ಥಿಯನ್ನ ಬೆಂಬಲಿಸುವ ಪ್ರಶ್ನೆಯೇ ಇಲ್ಲ. ನನ್ನ ಸ್ನೇಹಿತರು, ಸಂಬಂಧಿಕರು ಅಂತಾ ಹೇಳಿಕೊಂಡು ಬಂದರೂ ಮಂಗಳಾರತಿ ಮಾಡಿ ಕಳಿಸಿ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಸುಮಲತಾ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಜಿಲ್ಲೆಯ ನಾಗಮಂಗಲ ಮತ ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿ ನಿಖಿಲ್​​ ಕುಮಾರಸ್ವಾಮಿ ಪರ ಚುನಾವಣಾ ಪ್ರಚಾರ ನಡೆಸಿದರು. ಪ್ರಚಾರದ ವೇಳೆ ಮಾತನಾಡಿದ ಮಾಜಿ ಸಿದ್ದರಾಮಯ್ಯ, ನಮಗೆ ರಾಜಕೀಯವಾಗಿ ಏನೇ ಭಿನ್ನಾಭಿಪ್ರಾಯಗಳಿದ್ದರೂ ದೇಶದ, ಪ್ರಜಾತಂತ್ರದ ರಕ್ಷಣೆಗಾಗಿ ಇವತ್ತು ಜೆಡಿಎಸ್ ಜೊತೆ ಸರ್ಕಾರ ರಚಿಸಿದ್ದೇವೆ. 28 ಲೋಕಸಭಾ ಕ್ಷೇತ್ರಗಳಲ್ಲಿ ಮೈತ್ರಿ ಅಭ್ಯರ್ಥಿ ಗೆಲುವಿಗೆ ತೀರ್ಮಾನ ಮಾಡಿದ್ದೇವೆ. ಮಂಡ್ಯ ಹಾಲಿ‌ ಜೆಡಿಎಸ್ ಸಂಸದರಿರುವ ಕ್ಷೇತ್ರ. ಉಪ ಚುನಾವಣೆಯಲ್ಲಿ ನಾನು ಬಂದು ಕಾಂಗ್ರೆಸ್ ಜೆಡಿಎಸ್ ಎರಡು‌ ಪಕ್ಷದವರನ್ನ‌ ಕೂರಿಸಿಕೊಂಡು ಶಿವರಾಮೇಗೌಡ ಅವರಿಗೆ ಬೆಂಬಲಿಸುವಂತೆ ಸುದ್ದಿಗೋಷ್ಠಿ ಮಾಡಿದೆ. ಅದರಂತೆ ಶಿವರಾಮೇಗೌಡ ಅಧಿಕ ಮತಗಳ ಅಂತರದಿಂದ ಗೆದ್ದರು. ಉಪ ಚುನಾವಣೆಯಲ್ಲಿ‌ ಮೈತ್ರಿ ಮಾಡಿಕೊಂಡಾಗ ಅಧಿಕ‌ ಅಂತರದಿಂದ ಮೈತ್ರಿ ಅಭ್ಯರ್ಥಿಗಳು ಗೆದ್ದಿದ್ದಾರೆ. ಪಕ್ಷೇತರ ಅಭ್ಯರ್ಥಿ ಏನೆ ಹೇಳಿದರೂ ನಿಖಿಲ್ ಕುಮಾರಸ್ವಾಮಿ ಎರಡು ಲಕ್ಷ ಮತಗಳ ಅಂತರದಿಂದ ಗೆಲ್ಲುತ್ತಾರೆ. ಇಡೀ ರಾಜ್ಯದಲ್ಲಿ ಬಿಜೆಪಿ ಗೆಲ್ಲಬಾರದು. ಮಂಡ್ಯದಲ್ಲಿ ಉದ್ದೇಶಪೂರ್ವಕವಾಗಿ ಬಿಜೆಪಿ ಅಭ್ಯರ್ಥಿ ಹಾಕಿಲ್ಲ. ಮೈಸೂರಿಗೆ ಬಂದಿದ್ದ ಮೋದಿ‌ ಪಕ್ಷೇತರ ಅಭ್ಯರ್ಥಿ ಬೆಂಬಲಿಸಲು ಹೇಳಿದ್ದಾರೆ. ಬಿಜೆಪಿ ಬೆಂಬಲಿತ ಅಭ್ಯರ್ಥಿಯನ್ನ ಬೆಂಬಲಿಸಬೇಡಿ. ಮೋದಿ ರೈತರ ಸಮಸ್ಯೆ ಬಗೆಹರಿಸುವ ಪ್ರಾಮಾಣಿಕ ಪ್ರಯತ್ನ ಮಾಡಲಿಲ್ಲ. ನಾನೇ ಹೋಗಿ ಗೋಗರೆದರೂ ಆ‌ ಮನುಷ್ಯನಿಗೆ ಸ್ವಲ್ಪನು ರೈತರ ಬಗ್ಗೆ ಕರುಣೆ ಬರಲಿಲ್ಲ. ಮೋದಿ ಸಂಘ ಪರಿವಾರದಿಂದ ಬಂದವರು, ಅವರಿಗೆ ಬಡವರ ಬಗ್ಗೆ ಕಾಳಜಿ ಇರಲ್ಲ. ಬಿಜೆಪಿ ಅಲ್ಪಸಂಖ್ಯಾತರಿಗೆ, ಹಿಂದುಳಿದವರಿಗೆ ಒಂದೇ ಒಂದು ಟಿಕೆಟ್ ಕೊಟ್ಟಿಲ್ಲ. ಕುರುಬರಿಗೆ ಒಂದೇ ಒಂದು ಸೀಟು ಕೊಟ್ಟಿಲ್ಲ. ಬಿಜೆಪಿ ಬೆಂಬಲಿತ ಪಕ್ಷೇತರ ಅಭ್ಯರ್ಥಿಗೆ ಹಿಂದುಳಿದವರು ಮತ ಹಾಕಬಾರದು. ಸುಮಲತಾ ಸೋಲಿಸಿ ಮೈತ್ರಿ ಅಭ್ಯರ್ಥಿ ನಿಖಿಲ್​​ ಗೆಲ್ಲಿಸುವಂತೆ‌ ಮತದಾರರಲ್ಲಿ ಮನವಿ ಮಾಡಿಕೊಂಡರು. ನಾನು ₹ 50 ಸಾವಿರ ಸೊಸೈಟಿ ಸಾಲ ಮನ್ನಾ ಮಾಡಿದೆ. ಕುಮಾರಸ್ವಾಮಿ ಮೈತ್ರಿ ಸರ್ಕಾರದ ಸಿಎಂ ಆಗಿ 44 ಲಕ್ಷ ರೈತರಿಗೆ ₹45 ಸಾವಿರ ಕೋಟಿ ಬೆಳೆ ಸಾಲ ಮನ್ನಾ ಮಾಡಿದ್ದಾರೆ. ಆದರೆ ಬಿ.ಎಸ್‌. ಯಡಿಯೂರಪ್ಪ ಈ ಹಿಂದೆ ಸಾಲ‌ ಮನ್ನಾ ಮಾಡಿ ಅಂದ್ರೆ ನೋಟ್ ಪ್ರಿಂಟ್ ಮಾಡೋ ಮಿಷನ್ ಇಲ್ಲ ಅಂದಿದ್ರು.


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv