ಬಿಜೆಪಿಯವ್ರು ಮತ್ತೆ ಮುಖಭಂಗ ಅನುಭವಿಸಲಿದ್ದಾರೆ: ಸಿದ್ದರಾಮಯ್ಯ

ಹಾವೇರಿ: ನಮ್ಮ ಸಮಿಶ್ರ ಸರ್ಕಾರ ಸುಭದ್ರವಾಗಿದೆ. ಯಾವ ಶಾಸಕರು ಬಿಜೆಪಿಗೆ ಹೋಗಲ್ಲ. ಈ ಹಿಂದೆ ಯಡಿಯೂರಪ್ಪ ಬಹುಮತವಿಲ್ಲದೇ ಸರ್ಕಾರ ರಚಿಸಿ ಮುಖಭಂಗ ಮಾಡಿಸಿಕೊಂಡಿದ್ದಾರೆ ಎಂದು ಹಾವೇರಿಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ನಿಜಶರಣ ಅಂಬಿಗರ ಚೌಡಯ್ಯನವರ ಶರಣ ಸಂಸ್ಕೃತಿ ಉತ್ಸವದಲ್ಲಿ ಮಾತನಾಡಿದ ಅವರು, ಮೈತ್ರಿ ಸರ್ಕಾರ ಬಿಳುತ್ತೆ ಎಂದು ಬಿಜೆಪಿ ನಾಯಕರು ಹಗಲುಕನಸು ಕಾಣುತ್ತಿದ್ದಾರೆ. ಮೊದಲಿನಂತೆ ಪ್ರಯತ್ನ ಮಾಡಿ ಮತ್ತೆ ಮುಖಭಂಗ ಮಾಡಿಕೊಳ್ಳಲಿದ್ದಾರೆ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ಮೋದಿ ಕುಮಾರಸ್ವಾಮಿಗೆ ಕ್ಲರ್ಕ್ ಅಂದ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಎಲ್ಲಾ ಸ್ಥಾನಗಳಿಗೂ ಅದರದೇ ಆದಂತಹ ಗೌರವವಿರುತ್ತದೆ. ಆದರೆ ದೇಶದ ಪ್ರಧಾನಿ ಆದಂತಹ ಮೋದಿ ಅವರು ಈ ರೀತಿ ಹೇಳಿಕೆ ನೀಡಿದ್ದು ಸರಿಯಲ್ಲ. ಒಂದು ರಾಜ್ಯದ ಮುಖ್ಯಮಂತ್ರಿಗೆ, ಪ್ರಧಾನಿಯಾಗಿ ಈ ರೀತಿ ಹೇಳಿಕೆ ನೀಡಿದ್ದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು.