ಸುಮಲತಾ ನನ್ನ ಹೆಸರು ಬಳಸಿಕೊಂಡ್ರೆ ತಕ್ಕ ಶಾಸ್ತಿ ಮಾಡಿ: ಸಿದ್ದರಾಮಯ್ಯ

ಮೈಸೂರು: ಮಂಡ್ಯ ಲೋಕಸಭಾ ಕ್ಷೇತ್ರದ ಮೈತ್ರಿ ಪಕ್ಷದ ಅಭ್ಯರ್ಥಿಯಾಗಿ ನಿಖಿಲ್ ಸ್ಪರ್ಧೆ ಮಾಡಿದ್ದಾರೆ. ಅವರಿಗೆ ಎಲ್ಲಾ ಮತ ಹಾಕ ಬೇಕು. ನಮ್ಮಲ್ಲಿ ಹಿಂದೆ ಸಣ್ಣ ಪುಟ್ಟ ಭಿನ್ನಾಭಿಪ್ರಾಯ ಇತ್ತು. ಅದನ್ನೂ ಮರೆತು ನಾವು ಈಗ ಒಟ್ಟಾಗಿ ಬಂದಿದ್ದೇವೆ. ನೀವೂ ನಿಮ್ಮಲ್ಲಿ ಇರುವ ಭಿನ್ನಾಭಿಪ್ರಾಯ ಮರೆತು ಬಿಡಿ. ನಿಖಿಲ್‌ನನ್ನು ಗೆಲ್ಲಿಸಿ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಮತದಾರರಲ್ಲಿ ಮನವಿ ಮಾಡಿಕೊಂಡರು.

ಕೆ.ಆರ್.ನಗರ ನಡೆದ ಜಂಟಿ ಸಮಾವೇಶದಲ್ಲಿ ಮಾತನಾಡಿದ ಸಿದ್ದರಾಮಯ್ಯ, ಕಳೆದ ಬಾರಿ ಕೆಆರ್ ನಗರದಲ್ಲಿ 27 ಸಾವಿರ ಲೀಡ್ ಕೊಟ್ಟಿದ್ದಿರಾ. ಈಗ 50 ಸಾವಿರ ಮತಗಳ ಲೀಡ್ ಕೊಡಬೇಕು. ಇಲ್ಲಿ ಸಾರಾ ಮಹೇಶ್, ರವಿಶಂಕರ್ ಮುಖ್ಯ ಅಲ್ಲ. ನಾನು ಮತ್ತು ದೇವೇಗೌಡ ಅವರು ಕೂಡ ಮುಖ್ಯ ಅಲ್ಲ. ನಮ್ಮ ಮೈತ್ರಿಯೇ ಮುಖ್ಯ. ಹೀಗಾಗಿ ಎಲ್ಲರೂ ನಿಖಿಲ್‌ಗೆ ಮತ ಹಾಕಿ ಗೆಲ್ಲಿಸ ಬೇಕು ಎಂದರು.

ಮಂಡ್ಯದಲ್ಲಿ ಬಿಜೆಪಿ ಅವರು ಅಭ್ಯರ್ಥಿಯನ್ನೇ ಹಾಕಿಲ್ಲ. ಅವರು ಪಕ್ಷೇತರ ಅಭ್ಯರ್ಥಿಗೆ ಬೆಂಬಲ‌ ನೀಡಿದ್ದಾರೆ. ಅಲ್ಲಿಗೆ ಸುಮಲತಾ ಬಿಜೆಪಿ ಅಭ್ಯರ್ಥಿ ಅನ್ನೋ ಹಾಗಿದೆ. ಹೀಗಾಗಿ ಅವರಿಗೆ ಮತ ಹಾಕಬೇಡಿ. ನಿಮ್ಮ ಮತ ನಿಖಿಲ್‌ಗೆ ಹಾಕಬೇಕು. ಪಕ್ಷೇತರ ಅಭ್ಯರ್ಥಿ ವಿಚಾರವಾಗಿ ನನ್ನ ಹೆಸರು ಬಳಸಿಕೊಂಡ್ರೆ ತಕ್ಕ ಶಾಸ್ತಿ ಮಾಡಿ. ನಾನು ಮೈತ್ರಿ ಅಭ್ಯರ್ಥಿ ಪರವಾಗಿ ಭಾಷಣ ಮಾಡಿದ್ದೀನಿ. ಅವರ ಪರವಾಗಿ ಓಟು ಕೇಳುತ್ತಿದ್ದೇನೆ. ಕೆಲವರು ನಾನು ಇಲ್ಲಿ ಭಾಷಣ ಮಾಡಿದ್ರು ಅಲ್ಲಿ ಪಕ್ಷೇತರ ಅಭ್ಯರ್ಥಿಗೆ ಸಹಾಯ ಮಾಡುತ್ತೇನೆ ಅಂತಾರೆ. ಅದಕ್ಕೆ ಯಾರು ಕಿವಿಗೊಡಬಾರದು. ಎಲ್ಲರೂ ನಿಖಿಲ್ ಪರವಾಗಿ ಓಟು ಹಾಕಿ‌. ಮೈತ್ರಿ ಅಭ್ಯರ್ಥಿಯನ್ನ ಗೆಲ್ಲಿಸಿ ಎಂದು ಹೇಳಿದರು.


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv