ಯಾಕೆ ಮೋದಿ ಅಂತಾ ಕೇಳಿದ್ರೆ ಯುವಕರಿಂದ ಉತ್ತರ ಇಲ್ಲ: ಸಿದ್ದರಾಮಯ್ಯ

ಮೈಸೂರು: ನಾನು ಜಿ.ಟಿ.ದೇವೇಗೌಡರಿಗೆ ಹೇಳಿದೆ ಕಾರ್ಯಕರ್ತರ ಗೊಂದಲ ನಿವಾರಣೆ ಮಾಡೋಣ ಅಂತಾ. ಇಬ್ಬರು ಜತೆಯಲ್ಲಿಯೇ ಹೋದ್ರೆ ಗೊಂದಲ ನಿವಾರಣೆ ಆಗುತ್ತೆ, ಇಲ್ಲವಾದ್ರೆ ಅದು ಹಾಗೇ ಉಳಿದು ಕೊಳ್ಳುತ್ತೆ ಅಂತಾ ಹೇಳಿದ್ದೆ. ಅದಕ್ಕೆ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಒಂದು, ನಾಲ್ಕು ಕಡೆ ಸಮಾವೇಶ ಮಾಡೋಣ ಅಂತಾ ಹೇಳಿದ್ದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಚಾಮುಂಡೇಶ್ವರಿ ಕ್ಷೇತ್ರದ ಜಯಪುರದಲ್ಲಿ ನಡೆಯುತ್ತಿರುವ ಜೆಡಿಎಸ್-ಕಾಂಗ್ರೆಸ್ ಜಂಟಿ ಸಮಾವೇಶದಲ್ಲಿ ಮಾತನಾಡಿದ ಸಿದ್ದರಾಮಯ್ಯ, ನಾವು ರಾಜ್ಯದಲ್ಲಿ ಮೈತ್ರಿ ಸರ್ಕಾರ ಮಾಡ್ಕೊಂಡಿದ್ದೇವೆ. ಜೆಡಿಎಸ್​​​ನವ್ರು 12 ಜನ, ಕಾಂಗ್ರೆಸ್ 22 ಜನ ಸಚಿವ ಸ್ಥಾನ ಹಂಚಿಕೆ ಮಾಡ್ಕೊಂಡಿದ್ದೇವೆ.  ಹಾಗಾಗಿ ಸಮ್ಮಿಶ್ರ ಸರ್ಕಾರದಲ್ಲಿ ನಾವು ಬೇರೆ, ನೀವು ಬೇರೇ ಅಂತಾ ಹೋದ್ರೆ ಬಿಜೆಪಿಯನ್ನು ಸೋಲಿಸಲು ಅಸಾಧ್ಯ ಎಂದರು.

ಯಾಕೆ ಮೋದಿ ಅಂತಾ ಕೇಳಿದ್ರೆ ಯುವಕರಿಂದ ಉತ್ತರ ಇಲ್ಲ
ಲೋಕಸಭಾ ಚುನಾವಣೆಯಲ್ಲಿ ಸೀಟ್ ಹಂಚಿಕೆ ಮಾಡಿಕೊಂಡಿರೋದು ಬಿಜೆಪಿಯನ್ನು ಸೋಲಿಸಲು. ನಾನು, ದೇವೇಗೌಡರು, ಕುಮಾರಸ್ವಾಮಿ ಅದೆಷ್ಟೋ ಹೋರಾಟ ಮಾಡಿದ್ದೇವೆ. ದೇಶ ಮೊದಲು, ಆ ಮೇಲೆ ಪಕ್ಷ ತದನಂತರ ನಾವು. ದೇಶಕ್ಕೆ ಸ್ವಾತಂತ್ರ್ಯ ಬಂದಿರೋದಕ್ಕೆ ನಾವೆಲ್ಲ ಮಂತ್ರಿಗಳಾಗಿರೋದು. ಇಲ್ಲ ಅಂದಿದ್ರೆ ಗುಲಾಮರಾಗಿರುತ್ತಿದ್ದೇವು. ಈಗ ಕೆಲ ಯುವಕರು ಹೇಳ್ತಾರೆ ಮೋದಿ ಮೋದಿ ಎಂದು. ಏಕೆ ಮೋದಿ ಅಂತಿರಾ ಅಂತ ಕೇಳಿದ್ರೆ ಅವರಕಡೆಯಿಂದ ಯಾವುದೇ ಉತ್ತರ ಇಲ್ಲ ಅಂತಾ ಹೇಳಿದರು.

ಕಾರ್ಯಕರ್ತರಿಗೆ ಸಿದ್ದು ರಾಜಕೀಯ ಪಾಠ
ರಾಜಕೀಯದಲ್ಲಿ ಯಾರೂ ಪರ್ಮನೆಂಟ್ ವೈರಿಗಳು ಇರಲ್ಲ. ಯಾರೂ ಪರ್ಮನೆಂಟ್ ಸ್ನೇಹಿತರು ಇರಲ್ಲ. ಪಾಲಿಟಿಕ್ಸ್ ಈಸ್ ನಾಟ್ ಮ್ಯಾಥಮೆಟಿಕ್ಸ್ ಇಟ್ ಈಸ್ ಕೆಮಿಸ್ಟ್ರಿ. ಟು ಪ್ಲಸ್ ಟು ಇಕ್ವಾಲ್ ಫೋರ್ ಅಲ್ಲ. ಅದು ಥ್ರೀ ಆದ್ರೂ‌ ಆಗಬಹುದು ಅದು ಫೈ ಆದ್ರೂ ಆಗಬಹುದು. ಹಾಗಾಗಿ ಈ ವಿಚಾರವನ್ನು ಎಲ್ಲರೂ ಗಮನದಲ್ಲಿಟ್ಟುಕೊಳ್ಳಬೇಕು. ನಾವೇಲ್ಲವರೂ ಒಟ್ಟಾಗಿ ಇದ್ದೋರು. ಶೇ. 95 ಎಲ್ಲರೂ, ಎಲ್ಲರಿಗೂ ಸಹ ಪರಿಚಯ ಇದೆ ಎಂದ್ರು.

ಕುಂಬಳ ಕಾಯಿ ಕಳ್ಳ ಅಂದ್ರೆ ಹೆಗಲ ಮುಟ್ಟಿ ನೋಡ್ಕೋತಿಯಾ
ಕೆಲವರು ಹೇಳ್ತಾರೆ ಸಿದ್ದರಾಮಯ್ಯ ಒಕ್ಕಲಿಗರ ವಿರೋಧಿ, ಲಿಂಗಾಯತರ ವಿರೋಧಿ ಅಂತಾರೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೆಸರಿಟ್ಟಿದ್ದು ಯಾರು? ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರ ನಿಗಮನ ಮಾಡಿದ್ದು ಯಾರು? ಎಂದು ವೇದಿಕೆ ಮೇಲೆ‌ ಇದ್ದವರ ಮುಖ ನೋಡಿದರು. ಆಗ ವೇದಿಕೆ ಮೇಲೆ ಇದ್ದ ಜೆಡಿಎಸ್ ಕಾರ್ಯಕರ್ತರು ನಾವು ಹೇಳಿಲ್ಲ ಅಂತಾ ಹೇಳಿದರು.  ನಾನು ಕೇಳಿದ್ದು ನಿನ್ನಲ್ಲಪ್ಪ ಕುಂಬಳ ಕಾಯಿ ಕಳ್ಳ ಅಂದ್ರೆ ಹೆಗಲು ಮುಟ್ಟಿ ಏಕೆ ನೋಡ್ಕೋತಿಯಾ ಅಂತಾ ಹಾಸ್ಯ ಚಟಾಕಿ ಹಾರಿಸಿದರು. ಕೆಲವರು ಲಿಂಗಾಯತ ವಿರೋಧಿ ಅಂತಾರೆ. ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಬಸವಣ್ಣನ ಫೋಟೋ ಇಡ್ಸಿದ್ದು ಯಾರು? ವಿಜಯಪುರ ಮಹಿಳಾ ವಿವಿಗೆ ಅಕ್ಕಮಹಾದೇವಿ ಅಂತಾ ಹೆಸರಿಟ್ಟಿದ್ದು ಯಾರು? ನಾನು ಎಲ್ಲ ಯೋಜನೆಗಳನ್ನು ಮಾಡಿದ್ದು, ನನಗಾಗಿ ನನ್ನ ಕುಟುಂಬಕ್ಕಾಗಿ ಅಲ್ಲ. ನಾನು ಸಂವಿಧಾನದ ಮೇಲಿನ ನಂಬಿಕೆಯಿಂದ ಬಡವರ ಅಭಿವೃದ್ಧಿಗಾಗಿ ಎಂದರು.

ಮೋದಿ ಹುಟ್ಟೋಕು ಮೊದ್ಲೇ ಪಾಕ್ ಜೊತೆ ಯುದ್ಧ ನಡೆದಿತ್ತು
ಪ್ರಧಾನಿ ಮೋದಿ, ಸಂಸದ ಪ್ರತಾಪ್ ಸಿಂಹರ ನಡುವೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಸುಳ್ಳು ಹೇಳಬೇಡಿ ಅಂತಾ ಹೇಳೋದು ಅಷ್ಟೇ. ನಾನು ಪಾಕಿಸ್ತಾನದ ಮೇಲೆ ಯುದ್ಧ ಮಾಡಿದ್ದೇ ಅಂತಾನೇ. ಪಾಕಿಸ್ತಾನದ ಜೊತೆ ಮೊದಲ ಯುದ್ಧ ನಡೆದಾಗ ಮೋದಿ ಹುಟ್ಟಿರಲೇ ಇಲ್ಲ. ನಾನೇ ದೇಶ ರಕ್ಷಣೆ ಮಾಡೋದು ಬೇರೇ ಯಾರೂ ಅಲ್ಲ ಅಂತಾರೇ. ನಾವೆಲ್ಲ ಹಾಗಿದ್ದರೆ ಯಾರು? ಅಚ್ಛೆ ದಿನ್ ಆಯೇಗಾ ಅಂತೀರಾ. ನರೇಂದ್ರ ಮೋದಿ ತಂದಿರುವ ಕಾರ್ಯಕ್ರಮ ನಿಮ್ಮ ಮನೆಗೆ ತಲುಪಿದ್ಯಾ? ಕೈ ಎತ್ತಿ ಎಂದು ಸಮಾವೇಶದಲ್ಲಿ ಕಾರ್ಯಕರ್ತರಿಗೆ ಸಿದ್ದರಾಮಯ್ಯ ಪ್ರಶ್ನಿಸಿದರು.

 


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv