ಪ್ರತ್ಯೇಕ ಧರ್ಮ; ಈಶ್ವರ ಖಂಡ್ರೆ, ಶಾಮನೂರ ಸಹ ಅಂದು ವಿರೋಧ ಮಾಡಲಿಲ್ಲ -ಸಿದ್ದರಾಮಯ್ಯ

ಬಾಗಲಕೋಟೆ: ನಾನು ಸಿಎಂ ಇದ್ದಾಗ ಅನೇಕ ಜಯಂತಿಗಳನ್ನ ಮಾಡಿದೆ. ಜಾತಿ ಸಮಾವೇಶ ಮಾಡ್ತಾರೆ ಅಂತಾ ನನ್ನ ಮೇಲೆ ಅನೇಕರು ಟೀಕೆ ಮಾಡ್ತಾರೆ. ಆ ತರಹ ಎಲ್ಲ ಟೀಕೆ ಮಾಡೋರೆ ಜಾತಿವಾದಿಗಳು.. ನಾನಲ್ಲ.. ಬಸವಾದಿ ಶರಣರ ಕನಸು ಜಾತ್ಯಾತೀತ ಸಮಾಜ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಜಿಲ್ಲೆಯ ಹುನಗುಂದದಲ್ಲಿ ಪಂಚಮಸಾಲಿ ಸಮಾವೇಶ ಹಾಗೂ ಚೆನ್ನಮ್ಮ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಸಿದ್ದರಾಮಯ್ಯ, ಇವತ್ತು ಇವನ್ಯಾರು? ಅನ್ನುವ ಒಂದು ವರ್ಗ ಇದೆ. ಇನ್ನೊಂದು, ಇವರು ನಮ್ಮವರು! ಎನ್ನುವ ವರ್ಗವೂ ಇದೆ. ಆದ್ರೆ ಎಲ್ಲರೂ ನಮ್ಮವರು ..!! ಎನ್ನುವ ಸಮಾಜ ಆಗಬೇಕು. ಬೌದ್ಧ, ಜೈನ ಧರ್ಮದಂತೆ ಲಿಂಗಾಯತ ಸಹ ಪ್ರತ್ಯೇಕ ಧರ್ಮ. ಇತಿಹಾಸ ಗೊತ್ತಿಲ್ಲದವರು ಇತಿಹಾಸ ತಿರುಚುತ್ತಾರೆ. ನನಗೆ ಲಿಂಗಾಯತ ಪ್ರತ್ಯೇಕ ಧರ್ಮ ಮಾಡುವ ಯೋಜನೆಯೇ ಇರಲಿಲ್ಲ. ನಾನು ಬಸವಣ್ಣನ ಅನುಯಾಯಿ. ಬಸವ ಜಯಂತಿ ದಿನ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ್ದೆ. ಎಲ್ಲ ಸರ್ಕಾರಿ ಕಚೇರಿಯಲ್ಲಿ ಬಸವಣ್ಣನ ಭಾವಚಿತ್ರ ಇರಬೇಕು ಅಂತಾ ಆದೇಶ‌ ಮಾಡಿದೆ.

ಲಿಂಗಾಯತರನ್ನು ಒಡೀತಾನೆ ಅಂತಿದ್ದೀರಿ. ಇದರಲ್ಲಿ ನನ್ನದೇನು ತಪ್ಪು?
ವಿಜಯಪುರ ಮಹಿಳಾ ವಿವಿಗೆ‌ ಅಕ್ಕಮಹಾದೇವಿ ಹೆಸರಿಡಬೇಕು ಅಂದ್ರು. ಸಂಪುಟದಲ್ಲಿ ತಂದು ಅದನ್ನು ಮಾಡಿಕೊಟ್ಟೆ. ಯಾರೂ ಮಾಡದ ಕೆಲಸವನ್ನ ಮಾಡಿದ್ದೀರಿ ಅಂತಾ ಶಾಮನೂರು ಶಿವಶಂಕ್ರಪ್ಪ ಸನ್ಮಾನ ಮಾಡಿದ್ರು. ಆಗಲೇ ವೀರಶೈವ ಲಿಂಗಾಯತ ಪ್ರತ್ಯೇಕ ಧರ್ಮ ಮಾಡಬೇಕು ಅಂದ್ರು. ನಾಲ್ಕೈದು ತರಹ ಅರ್ಜಿ ಕೊಟ್ರು. ಆಗ ನಾನೇನು ಮಾಡಬೇಕಿತ್ತು? ಸಂಪುಟಕ್ಕೆ ತಂದರು. ಆಗ ಯಾರೂ ವಿರೋಧ ಮಾಡಲಿಲ್ಲ. ಇದೇ ಈಶ್ವರ ಖಂಡ್ರೆ, ಶಾಮನೂರ ಸಹ ವಿರೋಧ ಮಾಡಲಿಲ್ಲ. ಈಗ ಎಲ್ಲ ಬಿಟ್ಟು ನನ್ನ ಹಾಕ್ಕೊಂಡು ಲಿಂಗಾಯತರನ್ನು ಒಡೀತಾನೆ ಅಂತಿದ್ದೀರಿ. ಇದರಲ್ಲಿ ನನ್ನದೇನು ತಪ್ಪು? ನನ್ನದು ತಪ್ಪಿಲ್ಲ ಅಂತೀರಿ.. ನೀವು ನನ್ನ ಜೊತೆ ಇರಬೇಕಲ್ವ? ಮತ್ತೆ ನನ್ನ ಹಾಕ್ಕೊಂಡು ಹೊಡಿತೀರಲ್ಲಪ್ಪ ಎಂದು ಸಿದ್ದರಾಮಯ್ಯ ಲಿಂಗಾಯತ ಪಂಚಮಸಾಲಿ ಸಮಾವೇಶದಲ್ಲಿ ಪ್ರಶ್ನೆ ಮಾಡಿದರು.

ಬಡವರು ಯಾವ ಜಾತಿಯಲ್ಲಿಯೇ ಇದ್ರು ಅವರ ಜೊತೆ ನಾನು ಇರುತ್ತೇನೆ
ರೈತರ ಸಾಲಮನ್ನಾ.. ಅನ್ನಭಾಗ್ಯ, ಕ್ಷೀರಭಾಗ್ಯ, ಕೃಷಿ ಹೊಂಡ ಯೋಜನೆಗಳನ್ನ ಜಾತಿ ನೋಡಿ ಮಾಡಿದ್ನಾ? ನನ್ನ ಬಗ್ಗೆ ಅಪಪ್ರಚಾರ ಮಾಡಿದ್ರು. ನನ್ನ ಬಗ್ಗೆ ಹೊಟ್ಟೆ ಉರಿ, ನಾನು ನಿಮ್ಮ ಜೊತೆ ಇರುತ್ತೇನೆ. ಬಡವರಿಗೆ ನ್ಯಾಯಾ ಕೊಡಲು ಇರುತ್ತೇನೆ. ಬಡವರು ಯಾವ ಜಾತಿಯಲ್ಲಿ ಇದ್ರು ಅವರ ಜೊತೆ ನಾನು ಇರುತ್ತೇನೆ ಎಂದು ಹೇಳಿದ್ದಾರೆ.