ಮೈತ್ರಿ ಸಭೆಗೆ ಗೈರಾಗುವ ಮ‌ೂಲಕ ಅಸಮಾಧಾನ ಹೊರಹಾಕಿದ ಕಾಂಗ್ರೆಸ್ ಮುಖಂಡರು

ಮಂಡ್ಯ: ಮಾಜಿ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಕಾಂಗ್ರೆಸ್-ಜೆಡಿಎಸ್ ಜಂಟಿ ಸಭೆಗೆ ಕಾಂಗ್ರೆಸ್ ಮುಖಂಡರು ಗೈರಾಗಿದ್ದಾರೆ. ಜಿಲ್ಲೆಯ ಮಳವಳ್ಳಿಯಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಗೆ ಮಾಜಿ ಸಚಿವ ನರೇಂದ್ರಸ್ವಾಮಿ ಗೈರಾಗುವ ಮ‌ೂಲಕ ಅಸಮಾಧಾನ ಹೊರಹಾಕಿದ್ದಾರೆ. ಸಭೆಯಲ್ಲಿ ಮಾತನಾಡಿದ ಸಿದ್ದರಾಮಯ್ಯ, ನಾನೂ ದೇವೇಗೌಡ್ರು 4 ದಿನಗಳಿಂದ ಮೈತ್ರಿ ಅಭ್ಯರ್ಥಿಗಳ ಪರವಾಗಿ ಮತಯಾಚನೆ ಮಾಡ್ತಿದ್ದೇವೆ. ಕರ್ನಾಟಕದಲ್ಲಿ ಕೋಮುವಾದಿ ಬಿಜೆಪಿ ಸೋಲಿಸಲು ಜೆಡಿಎಸ್‌-ಕಾಂಗ್ರೆಸ್ ಒಂದಾಗಿದೆ. ಮೋದಿಗೆ ಅಧಿಕಾರದ‌ ಪಿತ್ತ ತಲೆಗೆ ಹತ್ತಿದೆ. ಹಾಗಾಗಿ ಬಾಯಿಗೆ ಬಂದಹಾಗೇ ಮಾತನಾಡ್ತಾರೆ, ಮೈತ್ರಿ ಬಗ್ಗೆ ಮಹಾಘಟಬಂಧನ್ ಬಗ್ಗೆ ಗೇಲಿ ಮಾಡುತ್ತಾರೆ. ಮೋದಿ ಈಗಾಗಲೇ ಸರ್ವಾಧಿಕಾರಿ ರೀತಿ ವರ್ತಿಸುತ್ತಿದ್ದಾರೆ. ಕಾಂಗ್ರೆಸ್ 50-60 ವರ್ಷ ಅಧಿಕಾರ ನಡೆಸಿದೆ. ಯಾರು ಕೂಡ ಚುನಾವಣಾ ಸಂದರ್ಭದಲ್ಲಿ ವಿರೋಧ ಪಕ್ಷದ ಮುಖಂಡರ ಮನೆಗಳ ಮೇಲೆ ದಾಳಿ ನಡೆಸೊದು ಯಾವ ಕಾಲದಲ್ಲೂ ನಡೆದಿರಲಿಲ್ಲ. ಮೋದಿ ಐಟಿ ಇಲಾಖೆ ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ದಾಳಿ ಮಾಡಲಿ ನಮ್ಮದೇನು ತಕರಾರು ಇಲ್ಲ. ಆದ್ರೆ, ಬಿಜೆಪಿ ಅವರ ಮನೆ ಮೇಲೆ ಯಾಕೆ ದಾಳಿ ನಡೆಯುತ್ತಿಲ್ಲ. ಯಡಿಯೂರಪ್ಪ, ಶೋಭಾ ಕರಂದ್ಲಾಜೆ, ಈಶ್ವರಪ್ಪ ಮನೆ‌ಗಳ ಮೇಲೆಯೂ ದಾಳಿ ಮಾಡಬೇಕು ಅಲ್ವಾ? ಒಂದು ಬಾರಿ ಈಶ್ವರಪ್ಪ ಮನೆ ಮೇಲೆ ದಾಳಿ ನಡೆದಾಗ ನೋಟು‌ ಏಣಿಸುವ ಮಿಷನ್ ಸಿಕ್ಕಿತ್ತು. ಇವರೆಲ್ಲಾ ದೊಡ್ಡ ಖದೀಮರು ಎಂದು ಬಿಜೆಪಿ ವಿರುದ್ಧ ಗುಡುಗಿದರು.

ಬಿಜೆಪಿ ಅಧಿಕಾರಕ್ಕೆ ಬರಬಾರದು, ಮೋದಿ ಮತ್ತೆ ಪ್ರಧಾನಿ ಆಗಬಾರದು:
ಮಂಡ್ಯದಲ್ಲಿ ಅಭ್ಯರ್ಥಿ ಹಾಕದೇ ಪಕ್ಷೇತರ ಅಭ್ಯರ್ಥಿಗೆ ಬಿಜೆಪಿ ಬೆಂಬಲ ನೀಡಿದೆ. ಮೊನ್ನೆ ಮೈಸೂರಿಗೆ ಬಂದ ಮೋದಿ ಪಕ್ಷೇತರ ಅಭ್ಯರ್ಥಿಗೆ ಮತ ಹಾಕಿ ಎಂದಿದ್ದಾರೆ.
ಇವರು ಪಕ್ಷೇತರ ಅಭ್ಯರ್ಥಿ ಅಲ್ಲ ಬಿಜೆಪಿ ಅಭ್ಯರ್ಥಿ. ಈ ಬಿಜೆಪಿ ಅಭ್ಯರ್ಥಿಗೆ ಮತ ಹಾಕಬೇಕಾ..? ಬೇಡ ಬೇಡ. ಮೈತ್ರಿ ವ್ಯತ್ಯಾಸ ಇದೆ ಅಂತಾರೇ. ಅದಕ್ಕಾಗೇ ನಾವೂ ದೇವೇಗೌಡ್ರು ಒಟ್ಟಿಗೆ ಓಡಾಡ್ತಾ ಇದ್ದೇವೆ. ನಮಗೆ ಬಿಜೆಪಿ ಅಧಿಕಾರಕ್ಕೆ ಬರಬಾರದು, ಮೋದಿ ಮತ್ತೆ ಪ್ರಧಾನಿ ಆಗಬಾರದು. ಮೋದಿ ಮತ್ತೆ ಪ್ರಧಾನಿ ಆದ್ರೆ ಸಂವಿಧಾನ ಉಳಿಯಲ್ಲ. ಅನಂತ್ ಕುಮಾರ್ ಹೆಗಡೆ ಅಂತಾ ಒಬ್ಬ ಉತ್ತರ ಕನ್ನಡ ಜಿಲ್ಲೆ ಎಂಪಿ ಮಂತ್ರಿ ಇದಾನೆ. ಅವನು ಒಬ್ಬ ಮಂತ್ರಿಯಾಗಿ ಹೇಳ್ತಾನೆ. ನಾವು ಅಧಿಕಾರಕ್ಕೆ ಬಂದಿರುವುದೇ ಸಂವಿಧಾನ ಬದಲಾಯಿಸಲು ಅಂತಾನೇ. ಅವನು ಸಾಮಾನ್ಯ ವ್ಯಕ್ತಿ ಅಲ್ಲ. ಕೇಂದ್ರ ಸರ್ಕಾರದ ಮಂತ್ರಿ. ಅಮಿತ್​​ ಶಾ, ಮೋದಿ ಅನುಮತಿ ಇಲ್ಲದೆ ಅವನು ಆ ರೀತಿ ಹೇಳಲು ಸಾಧ್ಯವೇ? ಅನಂತ್‌ಕುಮಾರ್ ಪತ್ನಿಗೆ ಟಿಕೆಟ್ ತಪ್ಪಿಸಿ ಆರ್​​​ಎಸ್​ಎಸ್​​​ ಹುಡುಗನಿಗೆ ಟಿಕೆಟ್ ನೀಡಲಾಗಿದೆ. ಅವನು ಹೇಳ್ತಾನೆ ಸಂವಿಧಾನದವನ್ನ ಅಂಬೇಡ್ಕರ್ ರಚಿಸಿದ್ದಾರೆ. ಅಂಬೇಡ್ಕರ್ ಪ್ರತಿಮೆ ಸುಟ್ಟಾಕಬೇಕು ಅಂತಾನೇ. ಅವನು ಸೂರ್ಯ ಅಲ್ಲ, ಅಮಾವಾಸ್ಯೆ ಎಂದರು.

ನಾವೂ ಬಹಿರಂಗವಾಗೇ ನಿಖಿಲ್‌ರನ್ನು ಬೆಂಬಲಿಸುತ್ತಿದ್ದೇವೆ:
ಗುಸು ಗುಸುನು ಇಲ್ಲ‌ ಪಸಪಸ ನೂ ಇಲ್ಲ. ಯಾರ‌್ಯಾರೋ ಹೇಳುತ್ತಿದ್ದಾರೆ, ಸಿದ್ದರಾಮಯ್ಯ ಸುಮಲತಾ ಬೆಂಬಲಿಸುತ್ತಿದ್ದಾರೆ ಎಂದು. ಆ ರೀತಿ ಯಾವ ಬೆಂಬಲವು ಇಲ್ಲ.
ನಾವೂ ಬಹಿರಂಗವಾಗೇ ನಿಖಿಲ್‌ರನ್ನು ಬೆಂಬಲಿಸುತ್ತಿದ್ದೇವೆ. ಯಾವದೇ ಗುಸು ಗುಸು‌ ಮಾತಿಗೆ ತಲೆಕೆಡಿಸಿಕೊಳ್ಳಬೇಡಿ. ಮತ್ತೆ ಬಿಜೆಪಿ ಅಧಿಕಾರಕ್ಕೆ ಬರಲ್ಲ ,ಮೋದಿ ಪ್ರಧಾನಿ ಆಗಲ್ಲ. ಬರೀ ಇದೆಲ್ಲಾ ಮಾಧ್ಯಮಗಳ ಸೃಷ್ಟಿ. ಮೋದಿ ಅಧಿಕಾರದಲ್ಲಿ ಇದ್ದಾಗಲೇ ಪಂಚ ರಾಜ್ಯ ಚುನಾವಣೆಯಲ್ಲಿ ಸೋತಿದ್ದಾರೆ. ಕರ್ನಾಟಕದ ಉಪಚುನಾವಣೆಯಲ್ಲೂ ಲಕ್ಷಾಂತರ ಮತಗಳಿಂದ ಬಿಜೆಪಿ ಸೋತ್ರು. ನಾನು ಕೂಡ ಎಲ್ಲಾ ಕಡೆ ಪ್ರಚಾರ ಮಾಡುತ್ತಿದ್ದೇನೆ. ಜನರ ಪ್ರತಿಕ್ರಿಯೆ ನೋಡಿದ್ರೆ, ರಾಜ್ಯದ 28 ಕ್ಷೇತ್ರದಲ್ಲೂ ನಾವು ಗೆದ್ದೆ ಗೆಲ್ಲುತ್ತೇವೆ. ಮತದಾನದ ಹಿಂದಿನ ದಿನ ರಜೆ ಇದೆ. ರಜೆ ಇದೆ ಎಂದು ಎಲ್ಲಾದರು ಹೊಂಟುಬಿಟ್ಟೀರಾ? ಮತಹಾಕಿ ಎಲ್ಲಾದರು ಹೋಗಿ. ಮೊದಲು ಮತ ಚಲಾಯಿಸಿ ಎಂದು ಮತದಾರರಿಗೆ ಹೇಳಿದರು.


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv