ಕಾಡ್ಗಿಚ್ಚಿನ ಕೆನ್ನಾಲಿಗೆಗೆ ಸುಟ್ಟು ಹೋದ ನಂದಿಬೆಟ್ಟ

ಚಿಕ್ಕಬಳ್ಳಾಪುರ: ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣವಾದ ನಂದಿಬೆಟ್ಟದ ತಪ್ಪಲಲ್ಲಿ ಗುರುವಾರ ಮಧ್ಯಾಹ್ನ ಕಾಡ್ಗಿಚ್ಚು ಕಾಣಿಸಿಕೊಂಡು ನೂರಾರು ಎಕರೆ ಪ್ರದೇಶದಲ್ಲಿದ್ದ ಹುಲ್ಲು ಸುಟ್ಟು ಭಸ್ಮವಾಗಿದೆ. ವಿಷಯ ತಿಳಿಯುತ್ತಿದ್ದಂತೆ ಅರಣ್ಯ ಇಲಾಖೆ ಸಿಬ್ಬಂದಿ ದೌಡಾಯಿಸಿ ಬೆಂಕಿಯನ್ನು ನಂದಿಸಿ ಪರಿಸ್ಥಿತಿ ಹತೋಟಿಗೆ ತಂದಿದ್ದಾರೆ.
ಬೆಟ್ಟದ ತಪ್ಪಲು ಪ್ರದೇಶಕ್ಕೆ ಹೊಂದಿಕೊಂಡಿರುವ ಅಂಗಟ್ಟ ಗ್ರಾಮದ ಬಳಿ ಬೆಂಕಿ ಹೊತ್ತಿಕೊಂಡಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದು. ಅರಣ್ಯ ಇಲಾಖೆಯ 25 ಸಿಬ್ಬಂದಿ ಮಧ್ಯಾಹ್ನ 1ರಿಂದ ರಾತ್ರಿ 7.30 ವರೆಗೆ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಿದ್ರು.

ದನಗಾಯಿಗಳು ಬೆಂಕಿ ಹಚ್ಚಿರಬಹುದೆಂಬ ಶಂಕೆ
ಮಳೆಗಾಲದಲ್ಲಿ ಬೆಟ್ಟದಲ್ಲಿ ದನಕರು ಮೇಯಿಸಲು ಹುಲ್ಲು ಚೆನ್ನಾಗಿ ಬೆಳೆಯಲಿ ಎನ್ನುವ ಉದ್ದೇಶಕ್ಕೆ ರೈತರು ಆಗಾಗ ಅರಣ್ಯಕ್ಕೆ ಬೆಂಕಿ ಹಾಕುತ್ತಿರುತ್ತಾರೆ. ಆ ರೀತಿ ಇಲ್ಲಿ ಬೆಂಕಿ ಹಾಕಿರುವ ಸಾಧ್ಯತೆ ಇದೆ ಎಂದು ಶಂಕಿಸಲಾಗಿದೆ. ಬೆಂಕಿಯಿಂದ ಗಿಡಮರಗಳಿಗೆ ಹಾನಿ ಆಗಿಲ್ಲ. ಪಕ್ಷಿಗಳ ಗೂಡುಗಳು ಸುಟ್ಟಿರುವುದನ್ನ ಹೊರತುಪಡಿಸಿದಂತೆ ಪ್ರಾಣಿ, ಪಕ್ಷಿಗಳು ಬೆಂಕಿಗೆ ಆಹುತಿ ಆಗಿಲ್ಲ ಎಂದು ವಲಯ ಅರಣ್ಯಾಧಿಕಾರಿ ವಿಕ್ರಂ ರೆಡ್ಡಿ ತಿಳಿಸಿದ್ರು.
ದಿನವಿಡೀ ಶ್ರಮಿಸಿ ಬೆಟ್ಟದಲ್ಲಿ ಬೆಂಕಿ ವ್ಯಾಪಿಸುವುದನ್ನು ತಡೆದಿದ್ದೇವೆ. ಸದ್ಯ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಬೆಟ್ಟದ ತುದಿಯಲ್ಲಿ ಮಾತ್ರ ಸ್ವಲ್ಪ ಬೆಂಕಿ ಉಳಿದಿದೆ. ಆದರೆ ನಾವು ಬೆಟ್ಟದ ತುದಿಗೆ ಏರಿ ಬೆಂಕಿ ನಂದಿಸಲು ಆಗುತ್ತಿಲ್ಲ. ರಾತ್ರಿ ಕಾಡ್ಗಿಚ್ಚಿನ ಸ್ಥಳದಲ್ಲಿಯೇ ಬೀಡು ಬಿಟ್ಟಿರುವ ನಮ್ಮ ಸಿಬ್ಬಂದಿ ಪರಿಸ್ಥಿತಿ ಮೇಲೆ ನಿಗಾ ಇಟ್ಟಿದ್ದಾರೆ ಎಂದು ವಿಕ್ರಂ ರೆಡ್ಡಿ ತಿಳಿಸಿದ್ರು . ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶ್ರೀಧರ್, ಉಪ ಅರಣ್ಯ ಸಂರಕ್ಷಣಾಧಿಕಾರಿ ಮಂಜುನಾಥ್ ಘಟನಾಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದ್ರು.

Leave a Reply

Your email address will not be published. Required fields are marked *