ಮೀನುಗಳ ಮಾರಣ ಹೋಮ, ಐತಿಹಾಸಿಕ ಕೆರೆಗೆ ಇದೆಂಥ ದುಸ್ಥಿತಿ..?

ರಾಯಚೂರು: ಮೊದಲೆ ಗಬ್ಬು ನಾರುತ್ತಿದ್ದ ರಾಯಚೂರು ನಗರದ ಮಾವಿನ ಕೆರೆ ಈಗ ಮತ್ತಷ್ಟು ಗಬ್ಬೆದ್ದು ಹೋಗಿದೆ. ಕೆರೆಯಲ್ಲಿಯ ರಾಶಿ ರಾಶಿ ಮೀನುಗಳು ಸತ್ತು ಬಿದ್ದಿವೆ ಇದರಿಂದ ಕೆರೆಯ ಸುತ್ತಮುತ್ತ ದುರ್ವಾಸನೆ ಹರಡಿಕೊಂಡಿದ್ದು, ಜನರು ಕೆರೆಯಸುತ್ತ ಸುಳಿಯದಂತಹ ಪರಸ್ಥಿತಿ ನಿರ್ಮಾಣವಾಗಿದೆ. ಲಕ್ಷಗಟ್ಟಲೆ ಮೀನುಗಳ ಸಾವಿಗೆ ಬಿರು ಬಿಸಿಲು, ಕೊಳಚೆ ನೀರು ಹಾಗೂ ಆಮ್ಲಜನಕದ ಕೊರತೆಯೇ ಕಾರಣ ಅಂತಾ ಮೀನುಗಾರಿಕೆ ಇಲಾಖೆ ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ.
ಮೀನುಗಳ ಮಾರಣ ಹೋಮದಿಂದಾಗಿ ಕೆರೆಯ ಸುತ್ತಲಿನ ಕಾಲೋನಿಗಳಾದ ಜಹೀರಾಬಾದ್, ಇಂದಿರಾ ನಗರ ಐಡಿಎಸ್ ಎಮ್​ಟಿ ಲೇಔಟ್, ಉರಕುಂದಿ ಈರಣ್ಣ ಬಡಾವಣೆ ಹಾಗೂ ಅಶೋಕ ನಗರ ಏರಿಯಾಗಳಲ್ಲಿ ಗಬ್ಬು ದುರ್ನಾತ ಹರಡಿದ್ದು, ನಿವಾಸಿಗಳು ವಾಸಿಸಲಾಗದ ವಾತಾವರಣ ಸೃಷ್ಟಿಯಾಗಿದೆ. ಇನ್ನು ಕೊಳಕು ವಾಸನೆಯಿಂದ ರೋಗ ಹರಡುವ ಭೀತಿ ಕೂಡ ಶುರುವಾಗಿದೆ. ಕೆರೆಯ ದಡದ ರಸ್ತೆ ಮೂಲಕ ಅಶೋಕ್ ಡಿಪೊ, ಮಂತ್ರಾಲಯ ರಸ್ತೆಗೆ ಸಂಚರಿಸುವ ವಾಹನ ಸವಾರರು, ಪಾದಚಾರಿಗಳು ಮೂಗು ಮುಚ್ಚಿಕೊಂಡು ಹೊಗುವಂತಾಗಿದೆ. ಸದ್ಯ ಕೆರೆಯಲ್ಲಿ ಮೀನುಗಳು ಸಾವನಪ್ಪಿದ್ರೂ ಕೆರೆ ನಿರ್ವಹಣೆ ಮಾಡುತ್ತಿರುವ ನಗರಸಭೆ ಅಧಿಕಾರಿಗಳು ಕೆರೆಗೆ ಭೇಟಿ ಕೊಟ್ಟಿಲ್ಲ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ. ಮೀನುಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕಿ ಸುಮಾ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕೆರೆಗೆ ಸೇರುತ್ತಿರುವ ತ್ಯಾಜ್ಯದಿಂದಲೇ ಮೀನು ಸಾವನಪ್ಪಿರಬಹುದು, ನಗರಸಭೆ ಆಯುಕ್ತರ ಜೊತೆಗೆ ಚರ್ಚೆ ನಡೆಸುತ್ತೇನೆ. ಮುಂದೆ ಈ ರೀತಿ ಆಗದಂತೆ ಕ್ರಮ ಕೈಗೊಳ್ಳುತ್ತೇವೆ ಅಂತ ತಿಳಿಸಿದ್ರು.

ಬೃಹತ್ ಚರಂಡಿಯಾಗಿ ಮಾರ್ಪಟ್ಟಿದೆ ಐತಿಹಾಸಿಕ ಕೆರೆ !
ನಿಜಾಮರ ಆಳ್ವಿಕೆಯಲ್ಲಿ ನಿರ್ಮಿಸಲಾದ ಮಾವಿನ ಕೆರೆ, ಕಳೆದ ಇಪ್ಪತ್ತು ವರ್ಷಗಳ ಹಿಂದೆ ರಾಯಚೂರು ನಗರದ ಸೌಂದರ್ಯ ಹೆಚ್ಚಿಸಿತ್ತು, ಅಷ್ಟೆ ಯಾಕೆ ನಗರಕ್ಕೆ ಜೀವ ಜಲ ಕೂಡ ಆಗಿತ್ತು. ನಿತ್ಯ ಜನರು ವಾಯು ವಿಹಾರಕ್ಕಾಗಿ ಬೆಳಿಗ್ಗೆ ಸಂಜೆ ಹೊತ್ತು ಕೆರೆಯತ್ತ ಬರುತ್ತಿದ್ದರು, ಕುಟುಂಬ ಸಮೇತರಾಗಿ ಕೆರೆಯ ದಡದಲ್ಲಿ ಗಂಟೆ ಗಟ್ಟಲೆ ಕಾಲ ಕಳೆದು ಹೋಗುತ್ತಿದ್ದರು. ಆದರೆ ಈಗ ಮಾವಿನ ಕೆರೆ ಬೃಹತ್ ಚರಂಡಿಯಾಗಿ ಮಾರ್ಪಟ್ಟಿದೆ. ಇದಕ್ಕೆಲ್ಲ ಕಾರಣ ನಗರಸಭೆ. ಯಾಕಂದ್ರೆ ಕೆರೆಯನ್ನು ನಿರ್ವಹಣೆ ಮಾಡುತ್ತಿರುವ ನಗರಸಭೆ ಸರಿಯಾಗಿ ನಿರ್ವಹಣೆ ಮಾಡದೇ ನಿರ್ಲಕ್ಷ್ಯ ತೋರುತ್ತಿದೆ ಎನ್ನುವುದು ಸಾರ್ವಜನಿಕರ ಆರೋಪ. ಅದಕ್ಕೆ ಸಾಕ್ಷಿ ಎಂಬಂತೆ ನಗರದ ಚರಂಡಿ ನೀರು, ಚಿಕನ್ ತ್ಯಾಜ್ಯ, ಕಸಾಯಿ ಖಾನೆ ತ್ಯಾಜ್ಯ ಹೀಗೆ ಎಲ್ಲವು ನಗರದ ಕೊಳಕು ನಾಲೆಗಳ ಮೂಲಕ ಕೆರೆಗೆ ಬಂದು ಸೇರುತ್ತಿದೆ. ಇದರಿಂದ ಕೆರೆಯಲ್ಲಿರುವ ನೀರು ಸಂಪೂರ್ಣ ಮಲಿನವಾಗಿದೆ. ಕೆರೆಗೆ ಸೇರುತ್ತಿರುವ ಚರಂಡಿ ನೀರನ್ನು ತಡೆಗಟ್ಟುವ ಕೆಲಸ ನಗರಸಭೆ ಅಧಿಕಾರಿಗಳು, ಜನಪ್ರತಿನಿಧಿಗಳು ಮಾಡಬೇಕಿತ್ತು. ಆದ್ರೆ ಕೆರೆಗೂ ನಮಗೂ ಸಂಬಂಧವೇ ಇಲ್ಲ ಎಂಬಂತೆ ವರ್ತಿಸುತ್ತಿದೆ.
ಸದ್ಯ ಕೆರೆಗೆ ಸೇರುತ್ತಿರುವ ತ್ಯಾಜ್ಯದಿಂದ ಸುತ್ತಲಿನ ಪರಿಸರ ಮಲಿನವಾಗಿ ಹಾಳಾಗುತ್ತಿದ್ದು, ಜಲಚರಗಳು ಸಾವನಪ್ಪುತ್ತಿವೆ. ಈಗಲಾದ್ರು ನಗರಸಭೆ ಎಚ್ಚೆತ್ತುಕೊಂಡು ಕೆರೆಗೆ ಸೇರುತ್ತಿರುವ ಚರಂಡಿ ನೀರನ್ನು ತಡೆಗಟ್ಟುವ ಕೆಲಸವನ್ನು ಮಾಡ್ತಾರಾ ಕಾದು ನೋಡಬೇಕು.

ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv