ಅಳಿಯನಿಂದ ಮಾವನ ಮನೆಗೆ ಬೆಂಕಿ, ಸಾವಿನ ಸಂಖ್ಯೆ ಮೂರಕ್ಕೆ ಏರಿಕೆ

ಕಲಬುರಗಿ: ಮನೆಗೆ ಬೆಂಕಿ ಹಚ್ಚಿ ನಾಲ್ವರನ್ನ ಸಜೀವ ದಹನ ಮಾಡಲು ಯತ್ನಿಸಿದ್ದ ಪ್ರಕರಣದಲ್ಲಿ ಮೃತರ ಸಂಖ್ಯೆ 3ಕ್ಕೆ ಏರಿದೆ. ಶೇಕಡ 80ರಷ್ಟು ಸುಟ್ಟ ಗಾಯಗಳಾಗಿದ್ದ 17 ವರ್ಷದ ಸಾನಿಯಾ ಬೇಗಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾಳೆ.

ಗುರವಾರದಂದು ಸೈಯದ್ ಅಕ್ಬರ್ (42), ಪತ್ನಿ ಶಹನಾಜ್ ಬೇಗಂ (35) ಆಸ್ಪತ್ರೆಯಲ್ಲೇ ಕೊನೆಯುಸಿರೆಳೆದಿದ್ದರು. ನಿನ್ನೆ ಮೃತಪಟ್ಟ ಸಾನಿಯಾಳ ಅಂತ್ಯಕ್ರಿಯೆಯನ್ನ ಸಂಬಂಧಿಕರು ನೆರವೇರಿಸಿದ್ದಾರೆ. ಮತ್ತೊಬ್ಬ ಸೈಯದ್ ಯಾಸಿನ್ ಪರಿಸ್ಥಿತಿ ಇನ್ನೂ ಚಿಂತಾಜನಕವಾಗಿದ್ದು, ಹೈದರಾಬಾದ್​ನಿಂದ ಸೊಲ್ಲಾಪುರ ಆಸ್ಪತ್ರೆಗೆ ರವಾನಿಸಲಾಗಿದೆ.

5 ದಿನಗಳ ಹಿಂದೆಯೇ ಘಟನೆ ನಡೆದ್ರೂ ಇನ್ನೂ ಆರೋಪಿ ಮುಸ್ತಫಾನನ್ನ ಬಂಧಿಸಿಲ್ಲ ಅಂತ ಸಂಬಂಧಿಕರು ಹಾಗೂ ಸ್ಥಳೀಯರು ಪೊಲೀಸರ ವಿರುದ್ಧ ಪ್ರತಿಭಟನೆ ಡನೆಸಿದ್ರು. ಈ ನಡುವೆ ಆರೋಪಿ ಮುಸ್ತಫಾ ಮೃತರ ಸಂಬಂಧಿಕ ಮಹಿಳೆಯೊಬ್ಬರಿಗೆ ಕರೆ ಮಾಡಿ, ಅವರ ಪುತ್ರನನ್ನು ಕೊಲೆ ಮಾಡುವ ಬೆದರಿಕೆ ಹಾಕಿದ್ದಾನೆ ಅಂತ ಆರೋಪಿಸಲಾಗಿದೆ. ಘಟನೆಗೂ ಮೊದಲು ಕೂಡ ನಾಲ್ವರನ್ನ ಸಾಯಿಸೋದಾಗಿ ಬೆದರಿಕೆ ಹಾಕಿದ್ದನಂತೆ.

ಪ್ರಕರಣದ ಹಿನ್ನೆಲೆ…

ಆರೋಪಿ ಮುಸ್ತಾಫ ಪತ್ನಿಗೆ ಮಾನಸಿಕ ಹಿಂಸೆ ನೀಡುತ್ತಿದ್ದನಂತೆ. ಇದರಿಂದ ತಂಗಿಗೆ ಕಿರುಕುಳ ನೀಡಬೇಡವೆಂದು ಮೃತ ಸೈಯದ್​ ಅಕ್ಬರ್​, ಅಳಿಯ ಮುಸ್ತಾಫಗೆ ಬುದ್ಧಿವಾದ ಹೇಳಿದ್ದನಂತೆ. ಇದರಿಂದ ಕೋಪಗೊಂಡ ಮುಸ್ತಫಾ, ಜುಲೈ 4ರಂದು 2.30ರ ಸುಮಾರಿಗೆ ಮನೆಗೆ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿದ್ದ. ನಂತರ ಸಂಬಂಧಿಯೊಬ್ಬರಿಗೆ ಕರೆ ಮಾಡಿ ಉರ್ದುವಿನಲ್ಲಿ ‘ಜಲಾಕೇ ರಾಖ್ ಕರ್ ದಿಯಾ ಬೋಲೋ’ ಎಂದು ಹೇಳಿದ್ದ. ಆರೋಪಿಯ ಎಲ್ಲ ಮೊಬೈಲ್ ಸಂಭಾಷಣೆಗಳು ಪೊಲೀಸರಿಗೆ ಲಭ್ಯವಾಗಿವೆ. ಈ ಕುರಿತು ನ್ಯೂ​ ರಾಘವೇಂದ್ರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.