ಕೆಂಪೇಗೌಡ ವಿಮಾನ ನಿಲ್ದಾಣದ 21 ಕಸ್ಟಮ್ಸ್​ ಅಧಿಕಾರಿಗಳ ವಿರುದ್ಧ FIR ದಾಖಲು

ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕರ್ತವ್ಯನಿರತ 21 ಮಂದಿ ಕಸ್ಟಮ್ಸ್ ಅಧಿಕಾರಿಗಳ ವಿರುದ್ದ ಎಫ್​ಐಆರ್ ​ದಾಖಲಾಗಿದೆ. KIAL ಸೂಪರಿಟೆಂಡೆಂಟ್ ಆಫ್ ಕಸ್ಟಮ್ಸ್​, ಡೆಪ್ಯೂಟಿ ಸೂಪರಿಟೆಂಡೆಂಟ್ ಹಾಗೂ ಇನ್ಸ್​ಪೆಕ್ಟರ್ ಆಫ್ ಕಸ್ಟಮ್ಸ್​ ಸೇರಿದಂತೆ 21 ಅಧಿಕಾರಿಗಳ ವಿರುದ್ಧ ಈ FIR ದಾಖಲಾಗಿದೆ.

ಈ 21 ಕಸ್ಟಮ್ಸ್ ಅಧಿಕಾರಿಗಳ ಜೊತೆಗೆ KIAL, ಸೆಂಟ್ರಲ್ ಜಿಎಸ್​ಟಿ ಇಲಾಖೆಯ 7 ಅಧಿಕಾರಿಗಳ ವಿರುದ್ಧವೂ ಸಿಬಿಐ, ಎಸಿಬಿಯಲ್ಲಿ ಕೇಸ್ ದಾಖಲಾಗಿದೆ. ಲಂಚಕ್ಕಾಗಿ ಉದ್ಯಮಿಗೆ ಕಿರುಕುಳ ನೀಡಿರುವ ಅರೋಪದಡಿ ಪ್ರಕರಣ ದಾಖಲಾಗಿದೆ. ಇಂದಿರಾನಗರದ ನೆಕ್ಸ್ಟ್ ಜೆನ್ ಟೆಕ್ನಾಲಜೀಸ್ ಎಂ.ಡಿ ಕೃಪಲಾನಿ ವಿದೇಶದಿಂದ ಕೆಲ ವಸ್ತುಗಳನ್ನು 2017ರಲ್ಲಿ ಆಮದು ಮಾಡಿಕೊಂಡಿದ್ದರು. ಈ ವೇಳೆ ಏರ್​​ಪೋರ್ಟ್​ ಅಧಿಕಾರಿಗಳು ಕಸ್ಟಮ್ಸ್​ನಿಂದ ವಸ್ತುಗಳನ್ನು ಬಿಡುಗಡೆ ಮಾಡಲು ₹ 10 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎಂದು ಆರೋಪಿಸಲಾಗಿದೆ.

ದೂರುದಾರ ಕೃಪಲಾನಿ ಏರ್​​ಪೋರ್ಟ್​ ಕಸ್ಟಮ್ಸ್ ಅಧಿಕಾರಿಗಳಿಗೆ ಲಂಚ ನೀಡಲು ಒಪ್ಪದೇ ಇದ್ದಾಗ ಕಿರುಕುಳ ನೀಡಲು, ನಕಲಿ ದಾಖಲೆಗಳನ್ನು ಸೃಷ್ಟಿಸಿ ಕೃಪಲಾನಿ ಮನೆ ಸರ್ಚ್ ಮಾಡಲು ಸೆಂಟ್ರಲ್ ಜಿಎಸ್​ಟಿ ಬೆಂಗಳೂರು ಘಟಕದ ಅಧಿಕಾರಿಗಳು ಇಡೀ ಇಲಾಖೆಯನ್ನ ಬಳಕೆ ಮಾಡಿದ್ದಾರೆ ಅಂತಾ ದೂರಿನಲ್ಲಿ ಉಲ್ಲೇಖಿಸಲಾಗಿದೆ. ಇದಲ್ಲದೇ ಸೂಕ್ತ ತಪಾಸಣೆಯ ದಾಖಲೆಗಳಿಲ್ಲದೇ ಅಧಿಕಾರಿಗಳ ಟೀಂ ದಾಳಿ ಮಾಡಿದೆ ಎನ್ನಲಾಗಿದೆ. ಅದಲ್ಲದೆ ದಾಳಿ ವೇಳೆ ಕೆಲ ಖಾಸಗಿ ವ್ಯಕ್ತಿಗಳನ್ನು ಕರೆದೊಯ್ದು ಕೃಪಲಾನಿಯವರ ಇಡೀ ಮನೆಯನ್ನ ಸರ್ಚ್ ಮಾಡಿದ್ದರು ಎಂದು ದೂರಿದ್ದಾರೆ.

ಇದಕ್ಕೆ ಸಂಬಂಧಿಸಿದಂತೆ ಕೃಪಲಾನಿ ಹೈಕೋರ್ಟ್​ನಲ್ಲಿ ರಿಟ್ ಅರ್ಜಿ ಸಲ್ಲಿಸಿ ನ್ಯಾಯ ಕೇಳಿದ್ದರು. ತಮಗೆ ಲಂಚ ನೀಡಿಲ್ಲವೆಂದು ಕಸ್ಟಮ್ಸ್​ ಅಧಿಕಾರಿಗಳು ಕಿರುಕುಳ ನೀಡಿರುವುದನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಿದರು. ನಂತರ ವಿಚಾರಣೆ ನಡೆಸಿದ ಹೈ ಕೋರ್ಟ್, ಸಿಬಿಐಗೆ ತನಿಖೆ ನಡೆಸಲು ನಿರ್ದೇಶನ ನೀಡಿತ್ತು. ಪ್ರಾಥಮಿಕ ತನಿಖೆ ಪೂರ್ಣಗೊಳಿಸಿ ಸದ್ಯ 28 ಅರೋಪಿಗಳ ವಿರುದ್ಧ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ಸಿಬಿಐ ಅಧಿಕಾರಿಗಳು ಕೇಸ್ ದಾಖಲಿಸಿದ್ದಾರೆ.


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv