ಆಯ್ತು ಶಾಪ ವಿಮೋಚನೆ..! ಸಿಂಧನೂರು ಕ್ಷೇತ್ರಕ್ಕೆ ಸಿಕ್ತು ಸಚಿವ ಸ್ಥಾನ..!

ರಾಯಚೂರು: ಜಿಲ್ಲೆಯ 7 ವಿಧಾನ ಸಭಾ ಕ್ಷೇತ್ರಗಳಲ್ಲಿ ಸಿಂಧನೂರು (ಸಾಮಾನ್ಯ) ವಿಧಾನ ಸಭಾ ಕ್ಷೇತ್ರ ಬಹಳ ಡಿಫ್ರೇಂಟ್ ಆಗಿ ಗುರುತಿಸಿಕೊಂಡಿದೆ. ಯಾಕಂದ್ರೆ ಈ ಕ್ಷೇತ್ರದಿಂದ ಆಯ್ಕೆಯಾದ ಯಾರೊಬ್ಬರಿಗೂ ಇಲ್ಲಿವರೆಗೂ ಸಚಿವ ಸ್ಥಾನ ಸಿಕ್ಕಿಲ್ಲ. ಹಾಗಾಗಿ ಕ್ಷೇತ್ರಕ್ಕೆ ಏನೋ ಶಾಪ ಅಂಟಿಕೊಂಡಿದೆ ಅಂತಾನೇ ಕರೆಯಲಾಗುತ್ತಿತ್ತು. ಆದ್ರೆ ಈ ಬಾರಿಯ ಚುನಾವಣೆಯಲ್ಲಿ ಜೆಡಿಎಸ್ ನಿಂದ ಸ್ಪರ್ಧಿಸಿ ವಿಜಯಮಾಲೆ ಹಾಕಿಕೊಂಡಿರುವ ವೆಂಕಟರಾವ್ ನಾಡಗೌಡರು, ಜೆಡಿಎಸ್- ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದಲ್ಲಿ ಇಂದು ಮಂತ್ರಿಗಿರಿಯ ಪ್ರಮಾಣ ವಚನ ಸ್ವಿಕಾರ ಮಾಡುವ ಮೂಲಕ ಕ್ಷೇತ್ರಕ್ಕೆ ಅಂಟಿಕೊಂಡಿರುವ ಶಾಪ ವಿಮೋಚನೆ ಮಾಡಿದಂತಾಗಿದೆ.

ಸಿಂಧನೂರು ಕ್ಷೇತ್ರದಲ್ಲಿ ಈ ಹಿಂದೆ ಸ್ಪರ್ಧಿಸಿ ಗೆದ್ದವರು ಯಾಱರು..?
ಸದ್ಯ ಸಾಮಾನ್ಯ ವಿಧಾನ ಸಭಾ ಕ್ಷೇತ್ರವಾಗಿರುವ ಸಿಂಧನೂರಿನಲ್ಲಿ ಈ‌ ಹಿಂದೆ ಅಂದ್ರೆ 1957ರಿಂದ 2013ರ ವರೆಗೆ ನಡೆದ 10 ವಿಧಾನ ಸಭಾ ಚುನಾವಣೆಯಲ್ಲಿ ಗೆದ್ದಿರುವ ಶಾಸಕರ್ಯಾರಿಗೂ ಸಚಿವ ಸ್ಥಾನ ಒಲಿದು ಬಂದಿಲ್ಲ. ಆದ್ರೆ 11 ನೇ ವಿಧಾನ ಸಭೆ ಚುನಾವಣೆಯಲ್ಲಿ ಕ್ಷೇತ್ರಕ್ಕೆ ಮಂತ್ರಿಗಿರಿ ಲಭಿಸಿದೆ. 1989 ರಿಂದ ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷಗಳಿಂದ ಸಿಂಧನೂರು ಕ್ಷೇತ್ರದಲ್ಲಿ ಮಾಜಿ ಶಾಸಕ ಹಂಪನಗೌಡ ಬಾದರ್ಲಿ ಪ್ರತಿನಿಧಿಸಿ ನಾಲ್ಕು ಬಾರಿ ಶಾಸಕರಾಗಿ ಆಯ್ಕೆ ಆಗಿದ್ರು. ಆದ್ರೂ ಒಂದೇ ಒಂದು ಸಾರಿ ಕೂಡ ಸಚಿವ ಸ್ಥಾನ ಬಾದರ್ಲಿಗೆ ಸಿಕ್ಕಿರಲಿಲ್ಲ. ಹಾಗಾಗಿಯೇ ಕ್ಷೇತ್ರಕ್ಕೆ ಶಾಪ ಅಂಟಿಕೊಂಡಿದೆ ಅಂತಾನೇ ಕರೆಯಲಾಗುತ್ತಿತ್ತು. ಆದ್ರೆ ಈ ಬಾರಿಯ ಚುನಾವಣೆಯಲ್ಲಿ ಎದುರಾಳಿ ಆಗಿದ್ದ ಬಾದರ್ಲಿ ಹಂಪನಗೌಡರನ್ನು ಅಲ್ಪ ಮತಗಳ ಅಂತರದಿಂದ ಮಣಿಸಿ ಕ್ಷೇತ್ರಕ್ಕೆ ಅಂಟಿಕೊಂಡಿರುವ ಶಾಪವನ್ನು ವೆಂಕಟರಾವ್ ನಾಡಗೌಡರು ಬ್ರೇಕ್ ಮಾಡಿದ್ದಾರೆ.

ವೆಂಕಟರಾವ್ ನಾಡಗೌಡರ ರಾಜಕೀಯ ಹಾದಿ
ಲಿಂಗಾಯತ ಸಮುದಾಯಕ್ಕೆ ಸೇರಿರುವ 53 ವರ್ಷದ ವೆಂಕಟರಾವ್ ನಾಡಗೌಡರು ಜವಳಗೇರಾ ಸಂಸ್ಥಾನಕ್ಕೆ ಸೇರಿದವರಾಗಿದ್ದಾರೆ. ಬಿಎ ಪದವೀಧರರಾಗಿರುವ ನಾಡಗೌಡರು ಸಹಕಾರಿ ಕ್ಷೇತ್ರದಲ್ಲಿ ಹೆಚ್ಚಿನ ಜ್ಞಾನವನ್ನು ಹೊಂದಿದ್ದಾರೆ. 1995 ರಿಂದ ಭಾರತೀಯ ಎಣ್ಣೆ ಬೀಜ ಬೆಳೆಗಾರರ ಸಹಕಾರಿ ಒಕ್ಕೂಟದ ಅಧ್ಯಕ್ಷರಾಗಿದ್ದಾರೆ. ಮಂಡಲ ಪಂಚಾಯಿತಿ ಪ್ರಧಾನರಾಗಿ ರಾಜಕೀಯ ಜೀವನ ಆರಂಭಿಸಿರುವ ವೆಂಕಟರಾವ್ ನಾಡಗೌಡರು, 2008ರಲ್ಲಿ ಸಿಂಧನೂರು ಕ್ಷೇತ್ರದಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಿ ಮೊದಲ ಬಾರಿಗೆ ವಿಧಾನ ಸೌಧ ಪ್ರವೇಶ ಮಾಡಿದ್ದರು. ನಂತ್ರ 2013ರಲ್ಲಿ ಕಾಂಗ್ರೆಸ್ ನ ಬಾದರ್ಲಿ ಹಂಪನಗೌಡರ ವಿರುದ್ಧ ಸೋಲಿನ ಕಹಿ ಅನುಭವಿಸಿದ್ರು. ಸೋತು ಸುಮ್ಮನೆ ಕೂರದೆ ನಾಡಗೌಡರು ರೈತರ ಸಮಸ್ಯೆಗಳ ವಿರುದ್ಧ ಸತತ ಹೋರಾಟ ನಡೆಸುವ ಮೂಲಕ ಜನ ಬೆಂಬಲ ಬೆಳೆಸಿಕೊಂಡಿದ್ದಾರೆ. ಅಲ್ಲದೆ ಇಡೀ ಕ್ಷೇತ್ರದಾದ್ಯಂತ ಸುತ್ತಾಡಿ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಮಾಡಿದ್ದಾರೆ. ಹಾಗಾಗಿಯೇ 2018ರ ಚುನಾವಣೆಯಲ್ಲಿ ಎರಡನೇ ಬಾರಿಗೆ ಮತದಾರರ ಆಶೀರ್ವಾದ ಪಡೆದುಕೊಂಡು ಮತ್ತೊಮ್ಮೆ ವಿಧಾನ ಸಭೆ ಪ್ರವೇಶ ಮಾಡಿ ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರದಲ್ಲಿ ಸಚಿವರಾಗಿದ್ದಾರೆ.
ಸದ್ಯ ವೆಂಕಟರಾವ್ ನಾಡಗೌಡರು ಸಚಿವರಾಗಿ ಪ್ರಮಾಣ ವಚನ ಸ್ವಿಕಾರ ಮಾಡುತ್ತಲೇ ಸಿಂಧನೂರು ಕ್ಷೇತ್ರದಲ್ಲಿ ಜೆಡಿಎಸ್ ಕಾರ್ಯಕರ್ತರು, ಮುಖಂಡರು ಹಾಗೂ ನಾಡಗೌಡರ ಬೆಂಬಲಿಗರು ಪಟಾಕಿ ಸಿಡಿಸಿ,ಪರಸ್ಪರ ಸಿಹಿ ಹಂಚಿ ಸಂಭ್ರಮಾಚರಣೆ ಮಾಡಿದ್ದಾರೆ.

ವಿಶೇಷ ವರದಿ: ಬಜರಂಗಿ ಫಸ್ಟ್ ನ್ಯೂಸ್ ರಾಯಚೂರು