ಹೀಗೊಂದು ಗಲಾಟೆ ಮದುವೆ.. ಕಲ್ಯಾಣ ಮಂಟಪದಲ್ಲಿ ಮಾರಾಮಾರಿ

ಬೆಂಗಳೂರು: ಪೋಷಕರ ವಿರೋಧದ ನಡುವೆ ಅಪ್ರಾಪ್ತ ಯುವಕನಿಗೆ ವಿವಾಹ ಮಾಡುತ್ತಿದ್ದಾರೆ ಎಂದು ವರನ ಪೋಷಕರು ಆರೋಪಿಸಿದ್ದು, ಕಲ್ಯಾಣ ಮಂಟಪದಲ್ಲಿ ವಧು-ವರರ ಪೋಷಕರ ನಡುವೆ ಮಾರಾಮಾರಿ ನಡೆದಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲ್ಲೂಕಿನ ಟಿ.ಬೇಗೂರು ಗ್ರಾಮದ ವಿರಾಟ ಭವನದಲ್ಲಿ ಮಧ್ಯರಾತ್ರಿ 12ರ ವೇಳೆಯಲ್ಲಿ ಈ ಘಟನೆ ನಡೆದಿದೆ. ಟಿ.ಬೇಗೂರಿನಲ್ಲಿ ಮದುವೆ ಆಗುತ್ತಿರೋ ಸಂಧ್ಯಾ ಮತ್ತು ಕೃಷ್ಣಮೂರ್ತಿ ಈ ಮೊದಲೇ ರಿಜಿಸ್ಟರ್ ಮದುವೆ ಆಗಿದ್ದಾರೆ. ನಕಲಿ ದಾಖಲೆ ಸೃಷ್ಠಿಸಿ ವಯಸ್ಸನ್ನು ಮರೆಮಾಚಿ ರಿಜಿಸ್ಟರ್ ಮ್ಯಾರೇಜ್ ಆಗಿದ್ದಾರೆ ಅಂತಾ ವರನ ಪೋಷಕರು ಆಕ್ಷೇಪಿಸಿದ್ದಾರೆ.

ಏನಿದು ಸ್ಟೋರಿ..?
ತಮ್ಮ ಅಪ್ರಾಪ್ತ ಮಗನೊಂದಿಗೆ, ಮಗಳ ಮದುವೆ ಮಾಡಲು ಯತ್ನಿಸುತ್ತಿದ್ದಾರೆ ಎಂದು ವರನ ಪೋಷಕರು ಮದುವೆ ತಡೆಯಲು ಯತ್ನಿಸಿದರು. ಈ ವೇಳೆ ವಧು, ವರ ಹಾಗೂ ಪೋಷಕರ ನಡುವೆ ಮಾರಾಮಾರಿಯೇ ನಡೆದು ಹೋಯಿತು. ವಧುವಿನ ಕಡೆಯವರು ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ವರನ ಪೋಷಕರು ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಲು ಪೊಲೀಸ್‌ ಠಾಣೆ ಮೆಟ್ಟಿಲೇರಿದರು.

ಇನ್ನು, ವಿಷಯ ತಿಳಿದ ನೆಲಮಂಗಲ ಗ್ರಾಮಾಂತರ ಠಾಣಾ ಪೊಲೀಸರು ಕಲ್ಯಾಣ ಮಂಟಪಕ್ಕೆ ಭೇಟಿ ನೀಡಿ, ವಧುವರರ ರಿಜಿಸ್ಟರ್ ಮ್ಯಾರೇಜ್ ಸರ್ಟಿಫಿಕೇಟ್ ಪರಿಶೀಲಿಸಿದರು. ಅಲ್ಲದೆ ವಧು-ವರರೊಂದಿಗೆ ಹಾಗೂ ಅವರ ಪೋಷಕರೊಂದಿಗೂ ಕೆಲ ಕಾಲ ಚರ್ಚೆ ನಡೆಸಿದ ನೆಲಮಂಗಲ ಗ್ರಾಮಾಂತರ ಠಾಣೆ ಪೊಲೀಸರು ಅಂತಿಮವಾಗಿ ವಧು ಸಂಧ್ಯಾ ಹಾಗೂ ವರ ಕೃಷ್ಣಮೂರ್ತಿ ಇಬ್ಬರ ನಿರ್ಧಾರದಂತೆ ಮದುವೆ ನಡೆಸಲು ಅನುವು ಮಾಡಿಕೊಟ್ಟರು. ಸಂಪ್ರದಾಯದಂತೆ ಶಾಸ್ತ್ರಗಳನ್ನು ಪೂರೈಸಿ ನವದಂಪತಿಗಳಾದ ಸಂಧ್ಯಾ ಮತ್ತು ಕೃಷ್ಣಮೂರ್ತಿ ಹೊಸ ಬಾಳಿನ ಹೊಸ್ತಿಲನ್ನು ತುಳಿದರು. ಶುಭ ಕಾರ್ಯ ನಡೆಯಬೇಕಿದ್ದ ಕಲ್ಯಾಣ ಮಂಪಟದಲ್ಲಿ ನಡೆದ ಗಲಾಟೆ ಮದುವೆಗೆ ಸಾಕ್ಷಿಯಾಗಿದ್ದು, ಆ ಮದುವೆಗೆ ಬ್ರೇಕ್ ಹಾಕಲು ಬಂದಿದ್ದ ವರನ ಪೋಷಕರೊಂದಿಗೆ ಪೊಲೀಸರು ಹೊರನಡೆದರು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv