ಮುಳುಗುತ್ತಿದ್ದ ಮಗನನ್ನು ರಕ್ಷಿಸಲು ಹೋಗಿ ತಂದೆ ಸಾವು..!

ನೆಲಮಂಗಲ: ಈಜಲು ಹೋಗಿದ್ದ ಮಗನನ್ನು ರಕ್ಷಿಸಲು ಹೋಗಿ ತಂದೆ ಹಾಗೂ ಮಗ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ನಿನ್ನೆ ಸಂಜೆ ಈಜಲು ಹೋಗಿದ್ದ ಮಗನನ್ನು ರಕ್ಷಿಸುವ ಯತ್ನದಲ್ಲಿ ತಂದೆ ರಾಜಣ್ಣ ಹಾಗೂ ಮಗ 17 ವರ್ಷದ ಅಮೀತ್ ಜಲಸಮಾಧಿಯಾಗಿದ್ದಾರೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ದಾಬಸ್​ಪೇಟೆ ಹೋಬಳಿಯ ಎಲೆಕ್ಯಾತಹಳ್ಳಿ ಗ್ರಾಮದ ಕೃಷಿ ಹೊಂಡದಲ್ಲಿ ಈ ಅವಘಡ ನಡೆದಿದೆ. ನುರಿತ ಈಜುಗಾರರು, ಅಗ್ನಿಶಾಮಕ ದಳ ಹಾಗೂ ಸಿವಿಲ್ ಡಿಫೆನ್ಸ್ ಸಿಬ್ಬಂದಿ ತಕ್ಷಣ ಸ್ಥಳಕ್ಕೆ ದೌಡಾಯಿಸಿದ್ದಾರೆ. ಕೃಷಿ ಹೊಂಡದಲ್ಲಿದ್ದ ನೀರನ್ನು ಪಂಪ್ ಮಾಡಿ ಹೊರ ಹಾಕಿ, ತಂದೆ-ಮಗನ ಶವ ಹೊರತೆಗೆಯಲಾಗಿದೆ. ಮೃತದೇಹಗಳನ್ನು ಹೊರತೆಗೆದು ಬಳಿಕ ದಾಬಸ್​ಪೇಟೆಯ ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ರವಾನೆ ಮಾಡಲಾಗಿದೆ. ಘಟನೆ ಕುರಿತು ದಾಬಸ್​ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv