ಬೆಳೆಸಾಲದ ಹಣ ಖಾತೆಗೆ ಜಮಾ ಆದ್ರೂ ನೀಡದ ಬ್ಯಾಂಕ್​ ಅಧಿಕಾರಿಗಳು: ರೈತರ ಪ್ರೊಟೆಸ್ಟ್​​​

ಚಿಕ್ಕೋಡಿ: ಖಾತೆಗೆ ಜಮಾ ಆದ ಬೆಳೆ ಸಾಲದ ಹಣವನ್ನ ನೀಡದ ಬ್ಯಾಂಕ್​ ಅಧಿಕಾರಿಗಳ ಕ್ರಮವನ್ನ ಖಂಡಿಸಿ, ರೈತರು ಹುಕ್ಕೇರಿ ಪಟ್ಟಣದ ಡಿಸಿಸಿ ಬ್ಯಾಂಕ್ ಮುಂದೆ ಪ್ರತಿಭಟನೆ ನಡೆಸುತ್ತಿದ್ದಾರೆ. ಕಳೆದ ಸಾಲಿನಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ರೈತರ ₹50 ಸಾವಿರದವರೆಗಿನ ಸಾಲ ಮನ್ನಾ ಮಾಡಿದ ಬೆನ್ನಲ್ಲೇ ಹೊಸ ಸಾಲಕ್ಕೆ ಹಲವಾರು ರೈತರು ಅರ್ಜಿ ಹಾಕಿದ್ದರು. ಅರ್ಜಿ ಹಾಕಿದಂತೆ ರೈತರ ಅಕೌಂಟ್​​​​ಗೆ ಹಣವೂ ಕೂಡ ಜಮಾ ಆಗಿದೆ. ಆದ್ರೆ ಹಣ ಜಮಾ ಆಗಿ 15 ದಿನಗಳು ಕಳೆದರೂ ಕೂಡ ರೈತರಿಗೆ ಹಣ ನೀಡದೆ ಬ್ಯಾಂಕ್ ಅಧಿಕಾರಿಗಳು ಸತಾಯಿಸುತ್ತಿದ್ದಾರೆ. ಬೆಳೆ ಸಾಲ ಬಂದಿರೋದು ಖಚಿತ ಪಡಿಸಿಕೊಳ್ಳೊಕೆ ರೈತರು ತಮ್ಮ ಬ್ಯಾಂಕ್ ಪಾಸ್ ಬುಕ್ ಎಂಟ್ರಿ ಮಾಡಿದಾಗ ಹಣ ಜಮಾ ಆಗಿರೋದು ಪಕ್ಕಾ ಆಗಿದೆ. ಆದರೆ ಡಿಸಿಸಿ ಬ್ಯಾಂಕ್ ಸಿಬ್ಬಂದಿ ಮಾತ್ರ ಹಣ ನೀಡದೆ ರೈತರು ಪರದಾಡುವಂತೆ ಮಾಡಿದ್ದಾರೆ.

ಈ ಧೋರಣೆಯನ್ನು ಖಂಡಿಸಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಆದರೆ ರೈತರಿಗೆ ಸರಿಯಾಗಿ ಸ್ಪಂದಿಸದೇ ಅಧಿಕಾರಿಗಳು ಬ್ಯಾಂಕ್ ಬಾಗಿಲು ಹಾಕಿಕೊಂಡು ಒಳಗಡೆ ಕುಳಿತಿದ್ದಾರೆ. ಇದಕ್ಕೆ ಆಕ್ರೋಶ ವ್ಯಕ್ತಪಡಿಸಿದ ರೈತರು, ನಮಗೆ ಸಾಲ ಸಿಗುವವರೆಗೂ ನಾವು ಬ್ಯಾಂಕ್ ಮುಂದೆಯೇ ಕುಳಿತುಕೊಳ್ಳುತ್ತೆವೆ ಅಂತಾ ಪಟ್ಟು ಹಿಡಿದಿದ್ದಾರೆ. ಇನ್ನು ಬ್ಯಾಂಕ್ ಸಿಬ್ಬಂದಿ ರೈತರಿಗೆ ಸೇರಬೇಕಾದ ಹಣವನ್ನು ಯಾವ ಕಾರಣಕ್ಕೆ ನೀಡುತ್ತಿಲ್ಲ ಎನ್ನುವ ಬಗ್ಗೆ ಮಾಹಿತಿ ನೀಡುತ್ತಿಲ್ಲ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗಾಗಿ ಸಂಪರ್ಕಿಸಿ: contact@firstnews.tv