ಸಾಲ ಮನ್ನಾದಿಂದ ರೈತರಿಗೆ ಅನ್ಯಾಯ: ಮಾಜಿ ಮುಖ್ಯಮಂತ್ರಿ ಜಗದೀಶ್​​ ಶೆಟ್ಟರ್​​

ಹುಬ್ಬಳ್ಳಿ: ಸಿಎಂ ಹೆಚ್​​.ಡಿ. ಕುಮಾರಸ್ವಾಮಿ ಚುನಾವಣೆಗೆ ಮೊದಲು ರೈತರ ಸಾಲವನ್ನು ಸಂಪೂರ್ಣವಾಗಿ ಮನ್ನಾ ಮಾಡುವುದಾಗಿ ಭರವಸೆ ನೀಡಿದ್ದರು. ಆದರೆ ಹೇಳಿದಂತೆ ನಡೆದುಕೊಳ್ಳದೇ ಮುಖ್ಯಮಂತ್ರಿ ವಚನ ಭ್ರಷ್ಟರಾಗಿದ್ದಾರೆ. ಹೀಗಾಗಿ ಮೈತ್ರಿ ಸರ್ಕಾರ ಬಹಳ ವರ್ಷ ನಡೆಯುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್​​ ಎಂದು ಭವಿಷ್ಯ ನುಡಿದಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಕುಮಾರಸ್ವಾಮಿ ಮಾಡಿರುವ ಸಾಲ ಮನ್ನಾದಿಂದ ರೈತರಿಗೆ ಲಾಭವಾಗಿಲ್ಲ. ಇದರಿಂದಾಗಿ ಅನ್ಯಾಯವಾಗಿದೆ. ಸಾಲ ಮನ್ನಾ ವಿಚಾರಕ್ಕೆ ಸಂಬಂಧಿಸಿದಂತೆ ಹೋರಾಟ ನಡೆಸುವಂತೆ ನಮ್ಮ ನಾಯಕರಾದ ಮಾಜಿ ಮುಖ್ಯಮಂತ್ರಿ ಬಿ.ಎಸ್​​. ಯಡಿಯೂರಪ್ಪರಿಗೆ ರೈತರು ಕರೆ ಮಾಡುತ್ತಿದ್ದಾರೆ. ಈ ಕುರಿತು ಸದನದಲ್ಲಿ ನಮ್ಮ ಯಡಿಯೂರಪ್ಪ ನೇತೃತ್ವದಲ್ಲಿ ಹೋರಾಟ ಮಾಡಲಾಗುವುದು ಎಂದು ಶೆಟ್ಟರ್​​ ಹೇಳಿದರು.

ಬೇಡಿಕೆಗೆ ಕ್ಯಾರೆ ಎನ್ನದ ಸಿಎಂ
ಇನ್ನು ಉಚಿತ ಬಸ್​​ ಪಾಸ್​​ ನೀಡುವಂತೆ ಪ್ರತಿಭಟಿಸುತ್ತಿರುವ ವಿದ್ಯಾರ್ಥಿಗಳ ಬೇಡಿಕೆಗೆ ಕ್ಯಾರೆ ಎನ್ನದ ಸಿಎಂ ಕುಮಾರಸ್ವಾಮಿ, ಶಾಂತಿಯುತ ಪ್ರತಿಭಟನೆ ಮಾಡುತ್ತಿದ್ದ ವಿದ್ಯಾರ್ಥಿಗಳ ಮೇಲೆ ಲಾಠಿ ಚಾರ್ಜ್​​ ಮಾಡಿಸಿದ್ದಾರೆ. ಸರ್ಕಾರವೇ ಪೊಲೀಸರಿಂದ ಅನಾಚಾರ ಮಾಡಿಸಿದೆ ಎಂದು ಜಗದೀಶ್ ಶೆಟ್ಟರ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ರು. ಅಲ್ಲದೇ ವಿದ್ಯಾರ್ಥಿಗಳ ಮೇಲೆ ಲಾಠಿ ಚಾರ್ಜ್​​ ಆಗೀರೋದನ್ನು ಖಂಡಿಸುತ್ತೇವೆ ಎಂದು ಮಾಜಿ ಮುಖ್ಯಮಂತ್ರಿ ಶೆಟ್ಟರ್​​ ಹಾಲಿ ಸಿಎಂ ವಿರುದ್ಧ ಹರಿಹಾಯ್ದರು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ:contact@firstnews.com