ನಿಜಗುಣಾನಂದರ ಇಸ್ಪೀಟು, ಸಾರಾಯಿ, ಮೋಜಿಗೆ ರೈತನ ಆಕ್ರೋಶ: ವಿಡಿಯೋ ವೈರಲ್

ಬಾಗಲಕೋಟೆ: ಗದಗ ಜಿಲ್ಲೆ ಮುಂಡರಗಿ ಮಠದ ನಿಜಗುಣಾನಂದ ಸ್ವಾಮೀಜಿಗೆ ರೈತನೋರ್ವ ಹಿಗ್ಗಾ ಮುಗ್ಗಾ ಬೈದಾಡಿದ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ರೈತ ಮೂಲತಃ ಬಾಗಲಕೋಟೆ ಜಿಲ್ಲೆಯವನೆಂದು ಹೇಳಲಾಗುತ್ತಿದ್ದು, ಆತನ ಹೆಸರು ಇನ್ನೂ ತಿಳಿದು ಬಂದಿಲ್ಲ. ರಾತ್ರಿ ವೇಳೆ ರೈತ ಮಾತನಾಡಿದ್ದು, ಮೊಬೈಲ್ ನಲ್ಲಿ ಚಿತ್ರೀಕರಿಸಿ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಡಲಾಗಿದೆ.
ಇತ್ತೀಚೆಗೆ ನಿಜಗುಣಾನಂದ ಸ್ವಾಮೀಜಿ ಬದಾಮಿ ಪಟ್ಟಣದಲ್ಲಿ ರೈತರ ಸಾಲ ಮನ್ನಾ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಇಸ್ಪೀಟ್, ಸಾರಾಯಿ, ಮೋಜು ಮಸ್ತಿಗಾಗಿ, ರೈತರು ಸಾಲ ಮಾಡಿಕೊಂಡಿದ್ದಾರೆ. ಸಾಲ ಮಾಡಿ ಎಂದು ದೇವರಲ್ಲಿ ಮೊರೆಯಿಟ್ಟರೆ ಮನ್ನಾ ಮಾಡುತ್ತಾನೆಯೇ? ಹೋಗೊ‌ ಮಗನೆ! ಅಂತಾನೆ ದೇವ ಎಂದು ವ್ಯಂಗ್ಯ ಮಾಡಿದ್ದರು.
ಈ ಮೂಲಕ ಸಾಲ‌ ಮನ್ನಾವನ್ನು ಪರೋಕ್ಷವಾಗಿ ವಿರೋಧಿಸಿದ್ದರು. ಆದರೆ ಇದು ರೈತರನ್ನು ಕೆರಳಿಸಿದೆ. ನಿಜಗುಣಾನಂದ ಸ್ವಾಮೀಜಿ ಹೇಳಿಕೆಯಿಂದ ಆಕ್ರೋಶಗೊಂಡ ರೈತ ಈ ವಿಡಿಯೋದಲ್ಲಿ ಸ್ವಾಮೀಜಿಗೆ ಬೈಗುಳಗಳ ಸುರಿಮಳೆಯನ್ನೇ ಸುರಿಸಿದ್ದಾನೆ. ನೀನು ರೈತರ ಸಾಲ ಮನ್ನಾ ಮಾಡಬ್ಯಾಡ ಅಂತಿ, ಸಿದ್ದರಾಮಯ್ಯ ಹೋಗಿ ಧರ್ಮಸ್ಥಳದಾಗ ಕುಂತಾನ. ನೀನ ಇಲ್ಲಿ ಕುಂತಿ. ನೀನು ಮಂಚದ ಮ್ಯಾಲ‌ ಮಲಗಿಕೊಂಡು ಸಾಲ ಮನ್ನಾ ಮಾಡಬ್ಯಾಡ ಅಂತಿ ನಿನಗೇನ ಗೊತ್ತೈತಿ ನಮ್ಮ ಪರಿಸ್ಥಿತಿ.
ನೀನು ಮಠದಲ್ಲಿ ಬೆಳೆದವನು, ನಿನಗೆ ಹೆಂಡ್ತಿ ಮಕ್ಕಳಿಲ್ಲ ತಂದೆ-ತಾಯಿ ದೂರ ಇದಾರೆ. ಖಾವಿ ತೊಟ್ಟು ತಿರುಗುವ ನಿನಗೆ ರೈತರ ಕಷ್ಟ ಗೊತ್ತಿಲ್ಲ. ಬರೀ ಭಾಷಣ ಮಾಡಕೊಂತ ಹೊಂಟಿ, ನೀ ಭಾಷಣ ಮಾಡಾಕ ಒಂದ ಲಕ್ಷ ಎರಡು ಲಕ್ಷ ಕೇಳತಿ. ಇಸ್ಪೀಟ್ ಆಡಿ ಸಾಲ ಮಾಡ್ಯಾರ ಅಂತಿ. ಇಸ್ಪೀಟ್, ಮಟ್ಕಾ ಎಲ್ಲಾರು ಆಡೋದಿಲ್ಲ ಎಂದು ಅಶ್ಲೀಲ ಪದಗಳಿಂದ ನಿಂದನೆ ಮಾಡಿದ್ದಾರೆ. ರೈತನ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಭಾರೀ ಸುದ್ದಿಮಾಡುತ್ತಿದೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ:contact@firstnews.tv