ಜಮೀನಿನಲ್ಲಿ ವಿದ್ಯುತ್ ತಂತಿ ತಗುಲಿ ರೈತ ಸಾವು

ಯಾದಗಿರಿ: ಯಾದಗಿರಿ ತಾಲೂಕಿನ ವರ್ಕನಳ್ಳಿ ಗ್ರಾಮದಲ್ಲಿ ವಿದ್ಯುತ್​ ತಂತಿ ತಗುಲಿ ರೈತರೊಬ್ಬರು ಮೃತಪಟ್ಟಿದ್ದಾರೆ. ದೇವಪ್ಪ ಬಾವೂರ(28) ಮೃತ ರೈತ. ನಿನ್ನೆ ಸುರಿದ ಗಾಳಿ ಮಳೆಗೆ ವರ್ಕನಳ್ಳಿಯ ಅವರ ಜಮೀನಿನಲ್ಲಿ ವಿದ್ಯುತ್​ ತಂತಿ ಹರಿದು ಬಿದ್ದಿತ್ತು. ಕೊಳಿವಾಡದ ನಿವಾಸಿಯಾಗಿರುವ ದೇವಪ್ಪ ಜಮೀನಿಗೆ ತೆರಳಿದಾಗ ವಿದ್ಯುತ್​ ತಂತಿ ಹರಿದು ಬಿದ್ದಿರುವುದನ್ನು ಗಮನಿಸಿದ್ದಾರೆ. ಅಲ್ಲದೇ ವಿದ್ಯುತ್​ ಇಲ್ಲವೆಂದು ತಂತಿ ಮುಟ್ಟಿದ್ದಾರೆ. ಈ ವೇಳೆ ಅವಘಡ ಸಂಭವಿಸಿದೆ. ಕೆಇಬಿ ಅಧಿಕಾರಿಗಳ ನಿರ್ಲಕ್ಷ್ಯದಿಂದ ದುರ್ಘಟನೆ ನಡೆದಿದೆ ಎನ್ನುವ ಆರೋಪಗಳು ಕೇಳಿ ಬರುತ್ತಿವೆ. ಈ ಸಂಬಂಧ ಯಾದಗಿರಿ ಗ್ರಾಮೀಣ ಪೊಲೀಸ್​​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.