‘ಕಾಲಾ’ ನೋಡಲು ಹೊಸೂರು ಕಡೆ ಹೊರಟ ಅಭಿಮಾನಿಗಳು

ಬೆಂಗಳೂರು: ನಗರದ ಬಹುತೇಕ ಚಿತ್ರಮಂದಿರಗಳಲ್ಲಿ ಇಂದು ರಜನಿಕಾಂತ್​ ಅಭಿನಯದ ಕಾಲಾ ಚಿತ್ರ ಪ್ರದರ್ಶನಗೊಳ್ಳುತ್ತಿಲ್ಲ. ಈ ಹಿನ್ನೆಲೆಯಲ್ಲಿ ಕೆಲವು ರಜನಿಕಾಂತ್​​ ಅಭಿಮಾನಿಗಳು ಸಿನಿಮಾ ವೀಕ್ಷಣೆಗಾಗಿ ತಮಿಳುನಾಡಿನ ಕಡೆ ಮುಖ ಮಾಡಿದ್ದಾರೆ. ಹೆಚ್ಚಾಗಿ ಕಾಲೇಜು ವಿದ್ಯಾರ್ಥಿಗಳು ಚಿತ್ರ ವೀಕ್ಷಣೆಗಾಗಿ ತಮಿಳುನಾಡಿನ ಕಡೆ ಬೈಕ್ ಹಾಗೂ ಕಾರ್​​​​​​​ನಲ್ಲಿ ತೆರಳುತ್ತಿದ್ದಾರೆ. ಹೊಸೂರಿನ ಬಾಲಾಜಿ, ಲಕ್ಷ್ಮಿ ಹಾಗೂ ರಾಘವೇಂದ್ರ ಚಿತ್ರಮಂದಿರದಲ್ಲಿ ಕಾಲ ಸಿನಿಮಾ ಪ್ರದರ್ಶನವಾಗುತ್ತಿದೆ.

ಬೆಂಗಳೂರಿನ ಕಾಕ್ಸ್ ಟೌನ್​​​​​ನಿಂದ ತಮಿಳುನಾಡಿನ ಹೊಸೂರು ಕಡೆ ಹೊರಟ ಸುಮನ್​​ ಎಂಬ ಅಭಿಮಾನಿ ಪ್ರತಿಕ್ರಿಯಿಸಿ, ಫ್ಯಾನ್ ಶೋ ಮಿಸ್ ಆಯಿತು. ನಮ್ಮಲ್ಲಿ ಸಿನಿಮಾ ರಿಲೀಸ್ ಆಗಿದ್ರೆ ಅಭಿಮಾನಿಗಳು ತುಂಬಾ ಎಂಜಾಯ್ ಮಾಡ್ತಿದ್ರು ಎಂದು ಅಭಿಪ್ರಾಯಪಟ್ಟಿದ್ದಾರೆ. ರಾಜಕೀಯ ಬೇರೆ ಸಿನಿಮಾ ಬೇರೆ. ಕನ್ನಡಿಗನಾಗಿ ಅವರ ಹೇಳಿಕೆಯನ್ನು ನಾವು ಒಪ್ಪುವುದಿಲ್ಲ. ಆದ್ರೆ ಅವರ ಅಭಿಮಾನಿಯಾಗಿ ಅವರ ಸಿನಿಮಾ ನೋಡುತ್ತೇನೆ. ತಮಿಳುನಾಡಿನ ಹೊಸೂರು ಚಿತ್ರ ಮಂದಿರದಲ್ಲಿ ಸಿನಿಮಾ ನೋಡಲು ಹೋಗುತ್ತಿದ್ದೇವೆ ಎಂದು ಸುಮನ್​​ ಹೇಳಿದ್ದಾರೆ.

ರಜನಿ ಅವರ ಹೇಳಿಕೆಗೂ ಸಿನಿಮಾಗೂ ಸಂಬಂಧ ಇಲ್ಲ. ಅವರು ಈ ಸಿನಿಮಾದ ಒಬ್ಬ ಕೆಲಸಗಾರ. ಸಿನಿಮಾ ಕರ್ನಾಟಕದಲ್ಲಿ ರಿಲೀಸ್ ಆಗಿದ್ರೆ ಚೆನ್ನಾಗಿರುತ್ತಿತ್ತು ಎಂದು ಅವರು ಹೇಳಿದ್ದಾರೆ. ಅಶೋಕ್ ನಗರ, ಚಂದ್ರಾಲೇಔಟ್, ಬಾಣಸವಾಡಿ, ಕೋರಮಂಗಲ ಹಾಗೂ ಬೆಂಗಳೂರಿನ ವಿವಿಧ ಭಾಗದಿಂದ ಅಭಿಮಾನಿಗಳು ತಮಿಳುನಾಡಿಗೆ ಹೊರಟಿದ್ದಾರೆ.

ಮಡಿವಾಳದಿಂದಲೂ ಕೆಲವು ಅಭಿಮಾನಿಗಳು ತಮಿಳುನಾಡಿನ ಕಡೆ ಹೊರಟಿದ್ದಾರೆ. ರಜನಿ ನಮಗೆ  ದೇವರ ರೀತಿ. ಅವರ ಸಿನಿಮಾ ನೋಡಲು ಎಲ್ಲಿಗೆ ಬೇಕಾದ್ರೂ ಹೋಗ್ತೀವಿ ಎಂದು ಅಭಿಮಾನಿಯೊಬ್ಬರು ಹೇಳಿದ್ದಾರೆ. ಕಾವೇರಿ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಲು ಅವರು ನಿರಾಕರಿಸಿದ್ದಾರೆ.

ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv