‘ಸಿಎಂ ಕುಮಾರಸ್ವಾಮಿಯವ್ರು ವಚನ ಭ್ರಷ್ಟರಲ್ಲ’ ಎಂದಿದ್ದು ಯಾರು?

ಹುಬ್ಬಳ್ಳಿ: ರಾಜ್ಯ ಬಜೆಟ್ ನಲ್ಲಿ ಉತ್ತರ ಕರ್ನಾಟಕ ಮತ್ತು ಹೈದ್ರಾಬಾದ್ ಕರ್ನಾಟಕಕ್ಕೆ ಯಾವುದೇ ರೀತಿಯ ಅನ್ಯಾಯವಾಗಿಲ್ಲ. ಬದಲಾಗಿ ರೈತರ ಸಾಲಮನ್ನಾ ಘೋಷಣೆಯಿಂದ ಈ ಎರಡೂ ಭಾಗದ ರೈತರಿಗೆ ಹೆಚ್ಚು ಲಾಭವಾಗಿದೆ.. ಹೀಗೆಂದು ನವಲಗುಂದ ಮಾಜಿ ಶಾಸಕ, ಜೆಡಿಎಸ್‌ನ ಎನ್ ಹೆಚ್ ಕೋನರೆಡ್ಡಿ ಮುಖ್ಯಮಂತ್ರಿ ಕುಮಾರಸ್ವಾಮಿಯವರ ಬಜೆಟ್‌ ಅನ್ನು ಸಮರ್ಥಿಸಿಕೊಂಡಿದ್ದಾರೆ.
ಹುಬ್ಬಳ್ಳಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಮುಖ್ಯಮಂತ್ರಿ ಹೆಚ್​ಡಿ ಕುಮಾರಸ್ವಾಮಿ ಹಾಗೂ ನಮ್ಮ ಪಕ್ಷದ ವತಿಯಿಂದ ನೀಡಿದ ಭರವಸೆಯಂತೆ ಸಾಲ ಮನ್ನಾ ಮಾಡಲಾಗಿದೆ. ನಾವು ರಾಜ್ಯದ ಜನತೆಗೆ ಕೊಟ್ಟ ಮಾತಿಗೆ ತಪ್ಪಿಲ್ಲ. ಅಲ್ಲದೇ ಉತ್ತರ ಕರ್ನಾಟಕದ ಹಾವೇರಿ ಜಿಲ್ಲೆಗೆ ಇಸ್ರೇಲ್ ಮಾದರಿಯ ನಿರಾವರಿ, ವಿಜಯಪುರ, ಬೆಳಗಾವಿ ಕೊಪ್ಪಳ ಜಿಲ್ಲೆಗೆ ಹೊಸ ಆಸ್ಪತ್ರೆ ನೀಡಿರುವುದನ್ನು ಮುಖ್ಯಮಂತ್ರಿಗಳು ಘೋಷಣೆ ಮಾಡಿದ್ದಾರೆ ಮತ್ತು ಹಾವೇರಿಯ ಕಾಗಿನೆಲೆ, ಅಥಣಿಯ ಶಿವ ಶಕ್ತಿ ಪೀಠ, ಮಸ್ಕಿ ಸದ್ಬೋಧನ ಪೀಠ ಸೇರಿದಂತೆ ಅನೇಕ ಪೀಠಗಳಿಗೆ ಸಣ್ಣ ಸಣ್ಣ ಸಮಾಜದ ಧಾರ್ಮಿಕ ಪೀಠ ಸೇರಿದಂತೆ ಸಂಘ ಸಂಸ್ಥೆಗಳಿಗೆ ₹ 25 ಕೋಟಿ ಅನುದಾನವನ್ನು ಮೀಸಲಿಟ್ಟಿದ್ದಾರೆ ಎಂದರು.

ನಿಜವಾದ ವಚನ ಭ್ರಷ್ಟ ಪಕ್ಷ ಬಿಜೆಪಿ:


ಸಿಎಂ ಕುಮಾರಸ್ವಾಮಿಯರು ವಚನ ಭ್ರಷ್ಟರಲ್ಲ. ಬದಲಿಗೆ, ನಿಜವಾದ ವಚನ ಭ್ರಷ್ಟ ಪಕ್ಷ ಬಿಜೆಪಿ ಮತ್ತು ಕೇಂದ್ರ ಸರ್ಕಾರ. ಬಿಜೆಪಿಯವ್ರು ಕಪ್ಪುಹಣವನ್ನು ತಂದು ದೇಶದ ಪ್ರತಿ ಕುಟುಂಬಕ್ಕೆ ₹ 15 ಲಕ್ಷ ಅಕೌಂಟ್ ‌ಗೆ ಜಮಾವಣೆ ಮಾಡಲಾಗುವುದು ಎಂದು ಹೇಳಿ ನಾಲ್ಕು ವರ್ಷಗಳು ಮುಗಿದವು. ಇನ್ನೂ ಹಣ ಮಾತ್ರ ಜನರ ಖಾತೆಗೆ ಬಿದ್ದಿಲ್ಲಾ! ಬಿಜೆಪಿಯ ರಾಜ್ಯ ಮತ್ತು ಕೇಂದ್ರ ನಾಯಕರು ಮಹದಾಯಿ ವಿಚಾರದಲ್ಲಿಯೂ ವಚನ ಭ್ರಷ್ಟರಾಗಿದ್ದಾರೆ ಎಂದರು. ಇದೇ ವೇಳೆ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಮಾಜಿ ಸಿಎಂ ಧರ್ಮಸಿಂಗ್ ಸಾವಿಗೆ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಕಾರಣ ಎಂಬ ಹೇಳಿಕೆಗೆ ಪ್ರತಿಕ್ರಿಯೆ ನೀಡಿ ಬಿಜೆಪಿಯವರು ನೂರು ಸುಳ್ಳು ಹೇಳಿ ಒಂದು ಸತ್ಯ ಹೇಳುವುದನ್ನು ನಾವು ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲಾ, ಅವರ ಈ ಹೇಳಿಕೆಯನ್ನು ರಾಜ್ಯದ ಜನತೆ ಗಮನಿಸುತ್ತಿದ್ದಾರೆ ಎಂದು ಹೇಳಿದರು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ:contact@firstnews.tv