‘ಜಿಲ್ಲಾಸ್ಪತ್ರೆಯಲ್ಲಿ ನಿಯಮಗಳನ್ನು ಗಾಳಿಗೆ ತೂರಿ ನೇಮಕ ಮಾಡಿಕೊಳ್ಳಲಾಗಿದೆ’

ಕಲಬುರ್ಗಿ: ಖಾಯಂ ಕೆಲಸಗಳಿಗೆ ಗುತ್ತಿಗೆ ಆಧಾರದ ಮೇಲೆ ನೇಮಿಸಿಕೊಳ್ಳಬಾರದು ಎನ್ನುವ ಕಾಯಿದೆ ಇದ್ದರೂ ಸಹ ನಿಯಮಗಳನ್ನೆಲ್ಲಾ ಗಾಳಿಗೆ ತೂರಿ ಗುತ್ತಿಗೆ ನೀಡಲಾಗಿದೆ ಅಂತಾ ಮಾಜಿ‌ ಸಚಿವ, ಕಾರ್ಮಿಕ ಮುಖಂಡ ಎಸ್.ಕೆ.ಕಾಂತಾ ಆರೋಪ ಮಾಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯಾವ ರೀತಿ ಗುತ್ತಿಗೆ ಪಡೆಯಬೇಕೆಂದು 1970ರಲ್ಲಿ ಕಾಯಿದೆ ರೂಪಿಸಲಾಗಿದೆ. 20ಕ್ಕಿಂತ ಹೆಚ್ಚು ಜನರನ್ನು ಕೆಲಸಕ್ಕೆ ಪಡೆಯಬೇಕಾದರೆ ಕಾರ್ಮಿಕ ಇಲಾಖೆ ಅನುಮತಿ ಪಡೆಯಬೇಕು. ಗುತ್ತಿಗೆ ಪಡೆಯುವವರೂ ಸಹ ಅನುಮತಿ ಪಡೆಯಬೇಕು. ಆದರೇ ಅವರೂ ಸಹ ಪಡೆದಿಲ್ಲ ಎಂದರು. ಜಿಲ್ಲಾಸ್ಪತ್ರೆಯಲ್ಲಿ 90ಕ್ಕೂ‌ ಹೆಚ್ಚು ಜನ ಗುತ್ತಿಗೆ ಆಧಾರದಲ್ಲಿ‌ ಕೆಲಸ ಮಾಡಿದ್ದಾರೆ. ಆದರೆ ಈಗ ಹೊಸದಾಗಿ ನೇಮಕವಾಗಿರುವ ಡೀನ್ ಹೊಸಬರನ್ನು ನೇಮಿಸಿದ್ದಾರೆ. 2017ರಲ್ಲಿ‌ ಹೊಸದಾಗಿ ಟೆಂಡರ್ ಕರೆದಾಗ ಇದೇ ಕಾರ್ಮಿಕರನ್ನು ನೇಮಿಸಿಕೊಳ್ಳಲು ಜಿಲ್ಲಾಸ್ಪತ್ರೆ ಅಧೀಕ್ಷಕರು ಡೀನ್​​​ಗೆ ಪತ್ರ ಬರೆದಿದ್ದರು. ಆದರೂ ಹೊಸಬರನ್ನು ನೇಮಿಸಿಕೊಂಡಿದ್ದಾರೆ ಎಂದರು.
ಕಳೆದ ಆರು ತಿಂಗಳಿಂದ ಈ ಕಾರ್ಮಿಕರನ್ನು ಕೆಲಸಕ್ಕೆ ಮರುನೇಮಕ ಮಾಡಿಕೊಳ್ಳುವಂತೆ ಆಗ್ರಹಿಸಿ ಹೋರಾಟ ನಡೆಸುತ್ತಿದ್ದರೂ ಕಿವಿಗೊಡುತ್ತಿಲ್ಲ ಅಂತಾ ಆಕ್ರೋಶ ವ್ಯಕ್ತಪಡಿಸಿದರು. ಜಿಲ್ಲಾಸ್ಪತ್ರೆಯಲ್ಲಿ ಗುತ್ತಿಗೆ ಆಧಾರದ‌ಲ್ಲಿ ಸ್ವಚ್ಛತಾ ಸಿಬ್ಬಂದಿ ನೇಮಕದಲ್ಲಿ ಯಾವುದೇ ಕಾನೂನು ಪಾಲಿಸಿಲ್ಲ. ಈ ಮೊದಲು ಕೆಲಸ ಮಾಡುತ್ತಿದ್ದ ಸ್ವಚ್ಛತಾ ಸಿಬ್ಬಂದಿಗೆ ಏಳೆಂಟು ತಿಂಗಳ ಸಂಬಳವನ್ನೂ ನೀಡಿಲ್ಲ. ತಮ್ಮ ಸಂಬಳದಲ್ಲಿ ಕಡಿತವಾದ ಭವಿಷ್ಯನಿಧಿ, ಇಎಸ್ಐ ವಂತಿಗೆಯನ್ನೂ ಪಾವತಿಸಿಲ್ಲ. ಈ ಬಗ್ಗೆ ಕಾರ್ಮಿಕ ಇಲಾಖೆ 2018ರ ಫೆಬ್ರವರಿ 21ರಂದು ನೋಟಿಸ್ ಜಾರಿ ಮಾಡಿದ್ದರೂ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv