ದೇವೇಗೌಡರ ಕುಟುಂಬದ ವಿರುದ್ಧ ಮತ್ತೆ ಎ.ಮಂಜು ಗುಡುಗು

ಹಾಸನ: ರಾಜ್ಯದಲ್ಲಿ ಕಾಂಗ್ರೆಸ್​-ಜೆಡಿಎಸ್ ಮೈತ್ರಿ ಮಾಡಿಕೊಂಡು ಸರ್ಕಾರ ನಡೆಸುತ್ತಿದೆ. ಈ ಮೈತ್ರಿಯನ್ನು ಉಳಿಸಿಕೊಳ್ಳಲು ಉಭಯ ಪಕ್ಷಗಳ ನಾಯಕರು ಹರಸಾಹಸ ಪಡುತ್ತಿದ್ದಾರೆ. ಆದರೆ ಹಾಸನದ ರಾಜಕೀಯ ಚಿತ್ರಣವೇ ಬೇರೆಯಾಗಿದೆ. ಯಾಕೆಂದ್ರೆ ಮಾಜಿ ಸಚಿವ ಎ.ಮಂಜು ಅವರು ಹೆಚ್.ಡಿ. ದೇವೇಗೌಡರ​ ಕುಟುಂಬದ ವಿರುದ್ಧ ಮತ್ತೆ ಭೂ ಕಬಳಿಕೆ ಆರೋಪ ಮಾಡಿದ್ದಾರೆ.

ನಗರದಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಎ. ಮಂಜು, ಹಾಸನ ತಾಲೂಕು ಸೋಮನಹಳ್ಳಿ ಕಾವಲು ಬಳಿ 69.19 ಎಕರೆ ಭೂಮಿಯನ್ನು ದೇವೇಗೌಡರ ಕುಟುಂಬದವರು ಅಕ್ರಮವಾಗಿ ಕಬಳಿಸಿದ್ದಾರೆ. ಇಷ್ಟೂ ಜಮೀನನ್ನು ಪ್ರಜ್ವಲ್ ರೇವಣ್ಣ ಮತ್ತು ದೇವೇಗೌಡರ ಅತ್ತೆ ಹೆಸರಿಗೆ ನೋಂದಣಿ ಮಾಡಿಸಿ ಕೊಂಡಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

2014-15 ರಲ್ಲಿ ಅಧಿಕಾರಿಗಳನ್ನು ದುರ್ಬಳಕೆ ಮಾಡಿಕೊಂಡು ದಾಖಲೆಗಳನ್ನು ತಿದ್ದಿಸಿ ಈ ಭೂಮಿಯನ್ನು ತಮ್ಮ ಹೆಸರಿಗೆ ನೋಂದಣಿ ಮಾಡಿಸಿಕೊಂಡಿದ್ದಾರೆ.  ಈ‌ ಸಂಬಂಧ ಸರ್ಕಾರ ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ನೀಡಿದ್ದೇನೆ. ರೇವಣ್ಣರ ಒಟ್ಟಾರೆ ಆಸ್ತಿ ವಿವರಕ್ಕಾಗಿ ಮನವಿಯನ್ನೂ ಸಲ್ಲಿಸಿದ್ದೇನೆ ಅಂತಾ ತಿಳಿಸಿದರು.

ಇದೇ ವೇಳೆ, ಪ್ರಕರಣದ ಬಗ್ಗೆ ಜಿಲ್ಲಾಧಿಕಾರಿ ರೋಹಿಣಿಯವರು 3 ದಿನಗಳ ಒಳಗೆ ಕ್ರಮ ಕೈಗೊಳ್ಳಬೇಕು. ಇಲ್ಲವಾದ್ರೆ ಭೂ ಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯಕ್ಕೆ ಹೋಗುತ್ತೇನೆ ಅಂತಾ ಮಂಜು ಹೇಳಿದರು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv