ವಾರಣಾಸಿಯಲ್ಲಿ ಮೋದಿ ವಿರುದ್ಧ ಡುಪ್ಲಿಕೇಟ್ ಮೋದಿ, ನಿವೃತ್ತ ಜಸ್ಟಿಸ್, ಮಾಜಿ ಯೋಧ, 111 ರೈತರ ಸ್ಪರ್ಧೆ

ನವದೆಹಲಿ: ಲೋಕಸಭಾ ಚುನಾವಣೆಗೆ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಾಂಗ್ರೆಸ್​​ನಿಂದ ಯಾರು ಕಣಕ್ಕಿಳಿಯುತ್ತಾರೆ ಅನ್ನೋ ಕುತೂಹಲ ಇದೆ. ಈ ಮಧ್ಯೆ ಮೋದಿ ವಿರುದ್ಧ ವಾರಣಾಸಿ ಕ್ಷೇತ್ರದಿಂದ ಕಣಕ್ಕಿಳಿಯಲು ಹಲವಾರು ಅಭ್ಯರ್ಥಿಗಳು ಸಜ್ಜಾಗಿದ್ದಾರೆ.

ನಿವೃತ್ತ  ಜಸ್ಟಿಸ್ ಸಿ.ಎಸ್ ಕರ್ಣನ್‌ ವಾರಣಾಸಿ ಲೋಕಸಭಾ ಕ್ಷೇತ್ರದಿಂದ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಸ್ಪರ್ಧೆ ಮಾಡಲು ಮುಂದಾಗಿದ್ದಾರೆ. ಈಗಾಗ್ಲೇ ಅವರು ಕೇಂದ್ರ ಚೆನ್ನೈನಿಂದ ಸ್ಪರ್ಧೆ ಮಾಡ್ತಿದ್ದಾರೆ. ಎರಡನೇ ಕ್ಷೇತ್ರವಾಗಿ ವಾರಣಾಸಿಯನ್ನು ಆಯ್ಕೆ ಮಾಡಿಕೊಂಡಿದ್ದಾಗಿ ತಿಳಿಸಿದ್ದಾರೆ. ಜಸ್ಟಿಸ್​ ಜಿನ್ನಸ್ವಾಮಿ ಸ್ವಾಮಿನಾಥನ್ ಕರ್ಣನ್, ಹುದ್ದೆಯಲ್ಲಿರುವಾಗಲೇ ಜೈಲಿಗೆ ಹೋದ ಭಾರತದ ಮೊದಲ ಹೈಕೋರ್ಟ್​ ನ್ಯಾಯಮೂರ್ತಿ. 2017ರ ಮೇನಲ್ಲಿ ನ್ಯಾಯಾಂಗ ನಿಂದನೆ ಆರೋಪದ ಮೇಲೆ ಕರ್ಣನ್​ ಅವರಿಗೆ ಸುಪ್ರೀಂ ಕೋರ್ಟ್​ 6 ತಿಂಗಳ ಜೈಲು ಶಿಕ್ಷೆ ನೀಡಿತ್ತು.

ಇನ್ನು  ಮಾಜಿ ಬಿಎಸ್‌ಎಫ್​​ ಯೋಧ ತೇಜ್ ಬಹದ್ದೂರ್ ಯಾದವ್ ಕೂಡಾ ವಾರಾಣಾಸಿಯಿಂದ ಸ್ಪರ್ಧೆ ಮಾಡುತ್ತಿದ್ದಾರೆ.  ಈ ಹಿಂದೆ ಸೇನೆಯ ಊಟದ ಗುಣಮಟ್ಟದ ಬಗ್ಗೆ ತೇಜ್‌ ಬಹದ್ದೂರ್ ವಿಡಿಯೋವೊಂದನ್ನು ಸೋಷಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದರು. ಸೈನಿಕರಿಗೆ ಕಳಪೆ ಗುಣಮಟ್ಟದ ಆಹಾರ ನೀಡುತ್ತಿರುವ ಬಗ್ಗೆ ವಿಡಿಯೋ ಶೇರ್ ಮಾಡಿದ್ದರು. ಇದು ಮೋದಿ ಸರ್ಕಾರಕ್ಕೆ ಮುಜುಗರ ಉಂಟು ಮಾಡಿತ್ತು. ಬಳಿಕ ತೇಜ್​ ಬಹದ್ದೂರ್​​ರನ್ನು ಸೇನೆಯಿಂದ ವಜಾ ಮಾಡಲಾಗಿತ್ತು. ಸದ್ಯ ತೇಜ್ ಬಹದ್ದೂರ್  ಮೋದಿ ವಿರುದ್ಧ ವಾರಣಾಸಿ ಕ್ಷೇತ್ರದಿಂದ ಸ್ಪರ್ಧಿಸಲು ಸಜ್ಜಾಗಿದ್ದಾರೆ. ಈ ಬಗ್ಗೆ ಮಾತನಾಡಿರುವ ಅವರು, ನಾನು ಯೋಧರಿಗೆ ಸರಿಯಾದ ಸೌಲಭ್ಯಗಳಿಲ್ಲದಿರುವ ಬಗ್ಗೆ  ಹಾಗೂ ಸೈನಿಕರ ಬಗ್ಗೆ ಇರುವ ತಿರಸ್ಕಾರ ಭಾವನೆಯನ್ನು ಹೈಲೆಟ್ ಮಾಡುತ್ತೇನೆ. ಹೀಗಾಗಿ ಪ್ರಧಾನಿ ಕ್ಷೇತ್ರ ವಾರಣಾಸಿಯಿಂದ ಸ್ಪರ್ಧೆ ಮಾಡ್ತಿದ್ದೇನೆ. ನನ್ನ ಧ್ವನಿಯನ್ನು ನೀವೆಲ್ಲ ಕೇಳುತ್ತಿರಿ ಎಂದು ಭಾವಿಸಿದ್ದೇನೆ ಎಂದು ತೇಜ್ ಬಹದ್ದೂರ್ ಯಾದವ್ ಹೇಳಿದ್ದಾರೆ.

ಅತ್ತ ದೆಹಲಿಯಲ್ಲಿ ಮೋದಿ ವಿರುದ್ಧ ಪ್ರತಿಭಟನೆ ನಡೆಸಿದ್ದ ತಮಿಳುನಾಡಿನ 111 ರೈತರು ವಾರಣಾಸಿ ಲೋಕಸಭಾ ಕ್ಷೇತ್ರದಿಂದ ಮೋದಿ ವಿರುದ್ಧ ಸ್ಪರ್ಧೆ ನಡೆಸಲು ಸಜ್ಜಾಗಿದ್ದಾರೆ. ತಮಿಳುನಾಡು ರೈತ ಮುಖಂಡ ಪಿ ಅಯ್ಯಕಣ್ಣು ನೇತೃತ್ವದಲ್ಲಿ ಪ್ರಧಾನಿ ಮೋದಿ ವಿರುದ್ಧ  111 ರೈತರು ಸ್ಪರ್ಧಿಸಲು ನಿರ್ಧರಿಸಿದ್ದಾರೆ.

ಇನ್ನು ಮೋದಿಯ ಮುಖಲಕ್ಷಣವನ್ನು ಹೋಲುವ ಅಭಿನಂದನ್​ ಪಥಾಕ್​​​ ಈಗಾಗಲೇ ಲಖನೌದಿಂದ ಸ್ಪರ್ಧಿಸುತ್ತಿದ್ದು, ಮುಂದಿನ 26ರಂದು ವಾರಣಾಸಿಯಿಂದಲೂ ನಾಮಪತ್ರ ಸಲ್ಲಿಸುವುದಾಗಿ ಹೇಳಿದ್ದಾರೆ.  ಈ ಎಲ್ಲಾ ಬೆಳವಣಿಗೆಗಳ ನಡುವೆ ಉತ್ತರಪ್ರದೇಶದ ವಾರಣಾಸಿ ಕ್ಷೇತ್ರದ ಚುನಾವಣೆ ಮತ್ತಷ್ಟು ರಂಗೇರಿದೆ.


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv