‘ಜನರೇ ಟೋಪಿ ಹಾಕಿದ್ರು! ನಿನ್ಯಾಕೇ ಈಗ ಟೋಪಿ ಹಾಕ್ತಿಯಪ್ಪ?’

ಮೈಸೂರು: ಬದಾಮಿ ಕ್ಷೇತ್ರದ ಜನರಿಗೆ ಕೃತಜ್ಞತೆ ಸಲ್ಲಿಸಿ ಮೈಸೂರಿಗೆ ಆಗಮಿಸಿರೋ ಮಾಜಿ ಸಿಎಂ ಸಿದ್ದರಾಮಯ್ಯನವರು ಇಂದು ವರುಣಾ ಕ್ಷೇತ್ರದ ಮತದಾರರಿಗೆ ಅಭಿನಂದನೆ ಸಲ್ಲಿಸಲಿದ್ದಾರೆ. ಇಂದು ಬೆಳಗ್ಗೆ ಜೆ.ಪಿ.ನಗರದಲ್ಲಿರೋ ತಮ್ಮ ನಿವಾಸಕ್ಕೆ ಆಗಮಿಸಿದ ಮಾಜಿ ಸಿಎಂ ಸಿದ್ದರಾಮಯ್ಯ ಸ್ವಲ್ಪ ರಿಲ್ಯಾಕ್ಸ್ ಮೂಡ್‌ನಲ್ಲಿದ್ದರು. ಮಾಜಿ ಸಿಎಂ ಮನೆಗೆ ಆಗಮಿಸಿದ ವಿಷಯ ತಿಳಿದ ಬೆಂಬಲಿಗ ಚಂದನ್‌ ಎಂಬಾತ ಮೈಸೂರು ಪೇಟ ತೊಡಿಸಿ ಸನ್ಮಾನ ಮಾಡಲು ಮುಂದಾಗಿದ್ದಾರೆ. ಈ ವೇಳೆ ಸಿದ್ದರಾಮಯ್ಯನವರು ಪರೋಕ್ಷವಾಗಿ ಚಾಮುಂಡೇಶ್ವರಿ ಮತದಾರರ ಮೇಲಿನ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ‘ಜನರೇ ಟೋಪಿ ಹಾಕಿದ್ರು ನಿನ್ಯಾಕೇ ಈಗ ಟೋಪಿ ಹಾಕ್ತಿಯಪ್ಪ’ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ವ್ಯಂಗ್ಯವಾಗಿ ಹೇಳಿದ್ದಾರೆ.

ಚಂದನ್ ಎಂಬಾತ ಮನೆಗೆ ಆಗಮಿಸಿ ನಿಮಗೆ ಸನ್ಮಾನ ಮಾಡಬೇಕು ಎಂದಾಗ , ಬಾ ಎಂದು ಕೈ ಸನ್ನೆ ಮೂಲಕ ಸೂಚನೆ ನೀಡಿದರು.‌ ಶಾಲು ಹೊದಿಸಿ, ಹಾರ ಹಾಕಿ ಮೈಸೂರು ಪೇಟ ತೊಡಿಸಲು ಹೋದಾಗ, ಹೇ… ಇದೆಲ್ಲಾ ಯಾಕಪ್ಪ ಅಂತಾ ಉದ್ಘಾರ ತೆಗೆದಿದ್ದಾರೆ. ಆದ್ರೂ ಪೇಟ ತೊಡಿಸುತ್ತಿದ್ದಾಗ ಜನರೇ ಟೋಪಿ ಹಾಕಿದ್ರು ನಿನ್ಯಾಕೇ ಈಗ ಟೋಪಿ ಹಾಕ್ತಿಯಪ್ಪ ಎಂದು ಹೇಳಿದ್ದಾರೆ. ನಗುತ್ತಲೇ ಮೈಸೂರು ಪೇಟ ತೆಗೆದು ಇಟ್ಟು ಬಳಿಕ ಸಿದ್ದರಾಮಯ್ಯ ಆಪ್ತರೊಂದಿಗೆ ಸಮಾಲೋಚನೆ ನಡೆಸಿದರು.
ಕಳೆದ ನಾಲ್ಕೈದು ದಿನಗಳಿಂದ ಬದಾಮಿ ಕ್ಷೇತ್ರದ ಜನತೆಗೆ ಕೃತಜ್ಞತೆ ಸಲ್ಲಿಸಿದ ಮಾಜಿ ಸಿಎಂ, ತಮ್ಮ ಮಗನನ್ನು ಗೆಲ್ಲಿಸಿದ ವರುಣಾ ಜನತೆಗೆ ಖಾಸಗಿ ಕಲ್ಯಾಣ ಮಂಟಪದಲ್ಲಿ ಕೃತಜ್ಞತೆ ಸಲ್ಲಿಸಲಿದ್ದಾರೆ. ನಂತರ ಸಂಜೆ ಮುಸ್ಲಿಂ ಬಾಂಧವರೊಂದಿಗೆ ಇಫ್ತಿಯಾರ್‌ ಕೂಟದಲ್ಲಿ ಭಾಗಿಯಾಗಲಿದ್ದಾರೆ. ನಾಳೆ ಖಾಸಗಿ ಹೋಟೆಲ್​ನಲ್ಲಿ ಮೈಸೂರು ಹಾಗೂ ಚಾಮರಾಜನಗರದಲ್ಲಿ ಗೆದ್ದಿರುವ ಹಾಗೂ ಸೋತಿರುವವವರ ಜೊತೆ ಸಭೆ ನಡೆಸಲಿದ್ದಾರೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗಾಗಿ ಸಂಪರ್ಕಿಸಿ:cantact@firstnews.tv