‘ನಮ್ಮ ಶಾಸಕರಿಗೇ ಬ್ಲ್ಯಾಕ್​ ಮನಿ ಕೊಡೋಕೆ ಬರ್ತಾರಲ್ಲ, ಮೋದಿಗೆ ನಾಚಿಕೆ ಆಗ್ಬೇಕು..!’

ಬಾಗಲಕೋಟೆ: ಕಪ್ಪು ಹಣದ ವಿರುದ್ಧ ಹೋರಾಡುವ ಪ್ರಧಾನಿ ಮೋದಿ ಅವ್ರೆ, ನೀವೇ ನಮ್ಮ ಶಾಸಕರಿಗೆ ಕಪ್ಪು ಹಣ ಕೊಡೋಕೆ ಬರ್ತೀರಲ್ಲಾ! ನಾಚಿಕೆ ಆಗಲ್ವ!? ಅಂತಾ ಮಾಜಿ ಸಿಎಂ ಸಿದ್ದರಾಮಯ್ಯ ಪ್ರಧಾನಿ ವಿರುದ್ಧ ಕಿಡಿಕಾರಿದ್ದಾರೆ. ಬದಾಮಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಶಾಸಕರನ್ನು ಸೆಳೆಯಲು ಪ್ರಯತ್ನ ಪಟ್ಟಿದ್ದು ನಿಜಾ ಅಂತಾ ಸ್ವತಃ ಬಿಎಸ್​ವೈ ಅವರೇ ಒಪ್ಪಿಕೊಂಡಿದ್ದಾರೆ. ಮೋದಿ, ಶಾ, ಯಡಿಯೂರಪ್ಪ ಮಾಡಿದ ಅಪಪ್ರಚಾರದಿಂದ ನಾವು ಸೋಲು ಕಂಡಿದ್ದೇವೆ. ಬಹುಶಃ ಜನ ಅವರ ಅಪ್ರಚಾರವನ್ನು ನಂಬಿದ್ರು ಅಂತಾ ನನಗೆ ಅನಿಸುತ್ತೆ ಅಂತಾ ಅಭಿಪ್ರಾಯ ವ್ಯಕ್ತಪಡಿಸಿದ್ರು. 2019ರಲ್ಲಿ ರಾಹುಲ್‌ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ ಸರ್ಕಾರ ಮತ್ತೆ ಕೇಂದ್ರದಲ್ಲಿ ಅಧಿಕಾರಕ್ಕೆ ಬರಲಿದೆ. ಆ ಬಗ್ಗೆ ಸ್ಪಷ್ಟ ಸೂಚನೆ ಸಿಕ್ಕಿದೆ. ಕಾಂಗ್ರೆಸ್​ನ ಎಲ್ಲಾ ಮಿತ್ರಪಕ್ಷಗಳು ಒಟ್ಟುಗೂಡಲಿವೆ. ಬಿಜೆಪಿ ಏನೇ ತಿಪ್ಪರಲಾಗ ಹಾಕಿದ್ರು ಮುಂದಿನ ಬಾರಿ ಕೇಂದ್ರದಲ್ಲಿ ಅಧಿಕಾರಕ್ಕೆ ಬರಲ್ಲ ಅಂತಾ ವಿಶ್ವಾಸ ವ್ಯಕ್ತಪಡಿಸಿದ್ರು. ಇನ್ನು ನಾನು ಮನುಷ್ಯತ್ವಕ್ಕೆ ತಲೆ ಬಾಗುತ್ತೇನೆ. ರಾಜಕೀಯವಾಗಿ ಯಾರೇ ಬಂದ್ರು ಅವ್ರಿಗೆ ತಲೆ ಬಾಗಿಸೋಲ್ಲ ಎಂದರು. ಚಾಮುಂಡೇಶ್ವರಿ ಕ್ಷೇತ್ರದ ಜನ ಆಮಿಷಕ್ಕೆ ಒಳಗಾದ್ರು. ಆದ್ರೆ ಬದಾಮಿ ಜನ ಆಮಿಷಕ್ಕೆ ಒಳಗಾಗಲಿಲ್ಲ, ವರುಣಾ ರೀತಿಯಲ್ಲಿ ಬದಾಮಿಯನ್ನೂ ಅಭಿವೃದ್ಧಿ ಮಾಡುತ್ತೇನೆ ಅಂತಾ ಅವರು ಭರವಸೆ ನೀಡಿದ್ರು.

ಅಖಂಡ ಕರ್ನಾಟಕದ ಕಲ್ಪನೆ ನಮ್ಮಲ್ಲಿ ಬರಬೇಕು
ಉತ್ತರ ಕರ್ನಾಟಕ ಕೊರಗು ಹೋಗಿ, ಎಲ್ಲರಲ್ಲೂ ಅಖಂಡ ಕರ್ನಾಟಕದ ಕಲ್ಪನೆ ಬರಬೇಕು. ನಾವೆಲ್ಲಾ ಕನ್ನಡಿಗರು ಎಂಬುದು ಎಲ್ಲರಲ್ಲೂ ಇರಬೇಕು ಎಂದರು. ಹೈದರಾಬಾದ್ ಕರ್ನಾಟಕದ ಎಲ್ಲಾ ತಾಲೂಕುಗಳ ಅಭಿವೃದ್ಧಿಗೆ ಹಣವನ್ನು ಮೀಸಲಿಟ್ಟಿದ್ದೇವೆ. ಹಿಂದೆ ಯಾವ ಸರ್ಕಾರಗಳು ಮಾಡದಷ್ಟು ಅಭಿವೃದ್ಧಿ ಕಾರ್ಯಗಳನ್ನು ಐದು ವರ್ಷಗಳಲ್ಲಿ ನಮ್ಮ ಸರ್ಕಾರ ಮಾಡಿತ್ತು. ಬಡವರಿಗೆ ಉಚಿತವಾಗಿ ಏಳು ಕೆಜಿ ಅಕ್ಕಿಯನ್ನು ದೇಶದ ಯಾವ ರಾಜ್ಯಗಳಲ್ಲೂ ಕೊಟ್ಟಿಲ್ಲ. ಬಿಜೆಪಿಯ ಅಧಿಕಾರದಲ್ಲಿರುವ ಯಾವ ರಾಜ್ಯದಲ್ಲಿಯೂ ಉಚಿತ ಅಕ್ಕಿ ಕೊಡ್ತಿಲ್ಲ. ಆದ್ರೆ ನಾವು ಕೊಟ್ಟಿದ್ದೇವೆ. ಇವತ್ತು ನಾವು ಸೋತಿರಬಹುದು. ಜನ ನಮ್ಮ ಅಭಿವೃದ್ಧಿ ಕಾರ್ಯಗಳಿಗೆ ಸರ್ಟಿಫಿಕೇಟ್ ಕೊಡ್ಲಿಲ್ಲ. ಅನೇಕ ಜನಪರ ಕಾರ್ಯಗಳನ್ನು ಮಾಡಿದ್ರೂ ನಮ್ಮ ಸರ್ಕಾರ ಅಧಿಕಾರಕ್ಕೆ ಬರಲಿಲ್ಲ ಅಂತಾ ಭಾವುಕತೆಯಿಂದ ನುಡಿದರು. ಈ ವೇಳೆ ಗೆಲುವಿಗೆ ಶ್ರಮಿಸಿದ ಎಲ್ಲಾ ಮುಖಂಡರ ಹೆಸರುಗಳನ್ನು ಪ್ರಸ್ತಾಪಿಸಿ ಕೃತಜ್ಞತೆ ಹೇಳಿದ್ರು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv