‘ಹೊರಡಿ ಉಪಚುನಾವಣಾ ಪ್ರಚಾರದಲ್ಲಿ ತೊಡಗಿ’ ಶಾಸಕರಿಗೆ ಯಡಿಯೂರಪ್ಪ ಸೂಚನೆ

ರಾಜ್ಯದಲ್ಲಿ ಮೇ 19 ರಂದು ಚಿಂಚೋಳಿ ಮತ್ತು ಕುಂದಗೋಳ ವಿಧಾನಸಭಾ ಕ್ಷೇತ್ರಗಳಿಗೆ ಉಪ-ಚುನಾವಣೆ ನಡೆಯಲಿದ್ದು ಚುನಾವಣಾ ಪ್ರಚಾರ ಬಿರುಸುಗೊಂಡಿದೆ. ನಿನ್ನೆಯಷ್ಟೇ ಎರಡೂ ರಾಷ್ಟ್ರೀಯ ಪಕ್ಷಗಳ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ರು.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಸೋಮವಾರದಿಂದ ಬಿಜೆಪಿ ಶಾಸಕರುಗಳು ಎರಡು ಕ್ಷೇತ್ರಗಳಿಗೆ ಪ್ರಚಾರಕ್ಕೆ ತೆರಳುವಂತೆ ಸೂಚನೆ ನೀಡಿದ್ದಾರೆ. ಮೇ 6 ರಿಂದ ಮೇ 17 ರವರೆಗೂ 11 ದಿನಗಳ ಕಾಲ ಕುಂದಗೋಳ, ಚಿಂಚೋಳಿ ಕ್ಷೇತ್ರಗಳಲ್ಲಿ ಪ್ರಚಾರ ಕಾರ್ಯ ನಡೆಯಲಿದ್ದು ಬಿಜೆಪಿಯ ಎಲ್ಲಾ 104 ಶಾಸಕರುಗಳು, ಅಭ್ಯರ್ಥಿಗಳ ಪರ ಪ್ರಚಾರ ಮಾಡಿ ಎಂದು ಸೂಚನೆ ನೀಡಿದ್ದಾರೆ.

ಕುಂದಗೋಳ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಎಸ್ ಐ ಚಿಕ್ಕನಗೌಡರ್, ಕಾಂಗ್ರೆಸ್‌ನಿಂದ ಕುಸುಮಾ ಶಿವಳ್ಳಿ ನಾಮಪತ್ರ ಸಲ್ಲಿಸಿದ್ದಾರೆ. ಚಿಂಚೊಳ್ಳಿ ಕ್ಷೇತ್ರದಲ್ಲಿ ಬಿಜೆಪಿಯ ಅವಿನಾಶ್ ಜಾಧವ್ ಮತ್ತು ಕಾಂಗ್ರೆಸ್​ನ ಸುಭಾಷ್ ರಾಠೋಡ ನಾಮಪತ್ರ ಸಲ್ಲಿಸಿದ್ದು ಇವರ ನಡುವೆ ನೇರ ಹಣಾಹಣಿ ನಡೆಯಲಿದೆ. ಒಂದೆಡೆ ಈ ಉಪಚುನಾವಣೆ ಸಮ್ಮಿಶ್ರ ಸರ್ಕಾರದ ಮೈತ್ರಿಪಕ್ಷಗಳ ಪಾಲಿಗೆ ಪ್ರತಿಷ್ಠೆಯ ವಿಚಾರವಾದ್ರೆ, ಶತಾಯಗತಾಯ ಗೆಲುವು ಸಾಧಿಸೋ ವಿಶ್ವಾಸದಲ್ಲಿ ಬಿಜೆಪಿ ಇದೆ. ಹೀಗಾಗಿ ಪ್ರಚಾರ ಕಾರ್ಯ ಕೂಡ ಜೋರಾಗೇ ನಡೆಯಲಿದೆ. ಮೇ 19ರಂದು ಉಪ ಚುನಾವಣೆ ನಡೆಯಲಿದ್ದು, ಮೇ 23ರಂದು ಫಲಿತಾಂಶ ಪ್ರಕಟವಾಗಲಿದೆ.