ನನ್ನ ಡೆಡ್ ಬಾಡಿ ಸಹ ಬಿಜೆಪಿಗೆ ಹೋಗಲ್ಲ: ಹೆಚ್.ಸಿ.ಮಹದೇವಪ್ಪ

ಮೈಸೂರು: ನಾನು ಯಾವುದೇ ಕಾರಣಕ್ಕೂ ಬಿಜೆಪಿ ಸೇರುವುದಿಲ್ಲ. ನನ್ನ ಡೆಡ್ ಬಾಡಿ ಸಹ ಬಿಜೆಪಿಗೆ ಹೋಗುವುದಿಲ್ಲ  ಅಂತ ಮಾಜಿ ಸಚಿವ ಎಚ್.ಸಿ.ಮಹದೇವಪ್ಪ ಹೇಳಿಕೆ ನೀಡಿದ್ದಾರೆ.

ಮೈಸೂರಿನಲ್ಲಿ ಮಾತನಾಡಿದ ಅವರು, ನನ್ನ ಹಾಗೂ ಸಿದ್ದರಾಮಯ್ಯ ನಡುವೆ ಸ್ನೇಹ ಹಳಸಿದೆ ಅಂತಾ ಹೇಳಿದವರು ಯಾರು? ಅವರೇನಾದರೂ ಹೇಳಿದ್ದಾರಾ..? ನಾವು ಚೆನ್ನಾಗಿಯೇ ಇದ್ದೇವೆ. ನಮ್ಮ ಸಂಬಂಧ ಕೆಟ್ಟಿದೆ ಅಂತ ಸುದ್ದಿ ಸೃಷ್ಟಿಸಿ ಲಾಭ ಮಾಡಿಕೊಳ್ಳುವ ಕೆಲಸವನ್ನು ಕೆಲವರು ಮಾಡುತ್ತಿದ್ದಾರೆ‌. ಅದು ಆಗಲ್ಲ. ನಾನು ಯಾವುದೇ ಕಾರಣಕ್ಕೂ ಬಿಜೆಪಿ ಸೇರುವುದಿಲ್ಲ. ನನ್ನ ಡೆಡ್ ಬಾಡಿ ಸಹ ಬಿಜೆಪಿಗೆ ಹೋಗುವುದಿಲ್ಲ ಎಂದರು.

ನಾನು ಬಿಜೆಪಿಗೆ ಹೋಗುತ್ತೇನೆಂದು ಪಿತೂರಿ ಮಾಡಲಾಗುತ್ತಿದೆ. ನಾನು ಬಿಜೆಪಿಗೆ ಹೋಗುತ್ತೇನೆಂದು ಕೆಲವರು ಭಾವಿಸಿದ್ದರೆ ಅದು ಅವರ ಭ್ರಮೆಯಾಗಲಿದೆ. ನಾನು ಕಾಂಗ್ರೆಸ್ ಪಕ್ಷದ ಮೂಲಕ ರಾಜಕೀಯ ಆರಂಭಿಸಿದ್ದೇನೆ. ಕಾಂಗ್ರೆಸ್ ಪಕ್ಷದಲ್ಲೇ ನನ್ನ ರಾಜಕೀಯ ಅಂತ್ಯವಾಗಲಿದೆ. ಸಿದ್ಧಾಂತ ಇಟ್ಟುಕೊಂಡು ರಾಜಕೀಯಕ್ಕೆ ಬಂದಿದ್ದೇನೆ. ಅಧಿಕಾರಕ್ಕಾಗಿ ರಾಜಕೀಯಕ್ಕೆ ಬಂದಿಲ್ಲ. ನಾನು ಯಾವುದೇ ಕಾರಣಕ್ಕೂ ಕಾಂಗ್ರೆಸ್ ತೊರೆಯುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಬಿಜೆಪಿಯಿಂದ ಕಾಂಗ್ರೆಸ್​​​ಗೆ ಬಂದಿರುವವರು ಈ ರೀತಿ‌ ಪಿತೂರಿ ಮಾಡುತ್ತಿದ್ದಾರೆ. ಈ ಬಗ್ಗೆ ಪಕ್ಷದ ವೇದಿಕೆಯಲ್ಲಿ‌  ಮಾತನಾಡುತ್ತೇನೆ ಅಂದ್ರು.

ಚುನಾವಣೆ ಸೋಲಿನ ನಂತರ ದಿಗ್ಭ್ರಮೆಗೊಳಗಾಗಿದ್ದೆ. ಸೋಲಿನಿಂದ ಆಚೆ ಬರಲು ಒಂದೂವರೆ ತಿಂಗಳು ಬೇಕಾಯಿತು. ದೇಹದ ಅಂಗಾಂಗಗಳ ಪುನಶ್ಚೇತನಕ್ಕೆ‌ ಒಂದೂವರೆ ತಿಂಗಳಾಯಿತು. ಅನಾರೋಗ್ಯದ ಹಿನ್ನೆಲೆಯಲ್ಲಿ ಪ್ರಕೃತಿ ಚಿಕಿತ್ಸೆಗೆ ತೆರಳಿದ್ದೆ. ಈ ಕಾರಣದಿಂದ ಸಭೆ ಸಮಾರಂಭದಲ್ಲಿ ಭಾಗಿಯಾಗಿರಲಿಲ್ಲ ಅಂತ ಚುನಾವಣೆಯ ಸೋಲಿನ ಬಗ್ಗೆ ಮಾಧ್ಯಮಗಳ‌ ಮುಂದೆ  ಹೆಚ್.ಸಿ.ಮಹದೇವಪ್ಪ ಪ್ರತಿಕ್ರಿಯೆ ನೀಡಿದ್ರು.

ತಿ.ನರಸೀಪುರ ಕ್ಷೇತ್ರದಲ್ಲಿ ಪರಾಭವಗೊಂಡಿರುವ ಮಹದೇವಪ್ಪ, ನನ್ನ ಸೋಲಿಗೆ ಜೆಡಿಎಸ್ ಕಾರಣವಲ್ಲ,  ಬದಲಿಗೆ ಬಿಜೆಪಿ ತಾನು ಗೆಲ್ಲಲು ಆಗದ ಜಾಗದಲ್ಲಿ ತನ್ನ ಓಟ್​​ಗಳನ್ನು ಜೆಡಿಎಸ್​​ಗೆ ವರ್ಗಾವಣೆ ಮಾಡಿದ್ದೇ ಕಾರಣ ಎಂದರು. ಅಭಿವೃದ್ಧಿ ಮೇಲೆ ಜಾತಿ ಸವಾರಿ ಮಾಡಿದೆ. ನಮ್ಮ ಯೋಜನೆಗಳಿಗೆ ಜನ ಮನ್ನಣೆ ನೀಡಲೇ ಇಲ್ಲ. ನನ್ನ ಸೋಲಿಗಿಂತ ಸಿದ್ದರಾಮಯ್ಯ ಹಾಗೂ ಪಕ್ಷದ ಸೋಲು ನನಗೆ ಆಘಾತ ಮೂಡಿಸಿತು. ಇದರಿಂದ ಹೊರಬರಲು ನಮಗೆ ಒಂದೂವರೆ ತಿಂಗಳು ಬೇಕಾಯಿತು. ನನ್ನ ಮಗನ ಹೆಸರು ಕ್ಷೇತ್ರಕ್ಕೆ ಕೇಳಿಬಂದಿದ್ದಕ್ಕೂ, ನನ್ನ ಸೋಲಿಗೂ ಸಂಬಂಧವೇ ಇಲ್ಲ ಎಂದು ಮಹದೇವಪ್ಪ ಸೋಲಿನ ವಿಮರ್ಶೆ ಮಾಡಿದರು.

ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv