ಎತ್ತಿನಹೊಳೆ ಯೋಜನೆಗೆ ಎನ್​​ಜಿಟಿ ಸಮ್ಮತಿ

ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಎತ್ತಿನಹೊಳೆ ಯೋಜನೆಗೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಸಮ್ಮತಿ ನೀಡಿದೆ.  ಎತ್ತಿನಹೊಳೆ ಯೋಜನೆಯನ್ನು ವಿರೋಧಿಸಿ ಸಲ್ಲಿಸಲಾಗಿದ್ದ ಎಲ್ಲಾ ಅರ್ಜಿಗಳನ್ನು ವಜಾಗೊಳಿಸಿದೆ. ಮೇ 13ರಂದು ಈ ಪ್ರಕರಣದ ವಿಚಾರಣೆಯನ್ನು ಪೂರ್ಣಗೊಳಿಸಿದ್ದ ನ್ಯಾಯಮೂರ್ತಿ ಆದರ್ಶಕುಮಾರ್ ಗೋಯಲ್ ನೇತೃತ್ವದ ಎನ್‌ಜಿಟಿ ಪೀಠ, ಪ್ರಕರಣದ ತೀರ್ಪನ್ನು ಕಾಯ್ದಿರಿಸಿತ್ತು. ನಿನ್ನೆ ಇದರ ತೀರ್ಪು ಪ್ರಕಟಿಸಿದ್ದು, ಈ ಯೋಜನೆ ವಿರೋಧಿಸಿ ಸಲ್ಲಿಕೆಯಾಗಿದ್ದ ಎಲ್ಲಾ ಅರ್ಜಿಗಳನ್ನು ವಜಾಗೊಳಿಸಿದೆ. ಜೊತೆಗೆ ಯೋಜನೆಯ ಕಾಮಗಾರಿ ಮುಂದುವರಿಸಲು ಒಪ್ಪಿಗೆ ಸೂಚಿಸಿದೆ. ಈ ಮೂಲಕ ಕೋಲಾರ, ಚಿಕ್ಕಬಳ್ಳಾಪುರ ಇನ್ನಿತರ ಜಿಲ್ಲೆಗಳ ಜನರಿಗೆ ಕುಡಿಯುವ ನೀರು ಪೂರೈಸುವ ಮಹತ್ವದ ಯೋಜನೆಗೆ ಮತ್ತೆ ಜೀವ ಬಂದಂತಾಗಿದೆ.

ಈ ಯೋಜನೆಗಾಗಿ ಪರಿಸರ ಸಂರಕ್ಷಣೆಗೆ ಸಂಬಂಧಿಸಿದ ಎಲ್ಲಾ ನಿಯಮಗಳನ್ನೂ ಉಲ್ಲಂಘನೆ ಮಾಡಲಾಗಿದೆ ಅಂತಾ ಅರ್ಜಿದಾರರು ಆರೋಪಿಸಿದ್ದರು. ಕುಡಿಯುವ ನೀರು ಪೂರೈಸುವ ಉದ್ದೇಶದಿಂದ ಈ ಯೋಜನೆ ರೂಪಿಸಲಾಗಿದೆ, ಆದ್ರೆ ಇದಕ್ಕಾಗಿ ಯಾವುದೇ ನಿಯಮಗಳನ್ನು ಉಲ್ಲಂಘಿಸಿಲ್ಲ ಅಂತಾ ರಾಜ್ಯ ಸರ್ಕಾರ ತನ್ನ ವಾದ ಮಂಡಿಸಿತ್ತು. ಇದೆಲ್ಲವನ್ನೂ ಸೂಕ್ಷ್ಮವಾಗಿ ವಿಚಾರಣೆ ನಡೆಸಿದ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಅರ್ಜಿದಾರರ ಆರೋಪವನ್ನು ತಳ್ಳಿ ಹಾಕಿ ಅವರ ಅರ್ಜಿ ವಜಾಗೊಳಿಸಿದೆ. ಜೊತೆಗೆ ಕಾಮಗಾರಿ ಜಾರಿಯಲ್ಲಿರುವ ಪ್ರದೇಶದಲ್ಲಿ ಪರಿಸರ ಕಾಯ್ದೆಯ ನಿಯಮ ಉಲ್ಲಂಘನೆಯಂತಹ ಬೆಳವಣಿಗೆ ಕಂಡುಬಂದರೆ ಅಗತ್ಯ ಕ್ರಮ ಕೈಗೊಳ್ಳಬೇಕು ಅಂತಾ ಕೇಂದ್ರ ಅರಣ್ಯ ಮತ್ತು ಪರಿಸರ ಸಚಿವಾಲಯಕ್ಕೆ ಎನ್​ಜಿಟಿ ಸೂಚಿಸಿದೆ.

“ಯೋಜನೆ ವಿರೋಧಿಸಿದ್ದ ಮೂಲ ಅರ್ಜಿ ಹಾಗೂ ಮೇಲ್ಮನವಿಯಲ್ಲಿ ಯಾವುದೇ ರೀತಿಯ ಅರ್ಹತೆಗಳು ಕಂಡುಬಂದಿಲ್ಲ. ಅರ್ಜಿಯಲ್ಲಿ ಪರಿಸರಕ್ಕೆ ಉಂಟಾಗಬಹುದಾದ ಹಾನಿಯು ಯಾವ ಪ್ರಮಾಣದ್ದು ಎಂಬುದನ್ನು ಸ್ಪಷ್ಟಪಡಿಸಿಲ್ಲ. ಹಾಗೂ ಈ ಹಿಂದೆ ಅಧ್ಯಯನ ವರದಿಯಲ್ಲಿ ಭಿನ್ನಾಭಿಪ್ರಾಯಗಳು ದಾಖಲಾಗಿರುವ ಕಾರಣ ಅರ್ಜಿಗಳನ್ನು ವಜಾಗೊಳಿಸಲಾಗಿದೆ”  ಎಂದು ನ್ಯಾಯಮೂರ್ತಿಗಳಾದ ಆದರ್ಶ ಕುಮಾರ್ ಗೋಯೆಲ್, ಎಸ್.ಪಿ. ವಾಂಗ್ಡಿ, ರಾಮಕೃಷ್ಣನ್ ಹಾಗೂ ತಜ್ಞ ಸದಸ್ಯ ನಾಗಿನ್ ನಂದಾ ಅವರಿದ್ದ ಪೀಠ ನೀಡಿರುವ ತೀರ್ಪಿನಲ್ಲಿ ತಿಳಿಸಲಾಗಿದೆ.

ಹಿಂದಿನ ತೀರ್ಪು:

ಈ ಹಿಂದೆ ಕೆ.ಎನ್. ಸೋಮಶೇಖರ್, ಕಿಶೋರ್‌ಕುಮಾರ್‌ ಮತ್ತು ಪುರುಷೋತ್ತಮ ಚಿತ್ರಾಪುರ ಎಂಬುವವರು ಸಲ್ಲಿಸಿದ್ದ ಪ್ರತ್ಯೇಕ ಅರ್ಜಿಗಳನ್ನು, ನ್ಯಾಯಮೂರ್ತಿ ಡಾ.ಜವಾದ್‌ ರಹೀಂ ನೇತೃತ್ವದ ಹಸಿರು ಪೀಠ ವಿಚಾರಣೆ ನಡೆಸಿತ್ತು.

ಯೋಜನೆಗಾಗಿ ಪರಿಸರಕ್ಕೆ ಸಂಬಂಧಿಸಿದ ಕಾನೂನುಗಳನ್ನು ಉಲ್ಲಂಘಿಸಲಾಗಿದೆ. ಪರಿಸರ ಸಂರಕ್ಷಣೆಯ ಎಲ್ಲ ನಿಯಮಗಳನ್ನೂ ಗಾಳಿಗೆ ತೂರಲಾಗಿದೆ. ಸರ್ಕಾರ ಪಡೆದಿರುವ ಪರಿಸರ ಮತ್ತು ಅರಣ್ಯ ಅನುಮತಿಯೂ ಕಾನೂನು ಬಾಹಿರ ಎಂದು ಅರ್ಜಿಯಲ್ಲಿ ಹೇಳಿ ದೂರುದಾರರು ಯೋಜನೆಗೆ ವಿರೋಧ ವ್ಯಕ್ತಪಡಿಸಿದ್ದರು. ಆದ್ರೆ ಕುಡಿಯುವ ನೀರು ಪೂರೈಸುವ ಸದುದ್ದೇಶದಿಂದ ನಿಯಮಾನುಸಾರವೇ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದೆ. ಯೋಜನೆಯನ್ನು ವಿರೋಧಿಸಿ ಸಲ್ಲಿಕೆಯಾಗಿರುವ ಅರ್ಜಿಯ ಸಿಂಧುತ್ವವೇ ಪ್ರಶ್ನಾರ್ಹ ಎಂದು ರಾಜ್ಯ ಸರ್ಕಾರ ಎನ್​​​ಜಿಟಿ ಮುಂದೆ ತನ್ನ ವಾದ ಮಂಡಿಸಿತ್ತು. ಇದೇ ಆಧಾರದ ಮೇಲೆ ಹಿಂದಿನ ಪೀಠ ಅರ್ಜಿ‌ ವಜಾಗೊಳಿಸಿತ್ತು.

ಕೆಲವು ಷರತ್ತುಗಳೊಂದಿಗೆ ಯೋಜನೆಗೆ ಅನುಮತಿ ನೀಡಿ 2017ರ ಅಕ್ಟೋಬರ್‌ 6ರಂದು ತೀರ್ಪು ಪ್ರಕಟಿಸಿತ್ತು. ಆದರೆ ಪೀಠದಲ್ಲಿದ್ದ ತಜ್ಞ ಸದಸ್ಯ ರಂಜನ್‌ ಚಟರ್ಜಿ ಷರತ್ತುಗಳನ್ನು ಪ್ರಕಟಿಸುವ ಮೊದಲೇ ನಿವೃತ್ತರಾಗಿದ್ದರು. ಬಳಿಕ ಪುನಃ 2018ರ ಮಾರ್ಚ್‌ 20ರಂದು ಪ್ರಕರಣದ ಮರು ವಿಚಾರಣೆ ಆರಂಭವಾಗಿತ್ತು. ಇದೀಗ ಪ್ರಧಾನ ಪೀಠವೇ ವಿಚಾರಣೆ ಪೂರ್ಣಗೊಳಿಸಿ ತೀರ್ಪು ನೀಡಿದೆ. ಸ್ಥಗಿತಗೊಂಡಿರುವ ಕಾಮಗಾರಿಗಳನ್ನು ಮುಂದುವರಿಸಲು ಪೀಠ ಅನುಮತಿ ನೀಡಿದೆ

Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv