ಸುಗುಣೇಂದ್ರತೀರ್ಥರ ಉತ್ತರಾಧಿಕಾರಿ ಇಂಜಿನಿಯರ್ ಪದವೀಧರ ಪ್ರಶಾಂತ್ ಆಚಾರ್ಯ

ಉಡುಪಿ: ಉಡುಪಿಯ ಅಷ್ಟ ಮಠಗಳಲ್ಲಿ ಒಂದಾದ ಶ್ರೀ ಪುತ್ತಿಗೆ ಮಠದ ಸುಗುಣೇಂದ್ರತೀರ್ಥರು ತಮ್ಮ ಉತ್ತರಾಧಿಕಾರಿಯನ್ನು ಆಯ್ಕೆಮಾಡಿದ್ದಾರೆ. ಇಂಜಿನಿಯರ್ ಪದವೀಧರ ಪ್ರಶಾಂತ್ ಆಚಾರ್ಯ ಪುತ್ತಿಗೆ ಮಠದ ನೂತನ ಯತಿಯಾಗಿ ನೇಮಕಗೊಂಡಿದ್ದಾರೆ. ಸುಶೀಂದ್ರ ತೀರ್ಥ ಎಂಬ ಅಭಿದಾನಗೈದು ಪುತ್ತಿಗೆ ಮಠದ 31ನೇ ಉತ್ತರಾಧಿಕಾರಿಯನ್ನು ಆಯ್ಕೆ ಮಾಡಲಾಯಿತು. ಪುತ್ತಿಗೆ ಶ್ರೀಪಾದರು ತಮ್ಮ ಹನ್ನೆರಡನೇ ವಯಸ್ಸಿನಲ್ಲಿ ಬಾಲಸನ್ಯಾಸವನ್ನು ಸ್ವೀಕರಿಸಿದ್ದರು. ಸುಗುಣೇಂದ್ರ ತೀರ್ಥರು ಸನ್ಯಾಸ ಸ್ವೀಕರಿಸಿ ಇಂದಿಗೆ 45 ಸಂವತ್ಸರಗಳು ಪೂರ್ಣಗೊಂಡಿದೆ. ಈ ಸಂದರ್ಭದಲ್ಲಿ ಶ್ರೀಗಳು ಶ್ರೀ ಪ್ರಶಾಂತ ಆಚಾರ್ಯ ಎಂಬ ವಟುವನ್ನು ತಮ್ಮ ಉತ್ತರಾಧಿಕಾರಿಯನ್ನಾಗಿ ಆಯ್ಕೆ ಮಾಡಿ ಸನ್ಯಾಸ ದೀಕ್ಷೆ ನೀಡಿದರು. ಈ ಸಂಬಂಧ ಹಿರಿಯಡ್ಕ ಸಮೀಪದ ಶ್ರೀ ಪುತ್ತಿಗೆ ಗ್ರಾಮದಲ್ಲಿರುವ ಶ್ರೀ ಪುತ್ತಿಗೆ ಮಠದ ಮೂಲ ಮಠದಲ್ಲಿ ಇಂದು ಧಾರ್ಮಿಕ ವಿಧಿ ವಿಧಾನಗಳು ನಡೆದ ಬಳಿಕ ದೀಕ್ಷೆ ನೀಡಲಾಯಿತು.

ಉಡುಪಿಯ ಕುಂಜಿಬೆಟ್ಟು ಗುರುರಾಜ ಆಚಾರ್ಯ ಮತ್ತು ವಿನುತಾ ಆಚಾರ್ಯ ದಂಪತಿಗಳ ಪುತ್ರರಾದ ಪ್ರಶಾಂತ ಆಚಾರ್ಯ ಇಂಜಿನಿಯರಿಂಗ್ ಪದವೀಧರ. ಬಾಲ್ಯದಿಂದಲೇ ಆಧ್ಯಾತ್ಮದ ಒಲವು ಹೊಂದಿದ್ದ ಪ್ರಶಾಂತ್ ಆಚಾರ್ಯ, ಅವರ ಜಾತಕ ಪರಿಶೀಲಿಸಿದ ಬಳಿಕ ಆಯ್ಕೆ ಮಾಡಲಾಯಿತು. ಉಡುಪಿಯ ಹಿರಿಯಡ್ಕ ಸಮೀಪದ ಪುತ್ತಿಗೆ ಮೂಲ ಮಠದಲ್ಲಿ ಕಳೆದ ಮೂರು ದಿನಗಳಿಂದ ಶಿಷ್ಯ ಸ್ವೀಕಾರಕ್ಕೆ ಸಂಬಂಧಿಸಿದಂತೆ ಶ್ರಾದ್ಧ ಕರ್ಮ, ಕ್ಷೌರ ಸನ್ಯಾಸ ದೀಕ್ಷೆ ಇತ್ಯಾದಿ ವಿಧಿವಿಧಾನಗಳನ್ನು ನಡೆಸಲಾಗಿತ್ತು.