ಕ್ಯಾನ್ಸರ್​​ ಯುದ್ಧದಲ್ಲಿ ಗೆದ್ದು ಬಂದ ಇಮ್ರಾನ್​​ ಹಶ್ಮಿಯ ಮುದ್ದು ಕಂದಮ್ಮ..!

ಕ್ಯಾನ್ಸರ್​​ ಎಂಬ ಪೆಡಂಭೂತ ಮತ್ತೆ ಮತ್ತೆ ತನ್ನ ರೌದ್ರಾವತಾರ ತೋರುತ್ತಲೇ ಇರುತ್ತದೆ. ಮಧ್ಯೆ ಮಧ್ಯೆ ಒಂದಷ್ಟು ಮಂದಿ ಅದನ್ನು ಯಶಸ್ವಿಯಾಗಿ ಹಿಮ್ಮೆಸುವ ಸಕಾರಾತ್ಮಕ ಪ್ರಸಂಗಗಳೂ ಜರುಗುತ್ತಿರುತ್ತವೆ. ಬಾಲಿವುಡ್​​ನ ಇರ್ಫಾನ್​​ ಖಾನ್​​ ನಂತರ ಬಹುಭಾಷಾ ನಟಿ ಸೊನಾಲಿ ಬೇಂದ್ರೆ ಅವರನ್ನು ಕೂಡ ಇತ್ತೀಚೆಗೆ ಕ್ಯಾನ್ಸರ್​ ಮಾರಿ ಕಾಡಿತ್ತು. ಕ್ಯಾನ್ಸರ್​​ ಅಂದ ತಕ್ಷಣ ಈ ಖಾಯಿಲೆ ವಾಸಿಯಾಗುವುದಿಲ್ಲ ಅಂತ ಹೆದರಿ ಕೂರುವವರೇ ಹೆಚ್ಚು. ಆದ್ರೆ ಸೊನಾಲಿ ಬೇಂದ್ರೆ, ಇರ್ಫಾನ್ ಖಾನ್ ಕ್ಯಾನ್ಸರ್ ರೋಗದ ಜೊತೆ ಹೋರಾಡಿ ಗುಣಮುಖರಾಗಿದ್ದಾರೆ. ಹಾಗೆಯೇ ಬಾಲಿವುಡ್ ನಟ, ಇಮ್ರಾನ್ ಹಶ್ಮಿ ಅವರ ಪುತ್ರ ಅಯಾನ್​​ಗೂ ಆಯಕಟ್ಟಿನ ಜಾಗದಲ್ಲಿ ಕ್ಯಾನ್ಸರ್ ಗಡ್ಡೆ ಕಾಣಿಸಿಕೊಂಡಿತ್ತು. ನಟ ಇಮ್ರಾನ್ ಹಶ್ಮಿ 2014 ರಿಂದಲೂ ಕೂಡ ತಮ್ಮ ಸಿನಿಮಾ ಶೂಟಿಂಗ್ ಕಾರ್ಯಕ್ರಮಗಳನ್ನೆಲ್ಲಾ ಬದಿಗಿತ್ತು, ಮಗನ ಬದಿ ನಿಂತಿದ್ರು. ಇದೀಗ ಖುಷಿ ವಿಚಾರವೇನೆಂದ್ರೆ ಹಿಮ್ರಾನ್​​ ಹಶ್ಮಿ ಪುತ್ರ ಆಯಾನ್​​ ಕ್ಯಾನ್ಸರ್​​ ಎಂಬ ಯುದ್ಧದಲ್ಲಿ ಗೆದ್ದು ಬಂದಿದ್ದಾನೆ. ಈ ಬಗ್ಗೆ ಸ್ವತಃ ಇಮ್ರಾನ್​​ ಹಶ್ಮಿ ಟ್ವೀಟ್ ಮಾಡಿದ್ದು ಪ್ರಪಂಚ ಗೆದ್ದಷ್ಟು ಖುಷಿಯಾಗುತ್ತಿದೆ ಎಂದಿದ್ದಾರೆ.

ಕೊನೆಗೂ ನನ್ನ ಮಗ ಗೆದ್ದು ಬಂದ..!
ಐದು ವರ್ಷದ ನಂತರ ನನ್ನ ಮಗ ಆಯಾನ್​​​ ಕ್ಯಾನ್ಸರ್​​ನಿಂದ ಗುಣಮುಖಿಯಾಗಿದ್ದಾನೆ. ಈ ಸುದೀರ್ಘ ಪ್ರಯಾಣದಲ್ಲಿ ಕೊನೆಗೂ ನನ್ನ ಮಗ ಗೆದ್ದು ಬಂದಿದ್ದಾನೆ. ನನ್ನ ಮಗನಿಗಾಗಿ ಪ್ರಾರ್ಥಿಸಿದ ಎಲ್ಲರಿಗೂ ನನ್ನ ಧನ್ಯವಾದ ಎಂದು ಟ್ವಿಟ್ಟರ್​​ನಲ್ಲಿ ಬರೆದುಕೊಂಡಿದ್ದಾರೆ. ಜೊತೆಗೆ, ಕ್ಯಾನ್ಸರ್​​ನಿಂದ ಗುಣಮುಖನಾಗುವೆ ಎಂಬ ಭರವಸೆ ಹಾಗೂ ನಂಬಿಕೆಯನ್ನು ಬಿಡಬೇಡಿ. ಖಂಡಿತ ನೀವು ಗೆಲ್ಲುತ್ತೀರ ಎಂದು ಸದ್ಯ ಕ್ಯಾನ್ಸರ್​​ ಜೊತೆ ಹೋರಾಡುತ್ತಿರೋ ಜನರಿಗೆ, ಧೈರ್ಯ ತುಂಬಿದ್ದಾರೆ ಹಶ್ಮಿ.