ಡಾ. ಸವಿತಾ ಹಾಲಪ್ಪನವರ್​​​ ಸ್ಮರಿಸಿದ ಹಾಲಿವುಡ್ ತಾರೆ ಎಮ್ಮಾ ವಾಟ್ಸನ್, ಕಣ್ಣೀರಿಟ್ಟಿದ್ಯಾಕೆ..?

ಐರ್ಲೆಂಡ್​​ನಲ್ಲಿದ್ದ ಓಬಿರಾಯನ ಕಾಲದ ಕಾನೂನಿಂದಾಗಿ ಕನ್ನಡತಿ ಡಾ.ಸವಿತಾ ಹಾಲಪ್ಪನವರ್ ಅಲ್ಲಿ ದಾರುಣವಾಗಿ ಸಾವನ್ನಪ್ಪಿದ್ರು. ಗರ್ಭವತಿಯಾಗಿದ್ದ ಪತ್ನಿ ತನ್ನದಲ್ಲದ ತಪ್ಪಿಗೆ ಕಣ್ಣ ಮುಂದೆಯೇ ಸಾಯುತ್ತಿದ್ದನ್ನು ಕಂಡು ಅವರ ಪತಿಗೆ ನಿಂತ ನೆಲವೇ ಕುಸಿದಂಥ ಅನುಭವವಾಗಿತ್ತು.

ಡಾ.ಸವಿತಾ ಹಾಲಪ್ಪನವರ್ ಕನ್ನಡದ ಮಗಳು. ಬೆಳಗಾವಿಯ ಶ್ರೀನಗರ ನಿವಾಸಿ. ಅಂದಾನಪ್ಪ ಯಾಳಗಿ ಪುತ್ರಿಯಾಗಿದ್ದ ಡಾ.ಸವಿತಾ ಹಾಲಪ್ಪನವರ್, ಐರ್ಲೆಂಡ್‌ನ ಗಾಲ್ವೆಯ ಬೋಸ್ಟನ್ ಸೈಂಟಿಫಿಕ್ ಸೆಂಟರ್‌ನಲ್ಲಿ ಎಂಜಿನಿಯರ್ ಆಗಿದ್ದ ಪ್ರವೀಣ್ ಹಾಲಪ್ಪನವರ್ ಅವರನ್ನು ಮದ್ವೆಯಾಗಿ ಐರ್ಲೆಂಡ್‌ಗೆ ಹೋಗಿದ್ದರು.

2012 ಅಕ್ಟೋಬರ್ ತಿಂಗಳ ಅವಧಿಯಲ್ಲಿ ಸವಿತಾ 4 ತಿಂಗಳ ಗರ್ಭಿಣಿಯಾಗಿದ್ದರು. ಗರ್ಭಿಣಿಯಾಗಿದ್ದ ಸವಿತಾಗೆ ತೀವ್ರ ಹೊಟ್ಟೆ ನೋವು ಕಾಣಿಸಿಕೊಂಡು ಗರ್ಭಸ್ರಾವವಾಗಿತ್ತು. ಆಗ ಅವರ ಬದುಕಬೇಕಿದ್ದರೆ ಗರ್ಭಪಾತ ಮಾಡಿಸಲೇ ಬೇಕಿತ್ತು. ಗರ್ಭಪಾತ ಮಾಡಿಸೋಣ ಅಂತಾ ಗಾಲ್ವೆ ವಿವಿ ಆಸ್ಪತ್ರೆಗೆ ಹೋದರೆ, ಅಲ್ಲಿನ ಗರ್ಭಪಾತ ನಿಷೇಧ ಕಾನೂನು ಅಡ್ಡಿಯಾಗಿತ್ತು. ‘ಗರ್ಭದಲ್ಲಿರುವ ಭ್ರೂಣಕ್ಕೂ ಗರ್ಭಿಣಿಗೆ ಇರುವಷ್ಟೇ ಬದುಕುವ ಹಕ್ಕಿದೆ’ ಅಂತಾ ಅಲ್ಲಿನ ವೈದ್ಯರು ಗರ್ಭಪಾತ ಮಾಡದೇ ಕೈಚೆಲ್ಲಿ ಬಿಟ್ಟರು.

ಪರಿಣಾಮ ಭಾರತದ ದಂತವೈದ್ಯೆ ಸವಿತಾ ಹಾಲಪ್ಪನವರ್, ಅಕ್ಟೋಬರ್ 28, 2012 ರಂದು ಯೂನಿವರ್ಸಿಟಿ ಹಾಸ್ಪಿಟಲ್ ಗಾಲ್ವೇನಲ್ಲಿ ಮೃತಪಟ್ಟರು. ಅವರ ದಾರುಣ ಸಾವು ಇಡೀ ವಿಶ್ವವನ್ನೇ ನಡುಗಿಸಿಬಿಟ್ಟಿತ್ತು. ಐರ್ಲೆಂಡ್ ದೇಶದ ಕಾನೂನಿನ ವಿರುದ್ಧ ವ್ಯಾಪಕ ಆಕ್ರೋಶ  ವ್ಯಕ್ತವಾಗಿತ್ತು. ಅಲ್ಲಿನ ಮಹಿಳಾ ಪರ ಹೋರಾಟಗಾರರಂತೂ ಅಕ್ಷರಶಃ ಸಿಡಿದೆದ್ದು ಬಿಟ್ಟರು. ಹೋರಾಟಗಾರರು, ಸಮಾಜ ಸೇವಾ ಸಂಸ್ಥೆಗಳು, ನಟ-ನಟಿಯರು, ಸೆಲೆಬ್ರಿಟಿಗಳು ರಸ್ತೆಗಿಳಿದು YES ಕ್ಯಾಂಪೇನ್ ಆರಂಭಿಸಿದರು. ಭ್ರೂಣ ರಕ್ಷಣೆಗಾಗಿ ಅಲ್ಲಿನ ಸಂವಿಧಾನಕ್ಕೆ ತರಲಾಗಿದ್ದ 8ನೇ ತಿದ್ದುಪಡಿಯನ್ನು ರದ್ದು ಮಾಡಲೇ ಬೇಕು ಅನ್ನೋ ಹೋರಾಟ ತೀವ್ರಗೊಂಡಿತ್ತು. ಹೋರಾಟಕ್ಕೆ ಅಲ್ಲಿನ ಸರ್ಕಾರ ಮಣಿಯುತ್ತಿತ್ತು. ಆದ್ರೆ, ಇದು ಧರ್ಮ ವಿರೋಧಿ ಅಂತ ಅಲ್ಲಿನ ಚರ್ಚ್​​ಗಳು ಹಾಗೂ ಧಾರ್ಮಿಕ ಸಂಘಟನೆಗಳು ಗರ್ಭಪಾತ ವಿರೋಧಿ ಕಾನೂನಿಗೆ ತಿದ್ದುಪಡಿ ತರೋದನ್ನು ವಿರೋಧಿಸಿದರು. ಆದ್ರೆ, ಕೊನೆಗೂ ಗರ್ಭಪಾತ ಪರ ಹೋರಾಟಕ್ಕೆ ಮಣಿದ ಅಲ್ಲಿನ ಸರ್ಕಾರ, ಚರ್ಚ ವಿರೋಧದ ನಡುವೆಯೂ ಸಂವಿಧಾನದ 8ನೇ ತಿದ್ದುಪಡಿಯನ್ನು ರದ್ದುಗೊಳಿಸಿದೆ. ಜನಮತ ಗಣನೆಯಲ್ಲಿ ಗರ್ಭಪಾತ ನಿಷೇಧದ 8ನೇ ತಿದ್ದುಪಡಿ ರದ್ದುಪಡಿಸಲು ಶೇಕಡ 68ರಷ್ಟು ಜನ ಮತ ನೀಡಿದ್ದರು. ಈ ಮೂಲಕ ಐರ್ಲೆಂಡ್ ಸರ್ಕಾರ, 2018 ರಲ್ಲಿ ಗರ್ಭಪಾತ ಸಂಬಂಧ ಹೊಸ ಕಾನೂನನ್ನ ತಂದಿದೆ. ಈ ಹೊಸ ಕಾನೂನನ್ನು ‘ಸವಿತಾ ಕಾನೂನು’ ಎಂದೇ ಜನ ಕರೆಯಲು ಆರಂಭಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಐರ್ಲೆಂಡ್​ ದೇಶದಲ್ಲಿ ಹೊಸ ಕ್ರಾಂತಿಗೆ ಕಾರಣವಾಗಿದ್ದ ಸವಿತಾ ಅವರ ಸಾವನ್ನ ಸ್ಮರಿಸಿರೋ ಹಾಲಿವುಡ್​​ನ​ ಟಾಪ್ ಹೀರೋಯಿನ್​ರಲ್ಲಿ ಒಬ್ಬರಾಗಿರೋ ಹಾಗೂ ವಿಶ್ವಸಂಸ್ಥೆಯ ಸದ್ಭಾವನಾ ರಾಯಭಾರಿ ಕೂಡ ಆಗಿರೋ ಎಮ್ಮಾ ವಾಟ್ಸ್​ನ್ PORTER magazineಗೆ ಸವಿತಾ ಹಾಲಪ್ಪನವರ್ ಅವರನ್ನು ಉದ್ದೇಶಿಸಿ ಹೃದಯಸ್ಪರ್ಷಿ ಪತ್ರ ಬರೆದಿದ್ದಾರೆ.

ಎಮ್ಮಾ ವಾಟ್ಸನ್ ಬರೆದ ಪತ್ರ ಇಲ್ಲಿದೆ:

‘ಆತ್ಮೀಯ ಡಾ. ಸವಿತಾ ಹಾಲಪ್ಪನವರ್,
ನೀವು ಕ್ರಾಂತಿಯ ಮುಖವಾಗಲು ಬಯಸಿರಲಿಲ್ಲ. ಆದ್ರೆ, ನಿಮ್ಮ ಜೀವವನ್ನು ಉಳಿಸಬಹುದಾಗಿದ್ದ ವಿಧಾನವನ್ನು ನೀವು ಬಯಸಿದ್ದಿರಿ. ಯಾವಾಗ 2012ರಲ್ಲಿ ನಿಮ್ಮ ಸಾವಿನ ಸುದ್ದಿ ಬರಸಿಡಿಲಿನಂತೆ ಬಂದೆರಗಿತೋ, ಆಗ ಗರ್ಭಧರಿಸಿದ್ದ ಮಹಿಳೆ ಜೀವಕ್ಕಿಂತ, ಹೊಟ್ಟೆಯಲ್ಲಿರೋ ಭ್ರೂಣದ ಜೀವಕ್ಕೇ ಹೆಚ್ಚು ಮಹತ್ವ ನೀಡಲಾಗಿದ್ದ ಐರೀಶ್ ಸಂವಿಧಾನಕ್ಕೆ ತರಲಾಗಿದ್ದ 8 ನೇ ತಿದ್ದುಪಡಿಯನ್ನು ರದ್ದು ಗೊಳಿಸಿ ಎಂಬ ಐರೀಶ್ ಹೋರಾಟಗಾರರ ಧ್ವನಿ ವಿಶ್ವಾದ್ಯಂತ ಪ್ರತಿಫಲಿಸಿತು.

ಸಾಮಾಜಿಕ ಅನ್ಯಾಯದಿಂದಾಗಿ ಸಾವು ಸಂಭವಿಸಿದರೆ ನಾವು ಸಮಯಕ್ಕನುಗುಣವಾಗಿ ಸ್ಥಳೀಯ ಹಾಗೂ ಜಾಗತಿಕ ಸಮುದಾಯಗಳು ದು:ಖ ವ್ಯಕ್ತಪಡಿಸುತ್ತವೆ. ಶ್ರದ್ಧಾಂಜಲಿ ಅರ್ಪಿಸುತ್ತವೆ. ಜನರೆಲ್ಲ ಸೇರುತ್ತಾರೆ ಮತ್ತು ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ ಅಂತ ಪ್ರಾರ್ಥಿಸುತ್ತಾರೆ. ಮತ್ತೊಮ್ಮೆ ಹೀಗಾಗದು ಅಂತ ನಮ್ಮಿಂದ ದೂರಾದ ಆತ್ಮಗಳಿಗೆ ಮಾತು ಕೊಡುವಂತೆ ಹಾಗೂ ಸಮಾಜವನ್ನು ಎಚ್ಚರಿಸುವುದಕ್ಕಾಗಿ ಹೀಗೆ ಹೇಳುತ್ತೇವೆ. ಆದ್ರೆ, ಸಮಾಜದ ರಚನಾತ್ಮಕ ಅಸಮಾನತೆಯನ್ನು ತೋರಿಸುವಂಥ ಸಾವಿಗೆ ನ್ಯಾಯ ದೊರಕವುದು ದುರ್ಲಭವೇ ಸರಿ. ಆದರೂ, ಈ ಗೆಲುವು ಮಹಿಳೆಯರ ಗರ್ಭಧಾರಣೆ ಹಾಗೂ ವಂಶಾಭಿವೃದ್ಧಿಗೆ ಸಂಬಂಧಿಸಿದಂತೆ ಎಲ್ಲೆಡೆ ನ್ಯಾಯ ದೊರಕಿಸಲು ನಡೆಯುತ್ತಿರುವ ಹೋರಾಟಗಳಿಗೆ ಅವಕಾಶದ ಮಿತಿಯನ್ನು ಹೆಚ್ಚಿಸಲಿದೆ.
ಸವಿತಾ ಹಾಲಪ್ಪನವರ್ ನಿಮ್ಮ ನೆನಪಿನ ಬುತ್ತಿಯನ್ನು ಕಟ್ಟಿದ ನಿಮ್ಮ ಕುಟುಂಬಸ್ಥರು ನಿಜಕ್ಕೂ ಕರುಣಾವಂತರು. ನೀವು ಪ್ಯಾಶನೇಟ್, ಉತ್ಸಾಹಭರಿತ ಮತ್ತು ನಿಸರ್ಗದತ್ತವಾದ ನಾಯಕತ್ವ ಗುಣ ಉಳ್ಳವರು ಅಂತ ಅವರು ನಮಗೆ ತಿಳಿಸಿಕೊಟ್ಟರು. 2010ರ ದೀಪಾವಳಿ ಹಬ್ಬದ ವೇಳೆ ನಡೆದ ಸ್ಪರ್ಧೆಯಲ್ಲಿ ನೀವು ಡ್ಯಾನ್ಸರ್​ ಆಫ್​ ದಿ ನೈಟ್ ಪ್ರಶಸ್ತಿ ಗೆದ್ದಿದ್ದಿರಿ ಮತ್ತು ನಿಮ್ಮ ಸಮುದಾಯದ ಮಕ್ಕಳಿಗೆ ನೃತ್ಯ ನಿರ್ದೇಶನವನ್ನೂ ಮಾಡಿದ್ದಿರಿ ಎಂದು ಕೇಳಿ ತಿಳಿದೆ. ಅಷ್ಟೇ ಅಲ್ಲ 2011ರ ಸೇಂಟ್ ಪ್ಯಾಟ್ರಿಕ್ ದಿನದ ಅಂಗವಾಗಿ ನಡೆದ ಪರೇಡ್​ನಲ್ಲಿ ನೀವು ನೃತ್ಯ ಮಾಡಿದ್ದನ್ನು ನೋಡಿದೆ. ಜೊತೆಗೆ ನಿಮ್ಮ ಥೌಸಂಡ್ ವ್ಯಾಟ್ ಸ್ಮೈಲ್ ಹಾಗೂ ಉತ್ಸಾಹ ಕಂಡು ನಿಜಕ್ಕೂ ನಾನು ಕಣ್ಣೀರು ಹಾಕಿದೆ. ನಿಮ್ಮ ಕುಟುಂಬಸ್ಥರು ಅವರು ದು:ಖ ಹಾಗೂ ಭರವಸೆಯನ್ನು ಜಗತ್ತಿನೊಂದಿಗೆ ಹಂಚಿಕೊಂಡರು. ಜೊತೆಗೆ, ಬಹಿರಂಗವಾಗಿಯೇ ಯೆಸ್​​ ಕ್ಯಾಂಪೇನ್​ ಅನ್ನು ಬೆಂಬಲಿಸಿದ್ರು. ಅಬಾರ್ಷನ್​​ ನಿಷೇಧ ಕಾನೂನು ತೆರವುಗೊಳಿಸಿದ್ದನ್ನು ಸಂಭ್ರಮಿಸಿದ ನಿಮ್ಮ ತಂದೆ, ಐರ್ಲ್ಯಾಂಡ್ ಜನರಿಗೆ ಧನ್ಯವಾದ ಅರ್ಪಿಸಿದ್ರು. ಇದಕ್ಕೆ ಪ್ರತಿಯಾಗಿ ಐರ್ಲ್ಯಾಂಡ್​ ಜನರು ನಿಮ್ಮ ಕುಟುಂಬದ ಕೊಡುಗೆಯನ್ನು ಸ್ಮರಿಸಿದ್ರು.

ನೀವು ಮಲಗಿದ್ದಕ್ಕೆ, ನಾವೆಲ್ಲ ಎಚ್ಚರಗೊಂಡೆವು ಅಂತಾ ನೋಟ್​​ ಒಂದು ಡಬ್ಲಿನ್​​ನಲ್ಲಿರುವ ನಿಮ್ಮ ಸ್ಮಾರಕದಲ್ಲಿ ಕಾಣಸಿಗುತ್ತದೆ. ತಾಯಿ ಜೀವಕ್ಕಿಂತ ಹೊಟ್ಟೆಯಲ್ಲಿರುವ ಭ್ರೂಣದ ಜೀವಕ್ಕೇ ಹೆಚ್ಚೆ ಮಹತ್ವ ಕೊಡುತ್ತಿದ್ದ ಐರ್ಲೆಂಡ್​​ನ ಸಂವಿಧಾನಕ್ಕೆ ತಂದ 8ನೇ ತಿದ್ದುಪಡಿ, ದೇಶಕ್ಕೆ ಎಚ್ಚರಿಗೆ ಗಂಟೆಯಾಗಿತ್ತು. ನಿಮಗೆ ಹಾಗೂ ಕಾನೂನಾತ್ಮಕ ಅಬಾರ್ಷನ್​ಗಾಗಿ ಇಂಗ್ಲೆಂಡ್​ಗೆ ಪ್ರಯಾಣಿಸ ಬೇಕಾಗಿದ್ದ ಜನರಿಗೆ ಕಷ್ಟದ ಜಯ ಸಿಕ್ಕಂತಾಗಿದೆ. ಅರ್ಜೆಂಟೈನಾದಿಂದ ಪೋಲ್ಯಾಂಡ್​​​ ತನಕ ಅಬಾರ್ಷನ್​​​ಗೆ ವಿಧಿಸಲಾಗಿರುವ ನಿಬಂಧನೆಗಳು ಯುವತಿರಯ, ಮಹಿಳೆಯರ ಹಾಗೂ ಗರ್ಭಧರಿಸಿರುವ ವ್ಯಕ್ತಿಗಳನ್ನು ಶಿಕ್ಷಿಸುತ್ತವೆ ಹಾಗೂ ಅವರ ಜೀವಕ್ಕೇ ಸಂಚಕಾರ ತರುತ್ತಿವೆ. ನಿಮ್ಮ ನೆನಪಿನಲ್ಲಿ ಮತ್ತು ನಮ್ಮ ಕಷ್ಟದಿಂದ ಮುಕ್ತಿಗಾಗಿ, ವಂಶಾಭಿವೃದ್ಧಿ ನ್ಯಾಯಕ್ಕಾಗಿ ನಮ್ಮ ಹೋರಾಟವನ್ನು ಮುಂದುವರೆಸುತ್ತೇವೆ.

ಪ್ರೀತಿಯೊಂದಿಗೆ ಮತ್ತು ಸಾಂತ್ವನದೊಂದಿಗೆ
ಎಮ್ಮಾ ವಾಟ್ಸನ್