ಟಿಂಬರ್​ ಮಾಫಿಯಾಕ್ಕೆ ಸಹಾಯ ಮಾಡಿದ್ರಾ ಅಧಿಕಾರಿಗಳು.?

ಚಿಕ್ಕಮಗಳೂರು: ಕಾಡುಪ್ರಾಣಿಗಳನ್ನ ಸರ್ಕಸ್​ನಲ್ಲಾಗಲಿ ಅಥವಾ ದುಡಿಸಿಕೊಳ್ಳುವುದಕ್ಕಾಗಲಿ ಕಾನೂನಿನಲ್ಲಿ ಅವಕಾಶವಿಲ್ಲ. ಆದ್ರೆ ಚಿಕ್ಕಮಗಳೂರಿನ ಪಂಡರವಳ್ಳಿ ಕಾಫಿತೋಟದ ಕೆಲಸಕ್ಕೆ ಆನೆಯನ್ನ ಅಕ್ರಮವಾಗಿ ಕರೆತಂದಿದ್ದು, ಆರ್​​​ಎಫ್​​ಓ ಶಿಲ್ಪಾ ನೇತೃತ್ವದಲ್ಲಿ ದಾಳಿ ನಡೆಸಿ ಆನೆಯನ್ನ ರಕ್ಷಿಸಿಲಾಗಿತ್ತು. ಆದ್ರೆ, ಅರಣ್ಯಾಧಿಕಾರಿಗಳು ಶನಿವಾರ ರಾತ್ರಿ ಆನೆಯನ್ನ ಅದೇ ಲಾರಿಯಲ್ಲಿ ಪುನಃ ಕೇರಳಕ್ಕೆ ಕಳಿಸಿದ್ದಾರೆ.

ಆನೆ ಮೂಲತಃ ಅಸ್ಸಾಂ ರಾಜ್ಯದ್ದು. ಅದರ ಮಾಲೀಕ ಜೋನೋರಾಂ ಬಹುರಾ. ಆನೆಗೆ ಅಳವಡಿಸಿರೋ ಮೈಕ್ರೋ ಚಿಪ್ ಕೂಡ ಅಸ್ಸಾಂನದ್ದೆ. ಆದ್ರೆ, ಆನೆ ನಮ್ಮದ್ದೆಂದು ಹೇಳಿಕೊಳ್ತೀರೊ ಕೇರಳದ ಪಿ.ಕೋಯಾ ಅಥವ ಸೈದಲಿ ಕುಟ್ಟಿ ಎಂಬವರ ಮೇಲಾಗಲಿ ಅಥವಾ ಆನೆಯ ಮೂಲ ಮಾಲೀಕನ ಮೇಲಾಗಲಿ ಪ್ರಕರಣ ದಾಖಲು ಮಾಡದೆ ಕೇವಲ ಮಾವುತ ಹಾಗೂ ಲಾರಿಯ ಚಾಲಕನ ಮೇಲೆ ಪ್ರಕರಣ ದಾಖಲಿಸಲಾಗಿದೆ ಎನ್ನಲಾಗಿದೆ.

ಅಧಿಕಾರಿಗಳು ಟಿಂಬರ್ ಮಾಫಿಯಾ ಪ್ರಭಾವಕ್ಕೆ ಕಟ್ಟುಬಿದ್ದು ಅವರನ್ನ ರಕ್ಷಿಸಿದ್ದಾರೆಂದು ಪರಿಸರವಾದಿಗಳು ಆರೋಪಿಸಿದ್ದಾರೆ. ಆನೆಯನ್ನ ಅಸ್ಸಾಂನಿಂದ ಕೇರಳಕ್ಕೆ ತಂದಿರೋ ಬಗ್ಗೆಯೂ ಮಾರಾಟ ಅಥವಾ ಸಾಗಾಟದ ಅನುಮತಿ ಪತ್ರವೂ ಇಲ್ಲ. ನಕಲಿ ದಾಖಲೆ ಸೃಷ್ಠಿಸಿ ಆನೆಯನ್ನ ಕೇರಳದಲಿಟ್ಟುಕೊಂಡು ಟಿಂಬರ್ ಕೆಲಸಕ್ಕೆ ಕರ್ನಾಟಕಕ್ಕೆ ತರಲಾಗಿದೆ.

ಇದೊಂದು ದೊಡ್ಡ ಪ್ರಕರಣವಾಗಿದ್ದು ಸೂಕ್ತ ತನಿಖೆಯಾಗಬೇಕು. ರಾಜ್ಯದ ಉನ್ನತ ಅಧಿಕಾರಿಗಳು ಹಾಗೂ ಸ್ಥಳೀಯ ಅಧಿಕಾರಿಗಳು, ಆನೆ ಕಳ್ಳಸಾಗಾಣೆ ದಂಧೆಕೋರರ ಮತ್ತು ರಾಜಕಾರಣಿಗಳ ಒತ್ತಡಕ್ಕೆ ಮಣಿದು ಪ್ರಕರಣವನ್ನು ಕೈಬಿಟ್ಟಿರುವುದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ ಎಂದು ಪರಿಸರವಾದಿಗಳು ಆರೋಪಿಸಿದ್ದು, ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ:contact@firstnews.tv