4 ವರ್ಷಗಳಲ್ಲಿ ಆನೆ ದಾಳಿಗೆ ಸತ್ತವರ ಸಂಖ್ಯೆ 1,700..!

ಕಾಡಾನೆಗಳು, ತಮ್ಮ ತವರನ್ನ ತೊರೆದು ನಾಡಿಗೆ ನುಗ್ಗಿ ಕೋಲಾಹಲ ಎಬ್ಬಿಸೋದು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿದೆ. ಕರ್ನಾಟಕದಲ್ಲೇ ಇಂಥ ಉದಾಹರಣೆಗಳು ಸಾಕಷ್ಟಿವೆ. ಅದರಲ್ಲೂ ಮಲೆನಾಡ ಭಾಗದಲ್ಲಿ ಕಾಡಾನೆಗಳ ಉಪಟಳಕ್ಕೆ ಜನ ಭಯಭೀತರಾಗಿಯೇ ಜೀವನ ಸಾಗಿಸುತ್ತಿದ್ದಾರೆ. ಇದೀಗ ಬಹಿರಂಗವಾಗಿರುವ ಮಾಹಿತಿಯೊಂದರ ಪ್ರಕಾರ ಕಾಡಾನೆಗಳ ದಾಳಿಯಿಂದ ಮೃತಪಟ್ಟವರ ಸಂಖ್ಯೆ ಕೇಳಿದ್ರೆ ಬೆಚ್ಚಿ ಬೀಳುತ್ತೀರಿ.
ಸರ್ಕಾರಗಳು, ಅರಣ್ಯ ಇಲಾಖೆಗಳು ಕಾಡಾನೆಗಳ ಹಾವಳಿ ತಪ್ಪಿಸಲು ಸಾಕಷ್ಟು ಕ್ರಮಗಳನ್ನ ಕೈಗೊಳ್ಳುತ್ತಿವೆ. ಆದ್ರೂ ಗಜ ಕಾಟ ಮಾತ್ರ ತಪ್ಪಿಲ್ಲ. ಕಳೆದ 4 ವರ್ಷಗಳಲ್ಲಿ ಕಾಡಾನೆಗಳ ದಾಳಿಯಿಂದಾಗಿ ಬರೊಬ್ಬರಿ 1,700 ಮಂದಿ ಮೃತಪಟ್ಟಿದ್ದಾರೆ ಅಂತ ವರದಿಯೊಂದು ಹೇಳಿದೆ. ಪರಿಸರ ಸಚಿವಾಲಯ ಬಿಡುಗಡೆ ಮಾಡಿರುವ ವರದಿಯ ಪ್ರಕಾರ, ಆನೆಗಳ ದಾಳಿಗೆ 1,700 ಮಂದಿ ಮೃತಪಟ್ಟಿದ್ದರೆ, ಸರ್ಕಾರ, ಜೀವ ಹಾನಿ, ಆಸ್ತಿಪಾಸ್ತಿ ಹಾನಿ ಹಾಗೂ ಬೆಳೆ ಹಾನಿಗಾಗಿ 2015 ರಿಂದ 2018ರ ಅವಧಿಯಲ್ಲಿ ಬರೊಬ್ಬರಿ 226 ಕೋಟಿ ರೂಪಾಯಿಯನ್ನ ಪರಿಹಾರವಾಗಿ ನೀಡಿದೆ.
ಇನ್ನು, 2015ರಿಂದ ಇಲ್ಲಿವರೆಗೂ ವಿದ್ಯುತ್ ತಂತಿ ತಗುಲಿ ಅಥವಾ ಇತರೆ ಕಾರಣಗಳಿಗಾಗಿ ಒಟ್ಟು 373 ಆನೆಗಳು ಸಹ ಜೀವ ಕಳೆದುಕೊಂಡಿವೆ. ಇಷ್ಟಾದರೂ ಆನೆಗಳ ಹಾವಳಿ ಕಡಿಮೆಯಾಗದ ಹಿನ್ನೆಲೆ ಸರ್ಕಾರ ಕೂಡ ತಂತ್ರಜ್ಞಾನದ ಮೊರೆ ಹೋಗಿ ಇತರೆ ಕ್ರಮಗಳನ್ನ ಕೈಗೊಳ್ಳುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಆನೆಗಳಿಗೆ ರೇಡಿಯೋ ಕಾಲರ್​ಗಳನ್ನ ಅಳವಡಿಸಿ, ಅವುಗಳು ನಾಡಿಗೆ ಎಂಟ್ರಿ ಕೊಟ್ಟರೆ ಆ ಬಗ್ಗೆ ಜನರಿಗೆ ಮೆಸೇಜ್ ಹಾಗೂ ವಾಟ್ಸಾಪ್ ಸಂದೇಶಗಳ ಮೂಲಕ ಮಾಹಿತಿ ನೀಡುವ ನಿಟ್ಟಿನಲ್ಲಿ ಕ್ರಮಗಳನ್ನ ಕೈಗೊಳ್ಳುತ್ತಿದೆ. ಈ ಮೂಲಕ ಆನೆಗಳಿಂದ ಉಂಟಾಗುವ ಹಾನಿಯನ್ನ ತಪ್ಪಿಸಲು ಸರ್ಕಾರ ಪ್ರಯತ್ನಿಸುತ್ತಿದೆ.

Follow us on:

YouTube: firstNewsKannada  Instagram: firstnews.tv  Face Book: firstnews.tv  Twitter: firstnews.tv