ಐಫೆಲ್​​ಗಿಂತ ಸುಂದರವಾಗಿರೋ ತಾಜ್​ ಸಂರಕ್ಷಣೆಗೆ ಏನು ಮಾಡಿದ್ದೀರಿ?: ಕೇಂದ್ರಕ್ಕೆ ಸುಪ್ರೀಂ ಛೀಮಾರಿ..!

ನವದೆಹಲಿ: ಪ್ರೇಮದ ದ್ಯೋತಕ ಎಂದ ತಕ್ಷಣವೇ ನಮಗೆ ನೆನಪಾಗುವುದು ಮೊಗಲ್​​ ಚಕ್ರವರ್ತಿ ಶಹಾಜನ್​ ಕಟ್ಟಿಸಿರುವ ​ ತಾಜ್ ಮಹಲ್ ಸ್ಮಾರಕ. ತನ್ನ ಮಡದಿಯ ಮೇಲಿನ ಉತ್ಕಟ ಪ್ರೇಮವನ್ನು ವ್ಯಕ್ತಪಡಿಸಲು ಶಹಾಜನ್​​​ ಈ ಸ್ಮಾರಕವನ್ನು ನಿರ್ಮಿಸಿದ್ದಾನೆ ಎಂದು ಚರಿತ್ರೆಯಿಂದ ತಿಳಿದುಬರುತ್ತದೆ. ಅದಕ್ಕಾಗಿಯೇ ಈ ಸ್ಮಾರಕ ವಿಶ್ವದ 7 ಅದ್ಭುತಗಳಲ್ಲಿ ಒಂದಾಗಿದೆ. ಇದನ್ನು ವಿಶಿಷ್ಟವಾದ ಅಮೃತಶಿಲೆಗಳಿಂದ ನಿರ್ಮಿಸಲಾಗಿದೆ. ಅಂಥಹ ಸ್ಮಾರಕ ಆಮ್ಲಮಳೆ (ಆ್ಯಸಿಡ್​​ ರೇನ್​​​)ಯಿಂದಾಗಿ ಹಾನಿಗೊಳಗಾಗುತ್ತಿರುವುದು ಆತಂಕಕಾರಿ ವಿಷಯ. ತಾಜ್​​ ಮಹಲ್​ ಸಂರಕ್ಷಣೆ ಬಗ್ಗೆ ಸರ್ಕಾರ ನಿರ್ಲಕ್ಷ್ಯ ವಹಿಸಿರುವ ಹಿನ್ನೆಲೆಯಲ್ಲಿ ಇದೀಗ ಸುಪ್ರೀಂ ಕೋರ್ಟ್​​ ಚಾಟಿ ಬೀಸಿದೆ.
ತಾಜ್​ಮಹಲ್​ ಸಂರಕ್ಷಣೆಗೆ ಸರ್ಕಾರಗಳು ಮುಂದಾಗುತ್ತಿಲ್ಲ ಎಂದು ಆರೋಪಿಸಿ ಸುಪ್ರೀಂಕೋರ್ಟ್​ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿತ್ತು. ಅದರ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್,​ ಕೇಂದ್ರ ಹಾಗೂ ಉತ್ತರ ಪ್ರದೇಶದ ಸರ್ಕಾರಗಳಿಗೆ ಛೀಮಾರಿ ಹಾಕಿದೆ. ತಾಜ್​​ ಮಹಲನ್ನು ನಾವು ಬಂದ್​ ಮಾಡುತ್ತೇವೆ ಅಥವಾ ನೀವು ಅದನ್ನು ಡೆಮಾಲಿಶ್​​ ಮಾಡಿ ಅಥವಾ ಸರಿಪಡಿಸಿ ಅಂತ ಸುಪ್ರೀಂ ಕೋರ್ಟ್​ ಕಟುವಾಗಿ ಹೇಳಿದೆ.
ತಾಜ್​ಮಹಜ್​​ ಸ್ಮಾರಕ ಪ್ಯಾರಿಸ್​ನ ಐಫೆಲ್​ ಟವರ್​​ಗಿಂತ ಸುಂದರವಾಗಿದೆ. ದೇಶದ ವಿದೇಶಿ ವಿನಿಮಯ ಸಮಸ್ಯೆಯನ್ನು ಸರಿಪಡಿಸುವ ಸಾಮರ್ಥ್ಯ ಹೊಂದಿದೆ. ಟಿವಿ ಟವರ್​​ನಂತೆ ಕಾಣುವ ಐಫೆಲ್​​ ಟವರ್​​ ನೋಡಲು ಕೋಟ್ಯಾಂತರ ಜನ ಹೋಗುತ್ತಾರೆ. ನಮ್ಮ ತಾಜ್​​​​​ ಅದಕ್ಕಿಂತ ಹೆಚ್ಚು ಸುಂದರವಾಗಿದೆ. ಅದನ್ನು ನೀವು ಸರಿಯಾಗಿ ಸಂರಕ್ಷಣೆ ಮಾಡಿದ್ದರೆ, ವಿದೇಶಿ ವಿನಿಮಯ ಸಮಸ್ಯೆಯನ್ನ ಪರಿಹರಿಸಬಹುದಾಗಿತ್ತು ಎಂದು ನ್ಯಾಯಮೂರ್ತಿಗಳು ಅಭಿಪ್ರಾಯಪಟ್ಟರು.
ಸ್ಮಾರಕ ಸಂರಕ್ಷಣೆಗೆ ಏನು ಕ್ರಮ ಕೈಗೊಂಡಿದ್ದೀರಿ ಎನ್ನುವದನ್ನು ತಿಳಿಸುವಂತೆ ಕೇಂದ್ರ ಸರ್ಕಾರಕ್ಕೆ ಕೋರ್ಟ್​​​ ಆದೇಶಿಸಿದೆ.

ನಿಮ್ಮ ಸಲಹೆ ಸೂಚನೆ ಮತ್ತು ಅಬಿಪ್ರಾಯಕ್ಕಾಗಿ ಸಂರ್ಪಕಿಸಿ:contact@firstnews.tv