1954ರಲ್ಲಿ ದೇವರ ಬಗ್ಗೆ ಐನ್ಸ್​ಸ್ಟೀನ್​​ ಬರೆದಿದ್ದ ಪತ್ರ ₹20 ಕೋಟಿಗೆ ಹರಾಜು..!

ನ್ಯೂಯಾರ್ಕ್​​: ನೊಬೆಲ್​​​ ಪ್ರಶಸ್ತಿ ಪುರಸ್ಕೃತ ವಿಜ್ಞಾನಿ ಆಲ್ಬರ್ಟ್​​ ಐನ್​​ಸ್ಟೀನ್ ಅವರು​​​ ದೇವರ ನಂಬಿಕೆ ಬಗ್ಗೆ ಬರೆದಿದ್ದ ಪತ್ರವೊಂದು ಬರೋಬ್ಬರಿ 2.9 ಮಿಲಿಯನ್​ ಡಾಲರ್​(₹20,58,56,500 ಕೋಟಿ)ಗೆ ಹರಾಜಾಗಿದೆ. 1954ರಲ್ಲಿ ಐನ್​​ಸ್ಟೀನ್​​​ ಬರೆದಿದ್ದ ಈ ಪತ್ರವನ್ನ ಗಾಡ್​​ ಲೆಟರ್​ ಎಂದೇ ಕರೆಯಲಾಗ್ತಿತ್ತು. ಕ್ರಿಸ್ಟೀಸ್​​ ರಾಕೆಫೆಲ್ಲರ್​ ಸೆಂಟರ್​​ನಲ್ಲಿ ನಡೆದ ಹರಾಜಿನಲ್ಲಿ ಈ ಪತ್ರ ಸುಮಾರು 1.5 ಮಿಲಿಯನ್ ಡಾಲರ್​​ಗೆ ಮಾರಾಟವಾಗಬಹುದು ಎಂದು ನಿರೀಕ್ಷಿಸಲಾಗಿತ್ತು. ಆದ್ರೆ ಊಹೆಗೂ ಮೀರಿ ಈ ಪತ್ರ ಬರೋಬ್ಬರಿ 20.5 ಕೋಟಿಗೆ ಸೇಲ್​ ಆಗಿದೆ.

ಜರ್ಮನ್​ ತತ್ವಜ್ಞಾನಿ ಎರಿಕ್​​ ಗಟ್​​ಕೈಂಡ್​ ಅವರ ಕೃತಿಯೊಂದಕ್ಕೆ ಪ್ರತಿಕ್ರಿಯೆಯಾಗಿ ಐನ್​​​ಸ್ಟೀನ್​ ಈ ಪತ್ರವನ್ನು ಬರೆದಿದ್ದರು. ವಿಜ್ಞಾನ ಹಾಗೂ ಧರ್ಮದ ನಡುವೆ ಚರ್ಚೆ ಬಂದಾಗಲೆಲ್ಲಾ ಈ ಪತ್ರ ಪ್ರಾಮುಖ್ಯತೆ ಪಡೆದಿದೆ. ಐನ್​​ಸ್ಟೀನ್​​ ಅವರ ನಿಧನಕ್ಕೆ ಒಂದು ವರ್ಷ ಮುಂಚೆ ಈ ಪತ್ರವನ್ನು ಬರೆದಿದ್ದರು. ತಮ್ಮದೇ ಹ್ಯಾಂಡ್​​ರೈಟಿಂಗ್​​ನಲ್ಲಿ ಜರ್ಮನ್​ ಭಾಷೆಯಲ್ಲಿ ಪತ್ರ ಬರೆದಿದ್ದ ಐನ್​​ಸ್ಟೀನ್​, ದೇವರ ನಂಬಿಕೆ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದರು. ನನಗೆ ದೇವರು ಅನ್ನೋ ಪದ, ಮಾನವನ ದೌರ್ಬಲ್ಯಗಳ ಅಭಿವ್ಯಕ್ತಿ ಹಾಗೂ ಉತ್ಪನ್ನವಿದ್ದಂತೆ. ಬೈಬಲ್​​ ಅನ್ನೋದು ಪುರಾತನ ದಂತಕಥೆಗಳ ಸಂಗ್ರಹ. ಈ ಬಗ್ಗೆ ಯಾವುದೇ ವ್ಯಾಖ್ಯಾನ ಬಂದರೂ, ಅದು ಎಷ್ಟು ಸೂಕ್ಷ್ಮವಾಗಿದ್ದರೂ ಕೂಡ ನನ್ನ ಅಭಿಪ್ರಾಯವನ್ನು ಬದಲಿಸಲು ಸಾಧ್ಯವಿಲ್ಲ ಎಂದು ಪತ್ರದಲ್ಲಿ ಬರೆದಿದ್ರು.

ತನ್ನ ಯಹೂದಿ ಧರ್ಮದ ಬಗ್ಗೆ ಮಾತನಾಡಿದ್ದ ಐನ್​​​ಸ್ಟೀನ್​, ಅದೂ ಕೂಡ ಎಲ್ಲಾ ಧರ್ಮಗಳಂತೆಯೇ ಪುರಾತನ ಮೂಢನಂಬಿಕೆಗಳ ಮತ್ತೊಂದು ಅವತಾರ ಎಂದಿದ್ದರು. ಐನ್​​ಸ್ಟೀನ್​ ಅವರ ಪತ್ರಗಳನ್ನ ಹರಾಜು ಹಾಕುತ್ತಿರುವುದು ಇದೇ ಮೊದಲೇನಲ್ಲ. ತನ್ನನ್ನು ಭೇಟಿಯಾಗಲು ನಿರಾಕರಿಸಿದ್ದ ಇಟಲಿಯ ಕೆಮಿಸ್ಟ್ರಿ ವಿದ್ಯಾರ್ಥಿಯೊಬ್ಬನಿಗೆ ಐನ್​ಸ್ಟೀನ್​ ಬರೆದಿದ್ದ ಪತ್ರ ಕಳೆದ ವರ್ಷ 6,100 ಡಾಲರ್​( ಸುಮಾರು ₹4 ಲಕ್ಷ)ಕ್ಕೆ ಮಾರಾಟವಾಗಿತ್ತು.

ಹಾಗೇ 1928ರಲ್ಲಿ ಐನ್​​ಸ್ಟೀನ್,​​​ ಥಿಯರಿ ಆಫ್​ ರಿಲೇಟಿವಿಟಿಯ ಮೂರನೇ ಹಂತದ ಬಗ್ಗೆ ಬರೆದಿದ್ದ ಟಿಪ್ಪಣಿಯೊಂದು 103,000 ಡಾಲರ್​ (ಸುಮಾರು ₹73 ಲಕ್ಷ) ಕ್ಕೆ ಸೇಲ್ ಆಗಿತ್ತು.
ಅಲ್ಲದೆ ಕಳೆದ ವರ್ಷ, ಸುಖೀ ಜೀವನದ ಬಗ್ಗೆ ಐನ್​​ಸ್ಟೀನ್​ ನೀಡಿದ್ದ ಸಲಹೆಯ ನೋಟ್​ವೊಂದು 1.56 ಮಿಲಿಯನ್​ ಡಾಲರ್​(ಸುಮಾರು ₹11 ಕೋಟಿ) ಗೆ ಹರಾಜಾಗಿತ್ತು. ಈ ನೋಟ್​​ನಲ್ಲಿ ಐನ್​ಸ್ಟೀನ್​​ ಒಂದೇ ವಾಖ್ಯದಲ್ಲಿ ಸುಖೀ ಜೀವನದ ಸೂತ್ರವನ್ನ ಹೇಳಿದ್ದರು. ಯಶಸ್ಸಿನ ಹಂಬಲ ಹಾಗೂ ಅದರ ಜೊತೆ ಬರುವ ಚಡಪಡಿಕೆಗಿಂತ, ಶಾಂತಿಯುತವಾದ ಹಾಗೂ ವಿನಮ್ರವಾದ ಜೀವನ ಹೆಚ್ಚು ಸಂತೋಷ ತರುತ್ತದೆ ಎಂದು ಐನ್​ಸ್ಟೀನ್​​ ಬರೆದಿದ್ದರು.