ಚಕ್ಕರ್ ಹಾಕೋ ವಿದ್ಯಾರ್ಥಿಗಳಿಗೆ ಶಿಕ್ಷಣ ಇಲಾಖೆಯಿಂದ ಶಾಕ್..!

ಬೆಂಗಳೂರು: ಪೋಷಕರು ವಿದ್ಯಾರ್ಥಿಗಳನ್ನು ಕಾಲೇಜಿಗೆ ಕಳುಹಿಸಿದ್ದರೂ, ಅದೆಷ್ಟೋ ವಿದ್ಯಾರ್ಥಿಗಳು ತರಗತಿಗೆ ಹಾಜರಾಗದೇ ಚಕ್ಕರ್ ಹಾಕುತ್ತಿರುತ್ತಾರೆ. ಆದ್ರೆ, ಇನ್ಮುಂದೆ ಸರ್ಕಾರಿ ಶಾಲಾ-ಕಾಲೇಜ್ ವಿದ್ಯಾರ್ಥಿಗಳನ್ನು ತರಗತಿಗಳಿಗೆ ಕಟ್ಟಿ ಹಾಕಲು ಶಿಕ್ಷಣ ಇಲಾಖೆ ಮಾಸ್ಟರ್ ಪ್ಲ್ಯಾನ್‌ ಮಾಡಿದೆ.

ಸರ್ವಶಿಕ್ಷಾ ಅಭಿಯಾನ ಹಾಗೂ ನ್ಯಾಷನಲ್ ಇನ್ಫಾರ್ಮೇಟಿಕ್ ಸೆಂಟರ್ ಸಹಯೋಗದಲ್ಲಿ ಶಿಕ್ಷಣ ಇಲಾಖೆ ವಿಶೇಷ ತಂತ್ರಾಂಶವನ್ನು ಅಭಿವೃದ್ಧಿ ಪಡಿಸುತ್ತಿದೆ. ಈ ನಿಟ್ಟಿನಲ್ಲಿ ಇನ್ಮುಂದೆ ತರಗತಿ ಹಾಜರಾತಿಯನ್ನು ಶಿಕ್ಷಣ ಇಲಾಖೆ ಆನ್‌ಲೈನ್‌ನಲ್ಲಿ ದಾಖಲಿಸಲು ಸಜ್ಜಾಗಿದೆ.

ಹಾಜರಾತಿ ಪರಿಶೀಲಿಸಲು ಮೊಬೈಲ್ ಆಪ್ಯ್ ರೆಡಿ

ಹಾಜರಾತಿಯನ್ನು ಪರಿಶೀಲಿಸುವ ಪ್ರಕ್ರಿಯೆಗೆ ಮುಂದಿನ ವಾರದಿಂದಲೇ ಚಾಲನೆ ನೀಡಲು ಕ್ರಮ ಕೈಗೊಳ್ಳಲಾಗಿದ್ದು, ಹಾಜರಾತಿ ಪರಿಶೀಲಿಸಲು ಮೊಬೈಲ್ ಆಪ್ಯ್ ಕೂಡ ರೆಡಿಯಾಗಿದೆ. ಮೊದಲ ಹಂತದಲ್ಲಿ ನಗರದ ಇಂಟರ್‌ನೆಟ್ ಸೌಲಭ್ಯ ಹೊಂದಿರುವ ಕೆಲ ಶಾಲಾ ಕಾಲೇಜುಗಳಲ್ಲಿ ಪ್ರಾಯೋಗಿಕ ಪ್ರಯತ್ನ ನಡೆಸಲಾಗುತ್ತದೆ. ಎರಡನೇ ಹಂತದಲ್ಲಿ ರಾಜ್ಯದ 10 ಸಾವಿರ ಸರಕಾರಿ ಶಾಲೆಗಳಿಗೆ ಯೋಜನೆ ವಿಸ್ತರಣೆ ಮಾಡಲಾಗುತ್ತದೆ. ಇನ್ನು ಗ್ರಾಮೀಣ ಶಾಲೆಗಳಿಗೆ ಆಫ್‌ಲೈನ್ ಮೊಬೈಲ್ ಆ್ಯಪ್ ಮೂಲಕ ಅಪ್‌ಡೇಟ್ ಮಾಡಲು ಅವಕಾಶ ದೊರಯಲಿದೆ.

ಈ ಬಗ್ಗೆ, ಸರ್ವಶಿಕ್ಷಾ ಅಭಿಯಾನದ ಸಾರ್ವಜನಿಕ ಅಧಿಕಾರಿ ಮಾಹಿತಿ ನೀಡಿದ್ದು, ರಾಜ್ಯದಲ್ಲಿ 58,939 ಸರಕಾರಿ ಶಾಲೆಗಳಿದ್ದು ,  44,57,535 ವಿದ್ಯಾರ್ಥಿಗಳು ದಾಖಲಾಗಿದ್ದಾರೆ. ಹಾಜರಾತಿ ಗೊಂದಲವನ್ನು ತಪ್ಪಿಸಲು ಶಿಕ್ಷಣ ಇಲಾಖೆ ತಂತ್ರಜ್ಞಾನದ ಮೊರೆ ಹೋಗಿದೆ. ಅಲ್ಲದೇ ನಗರದ ಸಾರ್ವಜನಿಕ ಶಿಕ್ಷಣ ಇಲಾಖೆಯ ಕಚೇರಿಯಲ್ಲಿ ಆನ್ ಲೈನ್ ಹಾಜರಾತಿ ದಾಖಲಿಸುವ ವ್ಯವಸ್ಥೆ ಮಾಡಲಾಗಿದೆ ಅಂತ ಸಾರ್ವಜನಿಕ ಅಧಿಕಾರಿ ತಿಳಿಸಿದ್ದಾರೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv