ಪ್ರಚಾರದಲ್ಲಿ ಸೇನೆಯ ಪ್ರಸ್ತಾಪ, ಶೀಘ್ರದಲ್ಲೇ ನಿರ್ಧಾರ ಕೈಗೊಳ್ಳಲಿದೆ ಆಯೋಗ..!

ನವದೆಹಲಿ: ಸದ್ಯ ಚುನಾವಣೆಯ ಪ್ರಚಾರದಲ್ಲಿ ಹೆಚ್ಚು ಸದ್ದು ಮಾಡ್ತಿರೋದು ಭಾರತೀಯ ಸೇನೆಯ ವಿಚಾರ. ಅದರಲ್ಲೂ ಇತ್ತಿಚಿಗೆ ಪುಲ್ವಾಮಾ ದಾಳಿಗೆ ಪ್ರತೀಕಾರವಾಗಿ ನಡೆದ ಬಾಲಾಕೋಟ್ ಏರ್ ಸ್ಟ್ರೈಕ್ ವಿಚಾರವನ್ನ ಚುನಾವಣೆಯ ಪ್ರಚಾರದಲ್ಲಿ ಬಳಸಿಕೊಳ್ಳಲಾಗ್ತಿದೆ ಅಂತ ವಿವಿಧ ಪಕ್ಷಗಳು ಆರೋಪಿಸಿದ್ದವು. ಚುನಾವಣಾ ಆಯೋಗ ಕೂಡ ಸೇನೆಯನ್ನ ಅಥವಾ ಸೇನೆಯ ಕಾರ್ಯಗಳನ್ನ ಚುನಾವಣಾ ಪ್ರಚಾರಕ್ಕೆ ಬಳಸಬಾರದು ಅಂತ ಹೇಳಿತ್ತು. ಆದ್ರೂ, ಹಲವೆಡೆ ಸೇನೆಯ ವಿಚಾರ ಪ್ರಸ್ತಾಪವಾಗುತ್ತಲೇ ಇದೆ. ಚುನಾವಣಾ ಆಯೋಗಕ್ಕೆ ಈ ಬಗ್ಗೆ ದೂರುಗಳೂ ಹೋಗುತ್ತಲೇ ಇವೆ.

ಇದೀಗ ಈ ವಿಚಾರವಾಗಿ ಚುನಾವಣಾ ಆಯೋಗ ತನ್ನ ನಿರ್ಧಾರವನ್ನ ಶೀಘ್ರದಲ್ಲೇ ತೆಗೆದುಕೊಳ್ಳಲಿದೆ ಅಂತ ಆಯೋಗದ ಉನ್ನತ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ. ಈಗಾಗಲೇ ಚುನಾವಣಾ ಆಯೋಗ ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್​, ಕೇಂದ್ರ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿಗೆ ಮೋದಿ ಜಿ ಕಿ ಸೇನಾ ಅನ್ನೋ ವಾಕ್ಯ ಬಳಕೆ ಮಾಡದಂತೆ ಎಚ್ಚರಿಕೆ ನೀಡಿದೆ.

ಅಲ್ಲದೆ, ಯಾವುದೇ ಪಕ್ಷಗಳು ಸೇನೆಯನ್ನ ತಮ್ಮ ಪ್ರಚಾರದಲ್ಲಿ ಬಳಸಿಕೊಳ್ಳುವಂತಿಲ್ಲ ಅಂತ ಚುನಾವಣಾ ಆಯೋಗ ಸೂಚನೆ ಹೊರಡಿಸಿತ್ತು. ಇದನ್ನ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಉಲ್ಲಂಘನೆ ಮಾಡಿದ್ದಾರೆ ಅಂತ ದೂರುಗಳು ಬಂದಿವೆ. ಈ ಹಿನ್ನೆಲೆಯಲ್ಲಿ ಇದರ ಬಗ್ಗೆಯೂ ಆಯೋಗ ವರದಿ ಕೇಳಿದೆ. ಸದ್ಯ ಈ ದೂರುಗಳನ್ನ ಪರಿಶೀಲಿಸಲಾಗುತ್ತಿದ್ದು, ಶೀಘ್ರದಲ್ಲೇ ನಿರ್ಧಾರ ಕೈಗೊಳ್ಳಲಾಗುತ್ತೆ ಅಂತ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.