ಹಿಮಾಚಲ ಪ್ರದೇಶ ಬಿಜೆಪಿ ಅಧ್ಯಕ್ಷರಿಗೆ 48 ಗಂಟೆ ಬ್ಯಾನ್‌ ಭಾಗ್ಯ

ಶಿಮ್ಲಾ: ಚುನಾವಣಾ ಪ್ರಚಾರದ ಅಬ್ಬರದಲ್ಲಿ ಬಾಯಿಗೆ ಬಂದಂತೆ ಹೇಳಿಕೆ ನೀಡುವ ರಾಜಕಾರಣಿಗಳಿಗೆ ಚುನಾವಣಾ ಆಯೋಗ ಬಿಸಿ ಮುಟ್ಟಿಸ್ತಾನೆ ಇದೆ. ಈ ಸಂಬಂದ ಈಗಾಗಲೇ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​, ಆಜಂಖಾನ್​, ಮಾಯಾವತಿ ಹಾಗೂ ಮನೇಕಾ ಗಾಂಧಿಗೆ ನಿಗದಿತ ಅವಧಿಯ ನಿಷೇಧ ಹೇರಿತ್ತು. ಇದೀಗ ಇದೇ ರೀತಿಯ ನಿಷೇದವನ್ನು ಇದೀಗ ಹಿಮಾಚಲ ಪ್ರದೇಶಕ್ಕೂ ವಿಸ್ತರಿಸಿದೆ. ರಾಹುಲ್ ಗಾಂಧಿ ಬಗ್ಗೆ ಆಕ್ಷೇಪಾರ್ಹ ಪದ ಬಳಸಿ ಮಾತನಾಡಿದ್ದ ಸತ್ಪಾಲ್ ಸತ್ತಿಗೆ ಚುನಾವಣಾ ಆಯೋಗ 48 ಗಂಟೆಗಳ ನಿಷೇಧ ಹೇರಿದೆ.
ಇವತ್ತು ಬೆಳಗ್ಗೆ 10 ಗಂಟೆಯಿಂದ ಮುಂದಿನ 48 ಗಂಟೆಗಳ ಕಾಲ ಯಾವುದೇ ಚುನಾವಣಾ ಪ್ರಚಾರ, ಸಾರ್ವಜನಿಕ ಸಭೆ, ಱಲಿಗಳು, ರೋಡ್‌ ಶೋ ಹಾಗೂ ಸಂದರ್ಶನಗಳಲ್ಲಿ ಭಾಗಿಯಾಗದಂತೆ ಆಯೋಗ ಸೂಚಿಸಿದೆ. ಸತ್ಪಾಲ್ ಸತ್ತಿ ಸೋಲಾನ್ ಜಿಲ್ಲೆಯ ರಾಮ್‌ಶೆಹರ್ ಗ್ರಾಮದಲ್ಲಿ ನಡೆಸಿದ್ದ ಸಭೆಯಲ್ಲಿ ರಾಹುಲ್ ಗಾಂಧಿ ವಿರುದ್ಧ ನಿಂದನಾತ್ಮಕ ಪದವನ್ನು ಬಳಸಿದ್ದರು. ಹೀಗಾಗಿ ಹಿಮಾಚಲ ಪ್ರದೇಶ ಕಾಂಗ್ರೆಸ್ ಕಾರ್ಯದರ್ಶಿ ರಜನೀಶ್ ಕಿಮ್ತಾ ಏಪ್ರಿಲ್ 16 ರಂದು ಚುನಾವಣಾ ಆಯೋಗಕ್ಕೆ ದೂರು ನೀಡಿದ್ದರು. ಈ ಸಂಬಂಧ ಸತ್ಪಾಲ್ ವಿರುದ್ಧ ಐಪಿಸಿ ಸೆಕ್ಷನ್‌ 294 ರ ಅಡಿ ಪೊಲೀಸರು ಎಫ್‌ಐಆರ್ ದಾಖಲಿಸಿದ್ದರು.