ಪಾಕಿಸ್ತಾನದ ಕರಾಚಿಗೆ ಅಪ್ಪಳಿಸಿದ ಧೂಳಿನ ಚಂಡಮಾರುತ: 5 ಸಾವು, ಹಲವರಿಗೆ ಗಾಯ..!

ಕರಾಚಿ: ಈಗಾಗಲೇ ಅನೇಕ ಸ್ವಯಂಕೃತ ಅಪರಾಧಗಳಿಂದ ಬಸವಳಿದಿರುವ ನೆರೆಯ ಪಾಕಿಸ್ತಾನಕ್ಕೆ ಈಗ ಪ್ರಕೃತಿ ವಿಕೋಪವೂ ಕಾಡತೊಡಗಿದೆ. ಧೂಳಿನ ಚಂಡಮಾರುತಕ್ಕೆ ಬಂದರುನಗರ ಕರಾಚಿ ಸೋಮವಾರ ಧೂಳೀಪಟಗೊಂಡಿದೆ. ಇದರಿಂದ ಕನಿಷ್ಠ 5 ಮಂದಿ ಸಾವಿಗೀಡಾಗಿದ್ದು, 36 ಮಂದಿ ಗಾಯಗೊಂಡಿದ್ದಾರೆ. ಧೂಳಿನ ಚಂಡಮಾರುತಕ್ಕೆ ಮಳೆಯೂ ಸಾಥ್​ ನೀಡಿದೆ, ಇದರಿಂದ ವಿದ್ಯುತ್​ ಕಂಬಗಳು, ಮರಗಳು ಧರೆಗೆ ಉರುಳಿವೆ. ಎಲ್ಲೆಂದರಲ್ಲಿ ಟ್ರಾಫಿಕ್​ ಜಾಮ್​​ಗಳಾಗಿವೆ ಎಂದು ರೇಡಿಯೋ ಪಾಕಿಸ್ತಾನ್​​ ವರದಿ ಮಾಡಿದೆ.

ಮನೆಯ ಛಾವಣಿಗಳು ಗಾಳಿಗೆ ಹಾರಿದ್ದು, 5 ವರ್ಷದ ಬಾಲಕಿ ಮತ್ತು ಮಗುವೊಂದು ಸಾವಿಗೀಡಾಗಿದೆ. ಒಂದು ಮದರಸಾ ಸೇರಿದಂತೆ 2 ಶಾಲೆಗಳು ಹಾಳಾಗಿವೆ. ಕೈದಿಗಳನ್ನು ಸಾಗಿಸುತ್ತಿದ್ದ ವಾಹನದ ಮೇಲೆ ಮರ ಬಿದ್ದಿದೆ. ರಕ್ಷಣಾ ತಂಡಗಳು ಸ್ಥಳಕ್ಕೆ ಧಾವಿಸಿವೆ. ಕರಾಚಿ-ಕ್ವೆಟ್ಟಾ ಹೆದ್ದಾರಿಯಲ್ಲಿ ಧೂಳಿನ ಚಂಡಮಾರುತಕ್ಕೆ 3 ಸಾವನ್ನಪ್ಪಿದ್ದಾರೆ.

ಸಿಂಧ್​ ಪ್ರಾಂತ್ಯದ ಮುಖ್ಯಮಂತ್ರಿ ಮುರದ್ ಅಲಿ ಶಾಹ್​​ ಎಲ್ಲ ಜಿಲ್ಲಾಧಿಕಾರಿಗಳಿಗೂ ಖಡಕ್​ ಸೂಚನೆ ನೀಡಿದ್ದು, ಸಂತ್ರಸ್ತ ಭಾಗಗಳಲ್ಲಿ ಯುದ್ಧೋಪಾದಿಯಲ್ಲಿ ಕಾರ್ಯಾಚರಣೆ ನಡೆಸುವಂತೆ ತಿಳಿಸಿದ್ದಾರೆ. ಶೆಡ್​​ಗಳಲ್ಲಿ ವಾಸಿಸುತ್ತಿರುವವರ ಬಗ್ಗೆ ಹೆಚ್ಚು ಗಮನ ಹರಿಸುವಂತೆ ಅವರು ಕಿವಿಮಾತು ಹೇಳಿದ್ದಾರೆ.

 

 


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv