ಹೆಲ್ಮೆಟ್ ಕೇಳಿದಕ್ಕೆ ಪೊಲೀಸರ ಮೇಲೆ ಹಿಗ್ಗಾಮುಗ್ಗಾ ಹಲ್ಲೆ..!

ದಾವಣಗೆರೆ: ಮದ್ಯವ್ಯಸನಿ​​ ಒಬ್ಬರು ಪೊಲೀಸರ ಮೇಲೆ ಹಲ್ಲೆ ನಡೆಸಿರೋ ಪ್ರಕರಣ ನಗರದ ಹದಡಿ ರೋಡ್ ಬಳಿ ನಡೆದಿದೆ.  ಎಎಸ್ಐ ಅಂಜಿನಪ್ಪ ಹಾಗೂ ಪೇದೆ ಸಿದ್ದೇಶ್ ಅವರು ಹದಡಿ ರಸ್ತೆಯಲ್ಲಿ ವಾಹನ ತಪಾಸಣೆ ಮಾಡುತ್ತಿದ್ದರು. ಈ ವೇಳೆ ರುದ್ರೇಶ್ ಎಂಬುವವರು ಮದ್ಯ ಸೇವನೆ ಮಾಡಿ, ಹೆಲ್ಮಟ್​ ಧರಿಸದೆ ಗಾಡಿ ಚಲಾಯಿಸುತ್ತಿದ್ದರು ಎನ್ನಲಾಗಿದೆ. ಈ ವೇಳೆ ಎಎಸ್ಐ ಅಂಜಿನಪ್ಪ ಹಾಗೂ ಪೇದೆ ಸಿದ್ದೇಶ್ ಅವರು ರುದ್ರೇಶ್ ಅವರ ವಾಹನ ತಡೆದು ಪರಿಶೀಲನೆ ನಡೆಸಿದ್ದಾರೆ. ಇದರಿಂದ ಕುಪಿತಗೊಂಡ ರುದ್ರೇಶ್ ರಸ್ತೆ ಬದಿಯಲ್ಲಿ ಮಾರಾಟಕ್ಕಿಟ್ಟ ಮಡಕೆಗಳಿಂದ ಪೊಲೀಸರ ಮೆಲೆ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಈ ಘಟನೆ ಸ್ಥಳೀಯರ ಮೊಬೈಲ್​ನಲ್ಲಿ ಸೆರೆಯಾಗಿದ್ದು, ರುದ್ರೇಶ್ ಪೊಲೀಸರ ಮೇಲೆ ಮಡಕೆಯಿಂದ ಹಲ್ಲೆ ನಡೆಸಿದ್ದು ಮಾತ್ರವಲ್ಲದೇ, ಅವರನ್ನು ಬೆನ್ನತ್ತಿ ಎದೆ ಮೇಲಿನ ಅಂಗಿ ಹಿಡಿದೂ ಎಳೆದಾಡಿದ್ದಾರೆ, ನೂಕಾಟ ಕೂಡ ನಡೆಸಿದ್ದಾರೆ ಎನ್ನಲಾಗಿದೆ. ಜೊತೆಗೆ, ರೋಡಲ್ಲಿ ಪೊಲೀಸ್​ ಅಧಿಕಾರಿಯನ್ನು ಕೆಳಕ್ಕೆ ಕೆಡವಿ, ತಾನೂ ಬಿದ್ದು ದೊಡ್ಡ ಸೀನ್​ ಅನ್ನೇ ಕ್ರಿಯೇಟ್ ಮಾಡಿದ್ದಾರೆ. ಘಟನೆಗೆ ಸಂಬಂಧ ಪಟ್ಟಂತೆ ಕೆಟಿಜೆ ನಗರ ಪೊಲೀಸರು, ಸಿದ್ದರಾಮೇಶ್ವರ್ ಬಡಾವಣೆಯ ರುದ್ರೇಶ್​​ರನ್ನು ಬಂಧಿಸಿದ್ದು, ಆರೋಪಿ ಮೇಲೆ ಕರ್ತವ್ಯಕ್ಕೆ ಅಡ್ಡಿ ಮತ್ತು ಹಲ್ಲೆ ಹಿನ್ನೆಲೆಯಲ್ಲಿ ಸೆಕ್ಷನ್ 353, 333 ಅಡಿಯಲ್ಲಿ ಪೊಲೀಸರು ಕೇಸ್ ದಾಖಲಿಸುವ ಸಾಧ್ಯತೆ ಇದೆ.

 

 ನಿಮ್ಮ ಸಲಹೆ ಸೂಚನೆ ಮತ್ತು ಅಭಿಪ್ರಾಯಕ್ಕಾಗಿ ಸಂಪರ್ಕಿಸಿ:contact@firstnews.tv