ಮಂತ್ರಾಲಯದಲ್ಲಿ ಅಣ್ಣಾವ್ರ ಕುಟುಂಬ

ರಾಯಚೂರು: ಮಂತ್ರಾಲಯದ ರಾಘವೇಂದ್ರ ಮಠಕ್ಕೆ ಡಾ.ರಾಜಕುಮಾರ್ ಕುಟುಂಬ ಭೇಟಿ ನೀಡಿ ದರ್ಶನ ಪಡೆದಿದೆ. ರಾಘವೇಂದ್ರ ರಾಜಕುಮಾರ್, ವಿನಯ್ ರಾಜಕುಮಾರ್ ಮಠಕ್ಕೆ ಭೇಟಿ ನೀಡಿದ್ರು. ರಾಘವೇಂದ್ರ ರಾಜಕುಮಾರ್ ಉರುಳು ಸೇವೆ ಮಾಡಿ ರಾಯರ ದರ್ಶನ ಪಡೆದರು.
ರಾಯರ ದರ್ಶನ ಬಳಿಕ ಮಾತನಾಡಿದ ರಾಘವೇಂದ್ರ ರಾಜಕುಮಾರ್, ರಾಘವೇಂದ್ರ ಸ್ವಾಮಿ ದರ್ಶನದಿಂದ ನನ್ನ ಆರೋಗ್ಯ ಸುಧಾರಿಸಿದೆ. ಕಳೆದ ಬಾರಿ ಮಠಕ್ಕೆ ಬಂದಾಗ ನನ್ನಿಂದ ನಡೆಯಲು ಆಗುತ್ತಿರಲಿಲ್ಲ. ಆದರೆ ಈ ಬಾರಿ ರಾಯರ ದರ್ಶನದಿಂದ ಉರುಳು ಸೇವೆ ಮಾಡಿದ್ದೇನೆ. ಮುಂದಿನ ದಿನಗಳಲ್ಲಿ ಮಠದ ಅಂಗಳದಲ್ಲಿ ನಾನು ಓಡಾಡುತ್ತೇನೆ ಅಂತಾ ಹೇಳಿದ್ರು.

ರಾಯರ ಆಶೀರ್ವಾದದಿಂದ ನಮ್ಮ ಕುಟುಂಬ ಬೆಳೆದಿದೆ. ತಂದೆಯವರ ಮಾರ್ಗದರ್ಶನದಂತೆ ಹೊಸ ಕಾರ್ಯ ಆರಂಭಿಸುವಾಗ ಮಠಕ್ಕೆ ನಾವು ಬರುತ್ತೇವೆ. ಪುತ್ರ ವಿನಯ್ ನಟನೆಯ ಸಿನಿಮಾ ಸ್ಕ್ರಿಪ್ಟ್ ಪೂಜೆಗೆ ಆಗಮಿಸಿದ್ದೇವೆ ಅಂತಾ ಹೇಳಿದ್ರು.
ನಟ ಪುನೀತ್ ರಾಜಕುಮಾರ್ ಕಾರು ಅಪಘಾತ ವಿಚಾರವಾಗಿ ಮಾತನಾಡಿದ ಅವರು, ಘಟನೆಯಲ್ಲಿ ಅಪ್ಪುಗೆ ಏನೂ ಆಗಿಲ್ಲ, ಸಣ್ಣ ಅಪಘಾತ ನಡೆದಿದೆ, ಎಲ್ಲರೂ ಚೆನ್ನಾಗಿದ್ದಾರೆ ಅಂತಾ ಹೇಳಿದ್ರು.
ನಟ ವಿನಯ್ ರಾಜಕುಮಾರ್ ಮಾತನಾಡಿ, ನೂತನ ಸಿನಿಮಾ ಸ್ಕ್ರಿಪ್ಟ್ ಪೂಜೆಗಾಗಿ ಮಂತ್ರಾಲಯಕ್ಕೆ ಬಂದಿದ್ದೇವೆ. ಪುನೀತ್ ಚಿಕ್ಕಪ್ಪನ ಜೊತೆ ನಟಿಸುವ ಆಸೆಯಿದೆ, ಉತ್ತಮ ಕಥೆ ಸಿಕ್ಕಿದ್ರೆ ನಟಿಸುತ್ತೇನೆ. ನೂತನ ಸಿನಿಮಾ ಗ್ರಾಮಾಯಣ ಆಗಸ್ಟ್ ತಿಂಗಳಲ್ಲಿ ಸೆಟ್ಟೆರಲಿದೆ. ಹೀಗಾಗಿ ನಾಳೆ ಸಿನಿಮಾ ಸ್ಕ್ರಿಪ್ಟ್ ಪೂಜಾ ಕಾರ್ಯಕ್ರಮ ನಡೆಯಲಿದೆ ಅಂತಾ ಹೇಳಿದ್ರು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv