ಚೀನಾಕ್ಕೆ ಟ್ರಂಪ್ ಕಿಕ್, ನ್ಯೂಕ್ಲಿಯರ್ ಟೆಕ್ನಾಲಜಿ ಮಾರಾಟಕ್ಕೆ ನಿರ್ಬಂಧ..!

ವಾಷಿಂಗ್ಟನ್:  ವಿಸ್ತರಣಾವಾದಿ ಮನೋಸ್ಥಿತಿ ಹೊಂದಿರೋ ಕಮ್ಯುನಿಸ್ಟ್ ಚೀನಾಕ್ಕೆ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೊಂದು ಶಾಕ್ ನೀಡಿದ್ದಾರೆ. ತಾನೇ ದೊಡ್ಡ ಆರ್ಥಿಕ ಶಕ್ತಿ ಎಂದು ಪೋಸ್ ಕೊಡುತ್ತಾ ಭಾರತ ಸೇರಿದಂತೆ ಹಲವು ರಾಷ್ಟ್ರಗಳಿಗೆ ಮಗ್ಗುಲದ ಮುಳ್ಳಂತೆ ಕಾಡುತ್ತಿರುವ ಚೀನಾಕ್ಕೆ, ದೊಡ್ಡಣ್ಣ ಅಮೆರಿಕಾ ಸರಿಯಾಗಿಯೇ ಕಿವಿ ಹಿಂಡಿದ್ದಾರೆ. ಚೀನಾ ವಿರುದ್ಧ ಕಠಿಣ ಕ್ರಮ ಕೈಗೊಂಡಿರುವ ಟ್ರಂಪ್ ಆಡಳಿತ, ಚೀನಾಕ್ಕೆ ನಾಗರಿಕ ಬಳಕೆ ನ್ಯೂಕ್ಲಿಯರ್ ಟೆಕ್ನಾಲಜಿ ಮಾರಾಟ ಕುರಿತು ನಿರ್ಬಂಧ ಹೇರಿದೆ. 

ಈ ಮೂಲಕ ಚೀನಾ ಮತ್ತು ಅಮೆರಿಕಾ ನಡುವೆ ಮತ್ತೊಂದು ಸುತ್ತಿನ ಟೆನ್ಶನ್ ಶುರುವಾಗಿದೆ. ಚೀನಾಕ್ಕೆ ನಾಗರಿಕ ಬಳಕೆ ನ್ಯೂಕ್ಲಿಯರ್​ ತಂತ್ರಜ್ಞಾನ ಮಾರಾಟ ಮಾಡುವುದಕ್ಕೆ ದಿಗ್ಬಂಧನ ವಿಧಿಸಿದೆ. ನ್ಯೂಕ್ಲಿಯರ್​ ತಂತ್ರಜ್ಞಾನವನ್ನು ಸೇನೆ ಅಥವಾ ಅನಧಿಕೃತವಾದ ಉದ್ದೇಶಗಳಿಗೆ ಬಳಸುವುದನ್ನ ತಡೆಗಟ್ಟಲು ಯುಎಸ್ಎ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಕಳೆದ ತಿಂಗಳಷ್ಟೇ, ಅಧ್ಯಕ್ಷ ಟ್ರಂಪ್​ ಚೀನಾದ ಉತ್ಪನ್ನಗಳ ದರದ ಮೇಲೆ ಶೇ. 10ರಷ್ಟು ಹೆಚ್ಚುವರಿ ದರಗಳನ್ನು (ಅಂದ್ರೆ 200 ಶತಕೋಟಿ ಅಮೆರಿಕನ್​ ಡಾಲರ್​) ವಿಧಿಸಿದ್ದರು. ಇದಕ್ಕೆ ಪ್ರತೀಕಾರವಾಗಿ ಚೀನಾ ಸಹ ಅಮೆರಿಕಾದ ಉತ್ಪನ್ನಗಳ ಮೇಲೆ ಹೆಚ್ಚಿನ ದರ ವಿಧಿಸಿತ್ತು.

ಈಗ ಅಮೆರಿಕದ ನ್ಯೂಕ್ಲಿಯರ್​ ಕಡಿವಾಣದಿಂದ ಉಭಯ ರಾಷ್ಟ್ರಗಳ ನಡುವೆ ಮತ್ತೇನು ಟೆನ್ಶನ್​ ಶುರುವಾಗುವುದೋ ಎಂಬ ಆತಂಕ ಎದುರಾಗಿದೆ. ಜೊತೆಗೆ ನ್ಯೂಕ್ಲಿಯರ್​ ತಂತ್ರಜ್ಞಾನವನ್ನು ನಾಗರಿಕ ಉಪಯೋಗಕ್ಕೆ ಬಳಸುವ ಸಂಬಂಧ ಅಮೆರಿಕಾ ಮತ್ತು ಚೀನಾ ನಡುವೆ ಸಹಕಾರ ಒಪ್ಪಂದ ಜಾರಿಯಲ್ಲಿದೆ. ಆದ್ರೆ ಅದ್ರ ವ್ಯಾಪ್ತಿಯಾಚೆಗೆ, ಅನಧಿಕೃತವಾಗಿ ಚೀನಾ ಈ ತಂತ್ರಜ್ಞಾನ ಬಳಕೆ ಮಾಡುವ ಸಾಧ್ಯತೆ ಗೋಚರವಾಗಿದೆ. ಹಾಗಾಗಿ ಅಮೆರಿಕಾ ವತಿಯಿಂದ ಮಾರಾಟ ಪ್ರಮಾಣಕ್ಕೆ ಕಡಿವಾಣ ಹಾಕಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಅಮೆರಿಕದ ಇಂಧನ ಕಾರ್ಯದರ್ಶಿ ರಿಕ್​ ಪೆರ್ರಿ ತಿಳಿಸಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ. ಈಗಾಗಲೇ ದಕ್ಷಿಣ ಚೀನಾ ಕಡಲಲ್ಲಿ ಪಾರುಪತ್ಯಕ್ಕಾಗಿ ಚೀನಾ ಮತ್ತು ಅಮೆರಿಕಾ ನಡುವೆ ಬಿಸಿ ಬಿಸಿ ವಾತಾವರಣವಿದೆ. ಜೊತೆಗೆ ವಾಣಿಜ್ಯ ವ್ಯವಹಾರ ಕುರಿತೂ ಎರಡೂ ದೇಶಗಳು ಜಟಾಪಟಿ ನಡೆಸುತ್ತಿವೆ. ಈ ನಡುವೆ, ಅಮೆರಿಕಾದ ಈ ನಿರ್ಧಾರ ಚೀನಾಕ್ಕೆ ಬಿಗ್​ ಶಾಕ್ ನೀಡಿದೆ.