ಎಲ್ಲರೂ ಒಟ್ಟಿಗೆ ಸೇರಿ ಬಳ್ಳಾರಿ ಚುನಾವಣೆ ಎದುರಿಸುತ್ತೇವೆ: ಸಚಿವ ಡಿಕೆಶಿ

ಬೆಂಗಳೂರು: ಬಳ್ಳಾರಿ ಲೋಕಸಭಾ ಉಪ-ಚುನಾವಣೆ ಅಭ್ಯರ್ಥಿ ಆಯ್ಕೆ ವಿಚಾರವಾಗಿ ಬಳ್ಳಾರಿ ಶಾಸಕರ ಜೊತೆ ಕಾಂಗ್ರೆಸ್​ ಮುಖಂಡರು ಕೆಪಿಸಿಸಿ ಕಚೇರಿಯಲ್ಲಿ ಸಭೆ ನಡೆಸಿದರು. ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಮಾಜಿ ಸಿಎಂ, ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ನೇತೃತ್ವದಲ್ಲಿ ಅಭ್ಯರ್ಥಿ ಆಯ್ಕೆ ಸಂಬಂಧ ಮಹತ್ವದ ಸಭೆ ನಡೆಯಿತು. ಸಭೆಯಲ್ಲಿ ಬಳ್ಳಾರಿ ಉಸ್ತುವಾರಿ ಸಚಿವ ಡಿ.ಕೆ.ಶಿವಕುಮಾರ್, ಶಾಸಕ ಆನಂದ್ ಸಿಂಗ್, ಪರಮೇಶ್ವರ್ ನಾಯ್ಕ್, ತುಕಾರಾಂ, ನಾಗೇಂದ್ರ ಹಾಗೂ ಭೀಮಾನಾಯ್ಕ್, ಗಣೇಶ್ ಸೇರಿದಂತೆ ಹಲವರು ಪಾಲ್ಗೊಂಡಿದ್ದರು. ಆದರೆ ಲಾಡ್ ಸಹೋದರರು ಗೈರಾಗಿದ್ದರು. ಸಭೆ ನಡೆಸಿದ ಮುಖಂಡರು ಎಲ್ಲಾ ಶಾಸಕರ ಅಭಿಪ್ರಾಯ ಸಂಗ್ರಹಿಸಿದರು.

ಯಾರೇ ಅಭ್ಯರ್ಥಿಯಾದ್ರೂ ಒಟ್ಟಾಗಿ ಕೆಲಸ ಮಾಡಲು ಒಪ್ಪಿಗೆ:

ಸಭೆ ಮುಗಿದ ಬಳಿಕ ಮಾತನಾಡಿದ ಬಳ್ಳಾರಿ ಉಸ್ತುವಾರಿ ಸಚಿವ ಡಿ.ಕೆ.ಶಿವಕುಮಾರ್​, ಯಾರೇ ಅಭ್ಯರ್ಥಿಯಾದ್ರೂ ಎಲ್ಲರೂ ಒಟ್ಟಾಗಿ ಕೆಲಸ ಮಾಡಲು ಒಪ್ಪಿದ್ದಾರೆ. ಜೆಡಿಎಸ್ ಬೆಂಬಲದೊಂದಿಗೆ ಕಾಂಗ್ರೆಸ್ ಚುನಾವಣೆ ಎದುರಿಸಲಿದೆ. ಎಲ್ಲಾ ಶಾಸಕರು ಒಟ್ಟಿಗೆ ಬರಬೇಕು ಅಂತಾ ಪಕ್ಷ ಹೇಳಿರಲಿಲ್ಲ. ಆದ್ರೆ ಇವತ್ತು ಶುಭ ಘಳಿಗೆ ಬಂದಿದೆ. ಅನಿಲ್ ಲಾಡ್ ಒಬ್ಬರನ್ನ ಬಿಟ್ಟು ಬಳ್ಳಾರಿ ಜಿಲ್ಲೆಯ ಎಲ್ಲಾ ಕಾಂಗ್ರೆಸ್ ಶಾಸಕರು ಹಾಜರಿದ್ದರು. ನಾನು ಬಳ್ಳಾರಿಯ ಕಾಂಗ್ರೆಸ್ ಹಿರಿಯ ಮುಖಂಡರ ಜೊತೆ ಮಾತಾಡಿದ್ದೇನೆ. ಎಲ್ಲರೂ ಒಟ್ಟಾಗಿ ಚುನಾವಣೆ ಎದುರಿಸುತ್ತೇವೆ ಎಂದರು.
ಇನ್ನು, ಕೌರವರ ವಿರುದ್ಧ ಪಾಂಡವರ ಹೋರಾಟ ಎಂಬ ಶ್ರೀರಾಮುಲು ಹೇಳಿಕೆ ವಿಚಾರವಾಗಿ ಮಾತನಾಡಿ, ಪಾಂಡವರು ಗೆಲ್ಲುತ್ತೇವೆ ಅಂತಾ ಶ್ರೀರಾಮುಲು ಹೇಳ್ತಾರೆ. ಹಾಗಾದರೆ ಶ್ರೀರಾಮುಲು ಬಳ್ಳಾರಿ ಗ್ರಾಮೀಣ ಕ್ಷೇತ್ರ ಬಿಟ್ಟು ಹೋಗಿದ್ದು ಏಕೆ? ಇದನ್ನ ಮತದಾರರಿಗೆ ಹೇಳಲಿ ಅಂತಾ ಟಾಂಗ್​ ಕೊಟ್ರು.
ಇನ್ನು, ಎರಡು ತಿಂಗಳಲ್ಲಿ ಬಿಜೆಪಿ ಸರ್ಕಾರ ರಚನೆಯಾಗುತ್ತೆ ಎಂಬ ಆರ್.ಅಶೋಕ್ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿ, ಕುದುರೆ ವ್ಯಾಪಾರ ಮಾಡುವ ಬಗ್ಗೆ ಅಶೋಕ್ ಹೇಳಿದ್ದಾರೆ. ನಾವು ಕುದುರೆ ವ್ಯಾಪಾರ ಮಾಡುತ್ತೇವೆ. ಸರ್ಕಾರ ರಚಿಸುತ್ತೇವೆ ಎಂದು ಅವರೇ ಖಚಿತಪಡಿಸುತ್ತಿದ್ದಾರೆ. ಅವರಿಗೆ ಒಳ್ಳೆಯದಾಗಲಿ ಎಂದರು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv