‘ಚಂದ್ರಶೇಖರ್ ಬಿಜೆಪಿ ಅಭ್ಯರ್ಥಿಯಾಗೋದಕ್ಕೆ ನಮ್ಮೊಂದಿಗಿದ್ದ ಅಸಮಾಧಾನವೇ ಕಾರಣ’

ರಾಮನಗರ: ಕಾಂಗ್ರೆಸ್​ ನಾಯಕ ಲಿಂಗಪ್ಪ ಪುತ್ರ ಚಂದ್ರಶೇಖರ್, ಬಿಜೆಪಿಯಿಂದ ಸ್ಪರ್ಧಿಸೋದಕ್ಕೆ ನಮ್ಮೊಂದಿಗಿದ್ದ ಅಸಮಾಧಾನವೇ ಕಾರಣ. ಹಾಗಾಗಿಯೇ ಅವರು ಬಿಜೆಪಿ ಅಭ್ಯರ್ಥಿಯಾಗಿದ್ದಾರೆ ಎಂದು ಸಂಸದ ಡಿ.ಕೆ. ಸುರೇಶ್ ಹೇಳಿದ್ದಾರೆ.

ನಗರದಲ್ಲಿ ಫಸ್ಟ್ ನ್ಯೂಸ್​ನೊಂದಿಗೆ ಮಾತನಾಡಿದ ಸುರೇಶ್, ಚಂದ್ರಶೇಖರ್ ಬಿಜೆಪಿಯಿಂದ ಸ್ಪರ್ಧಿಸಿದ್ದಾರೆ. ಆದರೆ, ಅವರ ಪರ ಪ್ರಚಾರ ಮಾಡಲು ಅವರ ತಂದೆಯೇ ಹೋಗಲ್ಲ. ಪಕ್ಷದ ನಾಯಕರ ಸೂಚನೆಯಂತೆ ನಾವು ಮೈತ್ರಿ ಪಕ್ಷದ ಅಭ್ಯರ್ಥಿ ಪರ ಕೆಲಸ ಮಾಡುತ್ತಿದ್ದೇವೆ. ಡಿ.ಕೆ. ಶಿವಕುಮಾರ್ ಹಾಗೂ ಸಿಎಂ ಕುಮಾರಸ್ವಾಮಿ ಕೂಡಾ ಇಲ್ಲಿ ಬಂದು ಪ್ರಚಾರ ಮಾಡಲಿದ್ದಾರೆ. ಯಾರು ಏನೇ ಹೇಳಿದರೂ ಅನಿತಾ ಕುಮಾರಸ್ವಾಮಿ ಗೆಲುವು ಕಟ್ಟಿಟ್ಟ ಬುತ್ತಿ. ಈ ಬಾರಿ ಅತೀ ಹೆಚ್ಚು ಮತಗಳ ಅಂತರದಿಂದ ಅನಿತಾ ಕುಮಾರಸ್ವಾಮಿ ಗೆಲ್ಲಲಿದ್ದಾರೆ ಎಂದು ಡಿ.ಕೆ. ಸುರೇಶ್ ವಿಶ್ವಾಸ ವ್ಯಕ್ತಪಡಿಸಿದರು.

ಶ್ರೀರಾಮುಲು ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ..!
ಡಿ.ಕೆ.ಶಿವಕುಮಾರ್ ವಿರುದ್ಧ ಮಾತನಾಡುತ್ತಿರುವ ಶ್ರೀರಾಮುಲು ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ. ಪ್ರಚೋದನಾತ್ಮಕವಾಗಿ ಮಾತಾಡೋದನ್ನು ಶ್ರೀರಾಮುಲು ಮೊದಲು ನಿಲ್ಲಿಸಲಿ. ಮತದಾರರನ್ನು ಸೆಳೆಯಲು ಶ್ರೀರಾಮುಲು ಇಲ್ಲ ಸಲ್ಲದ ಆರೋಪ ಮಾಡ್ತಿದ್ದಾರೆ. ಅದು ಚುನಾವಣೆಯಲ್ಲಿ ಯಶಸ್ವಿಯಾಗೋದಿಲ್ಲ. ವಿ.ಸೋಮಣ್ಣ ಹಾಗೂ ಶ್ರೀರಾಮುಲು ಇಬ್ಬರೂ ಒಳ್ಳೆಯ ನಾಯಕರು. ಇವರಲ್ಲಿ ಯಾರು ಬೇಕಾದರೂ ಮುಖ್ಯಮಂತ್ರಿಯಾಗಲಿ ಎಂದು ಡಿ.ಕೆ ಸುರೇಶ್ ವ್ಯಂಗ್ಯವಾಡಿದರು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv