ನೆನಗುದಿಗೆ ಬಿತ್ತು ಜಿಲ್ಲಾ ಕ್ರೀಡಾಂಗಣದ ಕನಸು..!

ರಾಯಚೂರು: ಇದು ಕೋಟಿ ಕೋಟಿ ವೆಚ್ಚದ ಕಾಮಗಾರಿ, ಈ ಕಾಮಗಾರಿ ಕಂಪ್ಲೀಟ್ ಆಗಿದ್ರೆ ರಾಯಚೂರು ಜಿಲ್ಲೆಯ ಯುವ ಕ್ರೀಡಾ ಆಸಕ್ತರಿಗೆ ಅನುಕೂಲವಾಗುತ್ತಿತ್ತು. ಆದ್ರೆ ಅಪೂರ್ಣ ಕಾಮಗಾರಿಯನ್ನೇ ಚುನಾವಣಾ ಸಂದರ್ಭದಲ್ಲಿ ಪ್ರತಿಷ್ಠೆಗಾಗಿ ರಾಜಕಾರಣಿಗಳು ತರಾತುರಿಯಲ್ಲಿ ಉದ್ಘಾಟನೆ ಮಾಡಿ ಕೈಬಿಟ್ಟಿದ್ದಾರೆ. ಆದ್ರೆ ಈಗ ಚುನಾವಣೆ ಮುಗಿದ್ರೂ ಉಳಿದ ಕಾಮಗಾರಿ ಆರಂಭವಾಗಿಲ್ಲ. ಹೀಗಾಗಿ ಸದ್ಬಳಕೆ ಆಗಬೇಕಿದ್ದ ಈ ಯೋಜನೆ, ಈಗ ಅಪೂರ್ಣ ಕಾಮಗಾರಿಯಿಂದ ಯಾವುದಕ್ಕೂ ಬಳಕೆ ಆಗದೆ ಪುಂಡ ಪೋಕರಿಗಳ ಅಡ್ಡೆಯಾಗಿ ಮಾರ್ಪಡುತ್ತಿದೆ.
ಒಂದೆಡೆ ಅರ್ಧಂಬರ್ಧ ಕಾಮಗಾರಿ ಮಾಡಿ ಬಿಟ್ಟಿರುವ ದೃಶ್ಯ, ಇನ್ನೊಂದೆಡೆ ಅಲ್ಲಲ್ಲಿ ಬಿದ್ದಿರುವ ಎಣ್ಣೆ ಬಾಟಲಿಗಳು, ಇಸ್ಪೀಟ್ ಎಲೆಗಳು, ಮತ್ತೊಂದೆಡೆ ಮಲ-ಮೂತ್ರ ವಿಸರ್ಜನೆಗೆ ಬಳಕೆ ಆಗುತ್ತಿರುವ ಮೆಟ್ಟಿಲುಗಳು ಇದು ರಾಯಚೂರು ನಗರದ ಹೃದಯ ಭಾಗದಲ್ಲಿ ನಿರ್ಮಾಣ ಹಂತದಲ್ಲಿರುವ ಜಿಲ್ಲಾ ಕ್ರೀಡಾಂಗಣದ ಸದ್ಯದ ಚಿತ್ರಣ. ಹೌದು ಯುವಜನ ಕ್ರೀಡಾ ಇಲಾಖೆ, ಹೈದ್ರಾಬಾದ್ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಅನುದಾನದಲ್ಲಿ ಜಿಲ್ಲಾ ಕ್ರೀಡಾಂಗಣದ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿತ್ತು. ಅದರಂತೆ ಶೇಕಡಾ 60ರಷ್ಟು ಕಾಮಗಾರಿ ಪೂರ್ಣಗೊಂಡಿತ್ತು ಅಷ್ಟೇ. ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ಕಳೆದ ಬಾರಿಯ ಕಾಂಗ್ರೆಸ್ ಸರ್ಕಾರದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಸ್ಥಳೀಯ ಮುಖಂಡರು ತಮ್ಮ ಪ್ರತಿಷ್ಠೆಗಾಗಿ ನಿರ್ಮಾಣ ಹಂತದಲ್ಲಿದ್ದ ಅಪೂರ್ಣ ಕಾಮಗಾರಿಯನ್ನು ಉದ್ಘಾಟನೆ ಮಾಡಿ ಕೈತೊಳೆದುಕೊಂಡಿದ್ದಾರೆ. ನಂತರ ಚುನಾವಣೆ ಘೋಷಣೆ ಆಗುತ್ತಿದ್ದಂತೆ ನೀತಿ ಸಂಹಿತೆ ಹಿನ್ನೆಲೆ ಕಾಮಗಾರಿಯನ್ನು ನಿಲ್ಲಿಸಲಾಗಿತ್ತು. ಆದ್ರೆ ಈಗ ಚುನಾವಣೆ ಮುಗಿದು ಹೊಸ ಸರ್ಕಾರ ರಚನೆ ಆಗಿದೆ ಆದ್ರೂ ಕ್ರೀಡಾಂಗಣದ ಕಾಮಗಾರಿ ಆರಂಭವಾಗಿಲ್ಲ. ಸದ್ಯ ಅರ್ಧಕ್ಕೆ ನಿಂತು ಹೋಗಿರುವ ಕಾಮಗಾರಿಯನ್ನು ಪುನ ಆರಂಭಿಸಿ ಆದಷ್ಟು ಶೀಘ್ರದಲ್ಲಿ ಕಾಮಗಾರಿ ಮುಕ್ತಾಯಗೊಳಿಸಿ ಕ್ರೀಡಾ ಪಟುಗಳಿಗೆ ಸ್ಟೇಡಿಯಂ ಬಳಕೆಯಾಗುವಂತೆ ಮಾಡಬೇಕು ಅಂತಿದ್ದಾರೆ ಕ್ರೀಡಾ ಪಟುಗಳು.

ಆರು ತಿಂಗಳಲ್ಲಿ ಯೋಜನೆ ಕಂಪ್ಲೀಟ್​
ಸುಮಾರು ₹9.5 ಕೋಟಿ ವೆಚ್ಚದಲ್ಲಿ ನಿರ್ಮಿಸುತ್ತಿರುವ ರಾಯಚೂರು ಜಿಲ್ಲಾ ಕ್ರೀಡಾಂಗಣದಲ್ಲಿ  ₹1.98 ಕೋಟಿ ವೆಚ್ಚದಲ್ಲಿ ಬ್ಯಾಡ್ಮಿಂಟನ್, ಶೆಟಲ್ ಕಾಕ್ ಕೊರ್ಟ್ ನಿರ್ಮಿಸಲಾಗುತ್ತಿದ್ರೆ ₹2 ಕೋಟಿ ವೆಚ್ಚದಲ್ಲಿ ಬಾಸ್ಕೆಟ್ ಬಾಲ್, ವಾಲಿಬಾಲ್, ಕಬಡ್ಡಿ, ಖೋಖೊ ಕೊರ್ಟ್ ನಿರ್ಮಾಣ ಮಾಡಲಾಗುತ್ತಿದೆ. ಅಲ್ಲದೆ ಕ್ರೀಡಾಂಗಣದ ಒಳಾಂಗಣದಲ್ಲಿ ಜಿಮ್, ಈಜು ಕೋಳ ಕೂಡ ನಿರ್ಮಿಸಲಾಗುತ್ತಿದೆ. ಈಗಾಗಲೇ ಕೊಟ್ಯಾಂತರ ಹಣ ಖರ್ಚು ಮಾಡಿ ಕ್ರೀಡಾಂಗಣದ ಸುತ್ತಮುತ್ತ ಸ್ಟ್ಯಾಂಡ್ ಹಾಗೂ ಪೆವಿಲಿಯನ್ ರೇಡಿ ಆಗಿದ್ದು ಫೀನಿಷಿಂಗ್ ವರ್ಕ್, ಗ್ರೌಂಡ್ ಲೆವಲಿಂಗ್, ಸುಣ್ಣ ಬಣ್ಣ ಕೆಲಸ ಇನ್ನೂ ಬಾಕಿ ಇದೆ. ಉಳಿದಂತೆ ಎಲ್ಲಾ ಕಾಮಗಾರಿಗಳು ಇನ್ನು ಅರ್ಧಕ್ಕೆ ನಿಂತಿದ್ದು, ಮುಂದಿನ ಕಾಮಗಾರಿ ಆರಂಭಿಸಬೇಕಿದೆ. ಈ ಕುರಿತಂತೆ ಜಿಲ್ಲಾಧಿಕಾರಿ ಗೌತಮ್ ಬಗಾದಿ ಅವರನ್ನ ಕೇಳಿದ್ರೆ ಚುನಾವಣೆ ಬಂದಿದ್ದ ಕಾರಣ ಕಾಮಗಾರಿಯನ್ನು ಅರ್ಧಕ್ಕೆ ನಿಲ್ಲಿಸಲಾಗಿದೆ. ಬಾಕಿ ಉಳಿದಿರುವ ಕಾಮಗಾರಿಗಳನ್ನು ಆರಂಭಿಸಿ 6 ತಿಂಗಳ ಒಳಗಾಗಿ ಎಲ್ಲ ಕೆಲಸಗಳನ್ನು ಕಂಪ್ಲೀಟ್ ಮಾಡಿ ಕ್ರೀಡಾಂಗಣವನ್ನು ಬಳಸಲು ಮುಕ್ತಗೊಳಿಸಲಾಗುತ್ತೆ ಅಂತಾರೆ.
ಸದ್ಯ ಅರ್ಧಕ್ಕೆ ನಿಂತಿರುವ ಸ್ಟೇಡಿಯಂ ಅನೈತಿಕ ಚಟುವಟಿಕೆಗಳಿಗೆ ಬಳಕೆ ಆಗುತ್ತಿದೆ. ಜಿಲ್ಲಾಧಿಕಾರಿಗಳು ಹೇಳುವ ಪ್ರಕಾರ ಉಳಿದ ಕಾಮಗಾರಿ ತಕ್ಷಣಕ್ಕೆ ಆರಂಭಿಸಿದ್ರು ಕೂಡ ಎಲ್ಲಾ ಕಾಮಗಾರಿಗಳು 6 ತಿಂಗಳಲ್ಲಿ ಕಂಪ್ಲೀಟ್ ಆಗೋದು ಅನುಮಾನ ಎನ್ನಲಾಗುತ್ತಿದೆ. ಒಟ್ಟಿನಲ್ಲಿ ಹಿಂದುಳಿದ ಜಿಲ್ಲೆ ರಾಯಚೂರಿಗೊಂದು ಸುಸಜ್ಜಿತ ಕ್ರೀಡಾಂಗಣ ನಿರ್ಮಾಣ ಆಗುತ್ತಿರುವುದು ಈ ಭಾಗದ ಕ್ರೀಡಾಸ್ಕರಿಗೆ ಖುಷಿ ತಂದುಕೊಟ್ಟಿತ್ತು. ಆದ್ರೆ ಕಾಮಗಾರಿ ಅರ್ಧಕ್ಕೆ ನಿಂತಿದ್ದ ಕಾರಣ ನೀರಾಸೆಯುಂಟು ಮಾಡಿದೆ. ನೆನೆಗುದಿಗೆ ಬಿದ್ದಿರುವ ಸ್ಟೇಡಿಯಂನ ಅಪೂರ್ಣ ಕಾಮಗಾರಿಯನ್ನು ಆದಷ್ಟು ಶೀಘ್ರದಲ್ಲಿ ಪೂರ್ಣಗೊಳಿಸಿ ಕ್ರೀಡಾಪಟುಗಳಿಗೆ ಅನುಕೂಲ ಆಗುವಂತೆ ಮಾಡಬೇಕಾಗಿದೆ ಎನ್ನುವುದು ಸಾರ್ವಜನಿಕರ ಆಶಯ.

ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv