‘ರಮೇಶ್ ಜಾರಕಿಹೊಳಿ ಡಿಎನ್​ಎ ಕಾಂಗ್ರೆಸ್​ನದ್ದು, ಅವರಲ್ಲಿ ಹರಿಯುತ್ತಿರೋದು ಕಾಂಗ್ರೆಸ್ ರಕ್ತ‘

ಬೆಂಗಳೂರು: ರಮೇಶ್ ಜಾರಕಿಹೊಳಿ ಡಿಎನ್​ಎ ಕಾಂಗ್ರೆಸ್​ನದ್ದು. ಅವರಲ್ಲಿ ಕಾಂಗ್ರೆಸ್ ರಕ್ತ ಹರಿಯುತ್ತಿದೆ. ಲೋಕಸಭೆ ಫಲಿತಾಂಶದ ಬಳಿಕ ಎಲ್ಲದಕ್ಕೂ ಇತಿಶ್ರೀ ಬೀಳುತ್ತೆ. ಶಾಂತ ರೀತಿಯ ವಾತಾವರಣ ನಿರ್ಮಾಣವಾಗಲಿದೆ ಅಂತಾ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದಾರೆ. ರಮೇಶ್ ಜಾರಕಿಹೊಳಿ ರಾಜೀನಾಮೆ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ರಮೇಶ್ ಅವ್ರಿಗೆ ಪಕ್ಷದಿಂದ ಕೆಲವು ವಿಚಾರದಲ್ಲಿ ನೋವಾಗಿರಬಹುದು. ಆದರೆ ಪಕ್ಷ ಯಾವುದೇ ಅನ್ಯಾಯ ಮಾಡಿಲ್ಲ. ಅವರನ್ನ ಗೌರವದಿಂದಲೇ ನಡೆಸಿಕೊಂಡಿದ್ದೇವೆ. ಅವರು ವೈಯುಕ್ತಿಕ ಕಾರಣಕ್ಕೆ ರಾಜೀನಾಮೆ ನಿರ್ಧಾರ ತೆಗೆದುಕೊಂಡಿರಬಹುದು. ಆದರೆ ಅವರು ಬಿಜೆಪಿಯವರ ಕುಮ್ಮಕ್ಕಿಗೆ ಒಳಗಾಗದೆ, ಉತ್ತಮ ನಿರ್ಧಾರ ತೆಗೆದುಕೊಳ್ಳಬೇಕು ಅಂತಾ ಹೇಳಿದರು. ಅಲ್ಲದೇ, ಬಿಜೆಪಿಯ ಕೀಳುಮಟ್ಟದ ರಾಜಕಾರಣಕ್ಕೆ ಮೇ.23ರಂದು ಉತ್ತರ ಸಿಗಲಿದೆ ಅಂತಾ ಬಿಜೆಪಿ ನಾಯಕರ ವಿರುದ್ಧ ದಿನೇಶ್ ಗುಂಡೂರಾವ್ ವಾಗ್ದಾಳಿ ನಡೆಸಿದರು.

ಇದೇ ವೇಳೆ, ಡಾ.ಉಮೇಶ್ ಜಾಧವ್ ವಿರುದ್ದ ಹರಿಹಾಯ್ದ ದಿನೇಶ್ ಗುಂಡೂರಾವ್, ಜಾಧವ್ ಲೋಕಸಭಾ ಚುನಾವಣೆಯಲ್ಲಿ ಸೋಲುವುದು ಖಚಿತ. ಅವರು ಬಿಜೆಪಿ ಸೇರುವ ಮೂಲಕ ಕಾಂಗ್ರೆಸ್‌ ಕಾರ್ಯಕರ್ತರು, ಕ್ಷೇತ್ರದ ಜನರಿಗೆ ದ್ರೋಹ ಮಾಡಿದ್ದಾರೆ. ಹೀಗಾಗಿ ಅವರನ್ನು ಜನರೇ ಕ್ಷೇತ್ರದಿಂದಲೇ ಹೊರ ಹಾಕುತ್ತಾರೆ. ಚುನಾವಣಾ ಫಲಿತಾಂಶ ಬಂದ ಬಳಿಕ ಉಮೇಶ್ ಜಾಧವ್ ಚಿಂಚೋಳಿ ಕ್ಷೇತ್ರದಲ್ಲಿ ಉಳಿಯುವುದಿಲ್ಲ ಅಂತಾ ಭವಿಷ್ಯ ನುಡಿದರು.


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv