ಮೋದಿ ಭ್ರಷ್ಟ ಪ್ರಧಾನಿ, ಅವರಿಗೆ ಸೋಲಿನ ಭಯ ಕಾಡುತ್ತಿದೆ -ದಿನೇಶ್ ಗುಂಡೂರಾವ್

ಬೆಂಗಳೂರು: ದೇಶದಲ್ಲಿ ಮೋದಿಯವರಂತಹ ಭ್ರಷ್ಟ ಪ್ರಧಾನಿಯನ್ನು ನೋಡಿಲ್ಲ. ಅವರಿಗೆ ಸೋಲಿನ ಭಯ ಕಾಡುತ್ತಿದೆ ಅಂತಾ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ವಾಗ್ದಾಳಿ ನಡೆಸಿದ್ದಾರೆ.

ಸಂಕ್ರಾಂತಿ ಬಳಿಕ ಮೈತ್ತಿ ಸರ್ಕಾರವನ್ನು ಬಿಜೆಪಿ ಉರುಳಿಸಲಿದೆ ಎಂಬ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಬಿಜೆಪಿಯವರು ಮೊದಲಿಂದಲೂ ಡೆಡ್ ಲೈನ್ ಕೊಡುತ್ತಲೇ ಇದ್ದಾರೆ. ಹಿಂಬಾಗಿಲ ಮೂಲಕ ಸರ್ಕಾರ ರಚಿಸಲು ನಿರಂತರ ಪ್ರಯತ್ನಿಸ್ತಿದ್ದಾರೆ. ಅದನ್ನು ಬಿಟ್ಟು ಅವರು ಗೌರವಯುತ ವಿರೋಧಪಕ್ಷವಾಗಿ ಕೆಲಸ ಮಾಡುವುದು ಒಳ್ಳೆಯದು ಅಂತಾ ಹೇಳಿದರು.

ಪರಿಸ್ಥಿತಿ ಹೇಗೆ ಬರುತ್ತೋ ನೋಡೋಣ:
ಇದೇ ವೇಳೆ, ಲೋಕ ಚುನಾವಣೆಗೆ ಸೀಟು ಹಂಚಿಕೆ ವಿಚಾರವಾಗಿ ಮಾತನಾಡಿದ ಅವರು, ಸಂಕ್ರಾಂತಿ ಹಬ್ಬದ ಬಳಿಕ ಈ ಬಗ್ಗೆ ಕುಳಿತು ಚರ್ಚಿಸುತ್ತೇವೆ. ಯಾವುದೇ ಮಾನದಂಡದ ಬಗ್ಗೆ ನಾನು ಹೇಳಿಲ್ಲ. ಯಾರು ಸ್ಪರ್ಧಿಸಬೇಕೆಂಬುದಷ್ಟೇ ತೀರ್ಮಾನಿಸುತ್ತೇವೆ ಅಂತಾ ಹೇಳಿದರು. ಈಗಾಗಲೇ ಕೆಲ ಸಂಸದರು ಸೋನಿಯಾ ಗಾಂಧಿಯವರನ್ನು ಭೇಟಿ ಮಾಡಿ ಅವರ ಬೇಡಿಕೆಯನ್ನು ಇಟ್ಟಿದ್ದಾರೆ. ಅದು ತಪ್ಪು ಅಂತಾ ನಾನು ಹೇಳೋದಿಲ್ಲ. ಹಾಲಿ ಸಂಸತ್ ಸದಸ್ಯರನ್ನು ಬದಲಾಯಿಸುವುದರ ಬಗ್ಗೆ ಮಾತನಾಡಿಲ್ಲ. ಪರಿಸ್ಥಿತಿ ಹೇಗೆ ಬರುತ್ತೋ ನೋಡೋಣ. ಮೊದಲು ದೋಸ್ತಿ ಪಕ್ಷದ ಜೊತೆ ಒಟ್ಟಿಗೆ ಕುಳಿತು ಚರ್ಚೆ ಮಾಡಬೇಕು. ಕೆಲವೊಂದು ಸೂಕ್ಷ್ಮ ವಿಚಾರಗಳಿರುತ್ತೆ. ಎಲ್ಲವನ್ನೂ ಮಾಧ್ಯಮದ ಮುಂದೆ ಹೇಳಲು ಆಗುವುದಿಲ್ಲ ಅಂತಾ ಹೇಳಿದರು.

ಇದೇ ವೇಳೆ, ಮೈತ್ರಿ ಪಕ್ಷದಲ್ಲಿ ಏನೇ ಭಿನ್ನಾಭಿಪ್ರಾಯ ಇದ್ದರೂ ಕುಳಿತು ಮಾತನಾಡಬೇಕು. ನಮ್ಮ ಪಕ್ಷದವರಾಗಲಿ, ಅವರಾಗಲಿ ಬಹಿರಂಗವಾಗಿ ಮಾತನಾಡುವುದು ತಪ್ಪು. ನಮ್ಮಲ್ಲಿ ಎಲ್ಲಿಯೂ ಯಾವುದೇ ಅಸಮಾಧಾನವಿಲ್ಲ ಅಂತಾ ಹೇಳಿದರು. ಜೊತೆಗೆ ಮಂಡ್ಯ ಹಾಗೂ ಹಾಸನ ಎರಡರಲ್ಲಿ ಒಂದು ಕ್ಷೇತ್ರ ಕಾಂಗ್ರೆಸ್ಸಿಗೆ ಬಿಟ್ಟು ಕೊಡಬೇಕು ಎಂಬ ಮಾಜಿ ಸಚಿವ ಎ.ಮಂಜು ಹೇಳಿಕೆ ವೈಯಕ್ತಿಕ ವಿಚಾರ ಅಂತಾ ಹೇಳಿದರು.