ಶಿವಮೊಗ್ಗದಲ್ಲಿ ಬಿಜೆಪಿ ವರ್ಸಸ್ ಕಾಂಗ್ರೆಸ್..!

ಬೆಂಗಳೂರು: ರಾಮನಗರ ಕ್ಷೇತ್ರದ ಉಪಚುನಾವಣೆ ವಿಚಾರವಾಗಿ ಯಾರೂ ಕೂಡ ಪಕ್ಷದ ಶಿಸ್ತನ್ನು ಮೀರಬಾರದು ಅಂತಾ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಮುಖಂಡರಿಗೆ ಹಾಗೂ ಕಾರ್ಯಕರ್ತರಿಗೆ ಎಚ್ಚರಿಕೆ ನೀಡಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಮನಗರ ಕ್ಷೇತ್ರದಲ್ಲಿ ಜೆಡಿಎಸ್ ಬೆಂಬಲಿಸಲು ಪಕ್ಷ ತೀರ್ಮಾನಿಸಿದೆ. ಹಾಗಾಗಿ ಪಕ್ಷಕ್ಕೆ ವಿರುದ್ಧವಾಗಿ ನಡೆದುಕೊಂಡ್ರೆ ಕ್ರಮಕೈಗೊಳ್ಳಲಾಗುವುದು ಎಂದರು. ಶಿವಮೊಗ್ಗ ಲೋಕಸಭಾ ಉಪಚುನಾವಣೆಯಲ್ಲಿ ಅಭ್ಯರ್ಥಿ ಗೊಂದಲ ವಿಚಾರಕ್ಕೆ ಪ್ರತಿಕ್ರಿಯಿಸಿ, ಮೊನ್ನೆ ನಡೆದ ಚರ್ಚೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕಣಕ್ಕೆ ಇಳಿಸುವ ಬಗ್ಗೆ ತೀರ್ಮಾನ ಆಗಿದೆ. ಜೆಡಿಎಸ್ ಮಧು ಬಂಗಾರಪ್ಪ ಹೆಸರು ಪ್ರಸ್ತಾಪ ಮಾಡಿದೆ. ಶಿವಮೊಗ್ಗದಲ್ಲಿ ಬಿಜೆಪಿ ವರ್ಸಸ್ ಕಾಂಗ್ರೆಸ್ ಇದೆ. ಬಿಜೆಪಿಗೆ ಅಲ್ಲಿ ನೇರ ಎದುರಾಳಿ ಕಾಂಗ್ರೆಸ್. ಸ್ಥಳೀಯ ಮಟ್ಟದಲ್ಲಿ ಕಾಂಗ್ರೆಸ್ ಬಲಿಷ್ಠವಾಗಿದೆ. ಹೀಗಾಗಿ ಯಾವುದೇ ಗೊಂದಲ ಬೇಡ. ಕಾಂಗ್ರೆಸ್ ಅಭ್ಯರ್ಥಿಯೇ ಶಿವಮೊಗ್ಗದಲ್ಲಿ ಇರಲಿದ್ದಾರೆ ಅಂತಾ ಹೇಳಿದರು.

ಬಳ್ಳಾರಿ ಲೋಕಸಭಾ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಆಯ್ಕೆ ಕಗ್ಗಂಟು ವಿಚಾರದ ಬಗ್ಗೆ ಮಾತನಾಡಿ, ಬಳ್ಳಾರಿ ಕ್ಷೇತ್ರದ ಅಭ್ಯರ್ಥಿ ಆಯ್ಕೆಯಲ್ಲಿ ಯಾವುದೇ ಗೊಂದಲ್ಲ ಇಲ್ಲ. ನಾಳೆ ಕೆಪಿಸಿಸಿಯಲ್ಲಿ ಸಭೆ ಕರೆಯಲಾಗಿದೆ. ಕೆಲವರು ಊರಿನಲ್ಲಿ ಇಲ್ಲ. ಇನ್ನೆರಡು ದಿನಗಳಲ್ಲಿ ಅಭ್ಯರ್ಥಿ ಆಯ್ಕೆ ಅಂತಿಮವಾಗಲಿದೆ ಅಂತಾ ತಿಳಿಸಿದರು.

ರಫೇಲ್ ಯುದ್ಧ ವಿಮಾನ ಖರೀದಿ ಅವ್ಯವಹಾರ ಆರೋಪಕ್ಕೆ ಪ್ರತಿಕ್ರಿಯಿಸಿ, ಅಗಸ್ಟ್ 13ರಂದು ರಾಹುಲ್ ಗಾಂಧಿ ಬೆಂಗಳೂರಿಗೆ ಆಗಮಿಸುತ್ತಿದ್ದಾರೆ. ಹೆಚ್ಎಎಲ್ ಸಂಸ್ಥೆ ಕೊಡುಗೆ ಬಗ್ಗೆ ಸಂವಾದ ಕಾರ್ಯಕ್ರಮ ಆಯೋಜಿಸಲಾಗಿದೆ. ಈ ಕಾರ್ಯಕ್ರಮ ಹೆಚ್​ಎಎಲ್​ ಸಂಸ್ಥೆಯ ಹೊರಗೆ ನಡೆಯಲಿದೆ. ನಾವು ಸಂಸ್ಥೆ ಒಳಗೆ ಕಾರ್ಯಕ್ರಮ ಮಾಡ್ತಿಲ್ಲ. ನಾವು ಅನುಮತಿ ಕೊಡಲ್ಲ ಅಂತಾ ಹೆಚ್ಎಎಲ್ ಹೇಳಿದೆ. ಹೆಚ್​ಎಎಲ್​​ ಸಂಸ್ಥೆ ಕೊಡುಗೆಗಳ ಬಗ್ಗೆ ಒಂದು ಸಂವಾದ ಕಾರ್ಯಕ್ರಮ ಇದೆ. ಕಬ್ಬನ್ ಪಾರ್ಕ್ ಬಳಿ ಆಯೋಜಿಸಲು ಚಿಂತನೆ ನಡೆದಿದೆ. ಹೆಚ್ಎಎಲ್ ಸಿಬ್ಬಂದಿ, ನಿವೃತ್ತ ಸಿಬ್ಬಂದಿ ಸೇರಿ ಆಯ್ದ ಕೆಲವರು ಪಾಲ್ಗೊಳ್ಳಲಿದ್ದಾರೆ. ರಾಹುಲ್ ಗಾಂಧಿ ನೇತೃತ್ವದಲ್ಲಿ ಸಂವಾದ ನಡೆಯಲಿದೆ ಅಂತಾ ತಿಳಿಸಿದರು.