ನಾವು ದೆಹಲಿಗೆ ಹೋಗಿದ್ದ ಉದ್ದೇಶವೇ ಬೇರೆ: ದಿನೇಶ್​ ಗುಂಡೂರಾವ್​

ಬೆಂಗಳೂರು: ನಾವು ದೆಹಲಿಗೆ ಹೋಗಿದ್ದ ಉದ್ದೇಶವೇ ಬೇರೆ. ರಾಜ್ಯದ ರಾಜಕೀಯ ಬೆಳವಣಿಗೆಗಳ ಬಗ್ಗೆ ಚರ್ಚೆ ಮಾಡಲು ತೆರಳಿದ್ದೆವು. ಪಕ್ಷದ ಬೆಳವಣಿಗೆಗಳ ಬಗ್ಗೆ ಚರ್ಚಿಸಲು ಹೈಕಮಾಂಡ್ ಕರೆದಿತ್ತು. ಹಾಗಾಗಿ ನಾನು ಹಾಗೂ ಕೃಷ್ಣ ಭೈರೇಗೌಡ ದೆಹಲಿಗೆ ಹೋಗಿದ್ದೆವು. ಅಲ್ಲಿ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಬಗ್ಗೆ ಚರ್ಚೆ ನಡೆಯಲಿಲ್ಲ ಎಂದು ಫಸ್ಟ್ ನ್ಯೂಸ್​ಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿಕೆ ನೀಡಿದ್ದಾರೆ.

ಎಂ.ಬಿ ಪಾಟೀಲ್ ಭಿನ್ನಮತ ಚಟುವಟಿಕೆ ನಡೆಸಿಲ್ಲ
ಎಸ್.ಆರ್.ಪಾಟೀಲ್ ರಾಜೀನಾಮೆ ಬಗ್ಗೆ ಮಾತನಾಡಿದ ಅವರು, ತಮ್ಮ ವೈಯಕ್ತಿಕ ಕಾರಣಕ್ಕೆ ರಾಜೀನಾಮೆ ನೀಡಿದ್ದಾರೆ. ಈ ಬಗ್ಗೆ ನಾನು ಹೆಚ್ಚಿಗೆ ಮಾತನಾಡೋದಿಲ್ಲ ಅಂತಾ ಹೇಳಿದರು.
ಇನ್ನು ಎಂ.ಬಿ ಪಾಟೀಲ್ ಭಿನ್ನಮತ ಚಟುವಟಿಕೆ ನಡೆಸಿಲ್ಲ. ಪಕ್ಷ ವಿರೋಧಿ ಹೇಳಿಕೆಯನ್ನೂ ನೀಡಿಲ್ಲ. ಕೆಲವು ವಿಚಾರಗಳ ಬಗ್ಗೆ ನೋವು ವ್ಯಕ್ತಪಡಿಸಿದ್ದಾರೆ. ಸಚಿವ ಸ್ಥಾನ ಸಿಗದ ಕಾರಣ ಕೆಲವರು ಅಸಮಾಧಾನಗೊಂಡಿರೋದು ನಿಜ. ಆದರೆ ಎಲ್ಲರಿಗೆ ಅವಕಾಶ ಕೊಡಲು ಸಾಧ್ಯವಿಲ್ಲ. ದೊಡ್ಡ ಮಟ್ಟದ ಭಿನ್ನಮತ ಪಕ್ಷದಲ್ಲಿ ಇಲ್ಲ. ಒಂದೆರಡು ತಿಂಗಳಲ್ಲಿ ಸಂಪುಟ ವಿಸ್ತರಣೆ ವೇಳೆ ಆಗ ಎಲ್ಲವೂ ಸರಿ ಹೋಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮೊದಲಿನಿಂದಲೂ ಪರಮೇಶ್ವರ್ ಬೆಂಗಳೂರನ್ನು ಬಲ್ಲವರು
ತುಮಕೂರು ಜಿಲ್ಲೆಯ ಶಾಸಕ ಜಿ.ಪರಮೇಶ್ವರ್​ಗೆ ಬೆಂಗಳೂರು ನಗರಾಭಿವೃದ್ಧಿ ಖಾತೆ ನೀಡಿರುವ ಬಗ್ಗೆ  ಸಚಿವ ಕೆ.ಜೆ.ಜಾರ್ಜ್‌ ಅಸಮಾಧಾನ ವ್ಯಕ್ತಪಡಿಸಿರುವ ಬಗ್ಗೆ  ಮಾತನಾಡಿದ ಅವರು, ಮೊದಲಿನಿಂದಲೂ ಪರಮೇಶ್ವರ್ ಬೆಂಗಳೂರನ್ನ ಬಲ್ಲವರಾಗಿದ್ದಾರೆ. ಅವರ ಕೈಯಲ್ಲಿ ಈ ಖಾತೆಯನ್ನ ನಿಭಾಯಿಸೋದಕ್ಕೆ ಆಗೋದಿಲ್ಲ ಅಂತೇನಿಲ್ಲ. ಅವರಿಗೂ ಸಾಮರ್ಥ್ಯ ಇದೆ. ನಾವೆಲ್ಲರೂ ಅವರಿಗೆ ಸಹಕಾರ ಕೊಡುತ್ತೇವೆ ಎಂದರು.

ಸಮ್ಮಿಶ್ರ ಸರ್ಕಾರದಲ್ಲಿ ಕಾಂಗ್ರೆಸ್ ನಾಶವಾಗಿ ಹೋಗುತ್ತೆ ಎಂಬ ಶಾಸಕ ಡಾ. ಸುಧಾಕರ್ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಈ ರೀತಿ ಹೇಳಿಕೆ ನೀಡುವುದು ಸರಿಯಲ್ಲ. ಪಕ್ಷವನ್ನ ಕಟ್ಟುವ ವಿಚಾರ ಯೋಚನೆ ಮಾಡಬೇಕು. ಪಕ್ಷದ ಬಗ್ಗೆ ಸಕಾರಾತ್ಮಕವಾಗಿ ಯೋಚಿಸಬೇಕು. ಅದು ಬಿಟ್ಟು ಹೀಗೆ ಇಲ್ಲ ಸಲ್ಲದ ಹೇಳಿಕೆ ನೀಡೋದು ಸರಿಯಲ್ಲ. ಅವರ ಬಳಿಯೂ ಮಾತನಾಡಿದ್ದೇವೆ. ಎಲ್ಲವೂ ಸರಿ ಹೋಗಲಿದೆ ಎಂದು ಹೇಳಿದರು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv