ಧಾರವಾಡ ಕಟ್ಟಡ ಕುಸಿತ: ಮೃತರ ಸಂಖ್ಯೆ 19ಕ್ಕೆ ಏರಿಕೆ, 7 ದಿನಗಳ ಬಳಿಕ ರಕ್ಷಣಾ ಕಾರ್ಯ ಅಂತ್ಯ

ಧಾರವಾಡ: ಕಟ್ಟಡ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 19ಕ್ಕೆ ಏರಿಕೆಯಾಗಿದೆ. ಕೊನೇ ಹಂತದಲ್ಲಿ ಅಗ್ನಿಶಾಮಕ ದಳ ಸಿಬ್ಬಂದಿ ನಡೆಸಿದ ಕಾರ್ಯಾಚರಣೆಯಲ್ಲಿ ಕಟ್ಟಡದ ಅವಶೇಷಗಳ ಅಡಿ ಸಿಲುಕಿದ್ದ ಮತ್ತೊಂದು ಮೃತದೇಹ ಪತ್ತೆಯಾಗಿದೆ. ಸಹದೇವ್ ಸಾಳುಂಕೆ(53) ಎಂಬವರ ಮೃತದೇಹವನ್ನು ಸಿಬ್ಬಂದಿ ಹೊರಕ್ಕೆ ತೆಗೆದಿದ್ದಾರೆ. ಮೃತ ಸಹದೇವ್ ಧಾರವಾಡದ ಕಾಮಾಕ್ಷಿ ಕಾಲೋನಿ ನಿವಾಸಿ. ಇವರು ಸುಪರ್​ವೈಸರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಮಧ್ಯರಾತ್ರಿ 2.15ರ ಸುಮಾರಿಗೆ 19ನೇ ಮೃತದೇಹ ಪತ್ತೆಯಾಗಿದೆ. ಈ ವೇಳೆ ಸ್ಥಳದಲ್ಲಿ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು.

ಇನ್ನು 7 ದಿನಗಳ ಬಳಿಕ ರಕ್ಷಣಾ ಕಾರ್ಯಾಚರಣೆ ಇಂದು ಅಂತ್ಯಗೊಂಡಿದೆ. ಅಗ್ನಿಶಾಮಕ ದಳ, ಎಸ್.ಡಿ.ಆರ್.ಎಫ್, ಎನ್.ಡಿ.ಆರ್.ಎಫ್ ದಳದ ಸಿಬ್ಬಂದಿ ಹಗಲಿರುಳು ಸತತ 7 ದಿನಗಳ ಕಾಲ ಕಾರ್ಯಾಚರಣೆ ನಡೆಸಿದ್ರು. ಕಾರ್ಯಾಚರಣೆ ಬಳಿಕ ಅಗ್ನಿಶಾಮಕ ದಳದ ಮುಖ್ಯಸ್ಥ ವರದರಾಜ್ ಪ್ರತಿಕ್ರಿಯೆ ನೀಡಿದ್ದು, ಇದೂವರೆಗೂ ಒಟ್ಟು 76 ಜನರ ಕಾರ್ಯಾಚರಣೆ ಮೂಲಕ ಹೊರಕ್ಕೆ ತೆಗೆಯಲಾಗಿದೆ. 57 ಜನರನ್ನು ಜೀವಂತವಾಗಿ ರಕ್ಷಣೆ ಮಾಡಲಾಗಿದೆ, 19 ಜನ ಮೃತಪಟ್ಟಿದ್ದಾರೆ. ಜಾಗೂರಕತೆಯಿಂದ ರಕ್ಷಣಾ ಕಾರ್ಯಾಚರಣೆ ಮಾಡಿದ್ವಿ. ಮೃತದೇಹ ಅಂತ ನೋಡದೇ ಅದಕ್ಕೆ ಯಾವ ಪೆಟ್ಟು ಆಗದಂತೆ ಯಶಸ್ವಿಯಾಗಿ ಕಾರ್ಯಾಚರಣೆ ಮಾಡಿದ್ವಿ ಎಂದು ಹೇಳಿದ್ರು.

ಕಾಣೆಯಾದವರ ಹೆಸರು, ನೊಂದಾವಣೆ ಕೇಂದ್ರದಲ್ಲಿ ದಾಖಲಿಸಿದ್ದ ಹೆಸರುಗಳ ಪಟ್ಟಿ ಹಿಡಿದು ಕಾರ್ಯಾಚರಣೆ ಮಾಡಿದ್ದೇವೆ. ಇವತ್ತು ವೇಗವಾಗಿ ಕಾರ್ಯಾಚರಣೆ ಮಾಡಿದ್ದೇವೆ. ಸಾರ್ವಜನಿಕರು ಕೊಟ್ಟಿರೋ ಮಾಹಿತಿ ಪ್ರಕಾರ ಕಾರ್ಯಾಚರಣೆ ಮಾಡಿ ಜನರನ್ನ ರಕ್ಷಿಸಿದ್ದೇವೆ. ನಮ್ಮೆಲ್ಲಾ ಸಿಬ್ಬಂದಿ ಪರಿಶ್ರಮದಿಂದ, ಸಹಕಾರದಿಂದ ಬಹಳಷ್ಟು ಕೆಲಸ ಮಾಡಿದ್ದಾರೆ. ಧಾರವಾಡ ಜನರು ಅಷ್ಟೊಂದು ಚೆನ್ನಾಗಿ ಆತಿಥ್ಯ ನೀಡಿದ್ದಾರೆ. ಇಲ್ಲಿನ ಜನ ಸಹೃದಯ ಉಳ್ಳವರು. ನೀರು, ಹಣ್ಣು, ಊಟ, ತಿಂಡಿ ಎಲ್ಲವನ್ನೂ ಕೊಟ್ಟು ನಮಗೆ ಸಹಕರಿಸಿದ್ದಾರೆ. ಅವರ ಆತಿಥ್ಯ ಮರೆಯುವ ಹಾಗಿಲ್ಲ. ಧಾರವಾಡ ಜನರಿಗೆ ಹೃತ್ಪೂರ್ವಕ ಕೃತಜ್ಞತೆ ಹೇಳುತ್ತೇನೆ. ಮಾಧ್ಯಮದವರೂ ಸಹಕಾರ ಕೊಟ್ಟಿದ್ದಾರೆ ಎಂದು ಹೇಳಿದರು.


Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv