ಕಟ್ಟಡ ದುರಂತ: ಮೃತರ ಕುಟುಂಬಗಳಿಗೆ ₹ 5 ಲಕ್ಷ ಪರಿಹಾರ ನೀಡುವಂತೆ ಒತ್ತಾಯ

ಧಾರವಾಡ: ನಿರ್ಮಾಣ ಹಂತದ ಕಟ್ಟಡ ಕುಸಿತ ದುರಂತದಲ್ಲಿ ಮೃತಪಟ್ಟಿರುವ ಕುಟುಂಬಗಳಿಗೆ ತಲಾ ₹ 2 ಲಕ್ಷ ಪರಿಹಾರ ಹಣ ವಿತರಣೆ ಮಾಡಿದ್ದಕ್ಕೆ ಉತ್ತರ ಕರ್ನಾಟಕ ಹೋರಾಟಗಾರ, ಹೈಕೋರ್ಟ್ ನ್ಯಾಯವಾದಿ ಬಿ.ಡಿ. ಹಿರೇಮಠ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮೃತರ ಕುಟುಂಬಗಳಿಗೆ ₹5 ಲಕ್ಷ ಪರಿಹಾರ ಕೊಡದೇ ಇದ್ದರೆ ಚುನಾವಣೆ ಬಹಿಷ್ಕಾರ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ. ಈ ಬಗ್ಗೆ ಫಸ್ಟ್‌ನ್ಯೂಸ್‌ ಜತೆ ಮಾತನಾಡಿರುವ ಅವರು, ದಕ್ಷಿಣ ಕರ್ನಾಟಕ ಭಾಗದಲ್ಲಿ ದುರಂತ ಸಂಭವಿಸಿದರೆ ₹5 ಲಕ್ಷ ಕೊಡ್ತಾರೆ. ಉತ್ತರ ಕರ್ನಾಟಕದ ಜೀವಗಳಿಗೆ ಬೆಲೆ ಇಲ್ವಾ? ಎಂದು ಪ್ರಶ್ನಿಸಿದ್ರು. ಸಮಗ್ರ ಕರ್ನಾಟಕ ಹಿತದೃಷ್ಟಿಯಿಂದ ಎಲ್ಲರನ್ನೂ ಸಮನಾಗಿ ಕಾಣಬೇಕು. ಎಲ್ಲ ಕ್ಯಾಬಿನೆಟ್ ಮಿನಿಸ್ಟರ್ ಬಂದು‌ ಭೇಟಿ ‌ನೀಡಿದ್ದಾರೆ.

ಸುಲ್ವಾಡಿ ವಿಷ ಪ್ರಸಾದ ಮತ್ತು ಮಂಡ್ಯ ಬಸ್ ದುರಂತದಲ್ಲಿ ಸಾವಿಗೀಡಾದವರಿಗೆ ₹ 5 ಲಕ್ಷ ರೂ ಪರಿಹಾರ ಸರ್ಕಾರ ನೀಡಿದೆ. ಆದರೆ ಕಟ್ಟಡ ದುರಂತದಲ್ಲಿ ಸಾವಿಗೀಡಾದವರಿಗೆ ₹2 ಲಕ್ಷ ಕೊಟ್ಟು, ತಾರತಮ್ಯ ಮಾಡಿದ್ದಾರೆ. ಈ ಹಿನ್ನೆಲೆ ಚುನಾವಣೆ ಬಹಿಷ್ಕಾರ ಮಾಡುತ್ತೇವೆ. ಯಾವ ಜನಪ್ರತಿನಿಧಿಯೂ ಬೇಡ ಅಂತಾ ಈ ಭಾಗದ ಜನ ನೋಟಾ ಪ್ರಯೋಗ ಮಾಡಬೇಕಾಗುತ್ತದೆ. ಸರ್ಕಾರ ಚುನಾವಣಾ ನೀತಿ ಸಂಹಿತೆ ನೆಪ ಹೇಳೊದನ್ನು ನಿಲ್ಲಿಸಬೇಕು. ಸರ್ಕಾರದ ಮುಖ್ಯ ಕಾರ್ಯದರ್ಶಿಗಳ ಮೂಲಕ ಪರಿಹಾರ ನೀಡಬೇಕು. ಪರಿಹಾರ ನೀಡದೇ ಇದ್ದಲ್ಲಿ ತಾರತಮ್ಯ ಮಾಡಿದರೆ ಹೋರಾಟ ಅನಿವಾರ್ಯ ಎಂದು ಬಿ.ಡಿ ಹಿರೇಮಠ ಎಚ್ಚರಿಕೆ ನೀಡಿದರು.


Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv